ಜೆಡಿಎಸ್ ರಾಜ್ಯ ವಕ್ತಾರರಾಗಿ ಬಸವರಾಜ ಪಾದಯಾತ್ರಿ ನೇಮಕ :

ಯಲಹಂಕ : ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ)ದ ರಾಜ್ಯ ವಕ್ತಾರರನ್ನಾಗಿ ಯಲಹಂಕದ ದೊಡ್ಡಬೆಟ್ಟಹಳ್ಳಿಯ ಹಿರಿಯ ಜೆಡಿಎಸ್ ಮುಖಂಡರು, ಜೆಡಿಎಸ್ ಸೇವಾದಳ ರಾಜ್ಯಾಧ್ಯಕ್ಷ ಬಸವರಾಜು ಪಾದಯಾತ್ರಿ ಅವರನ್ನು ನೇಮಕ ಮಾಡಲಾಗಿದೆ.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾತೃ ಘಟಕದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧ್ಯಕ್ಷರು, ರಾಜ್ಯ ಘಟಕದ ವಿವಿಧ ವಿಭಾಗಗಳ ಅಧ್ಯಕ್ಷರು, ಕಾರ್ಯಧ್ಯಕ್ಷರು ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಬಸವರಾಜ ಪಾದಯಾತ್ರಿ ಅವರನ್ನು ರಾಜ್ಯ ವಕ್ತಾರರನ್ನಾಗಿ ನೇಮಕಾತಿ ಮಾಡಿರುವ ಆದೇಶ ಪತ್ರವನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರು, ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ನಾಡಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಧ್ಯಮ ಮುಖ್ಯಸ್ಥರಾದ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಸಚಿವರು, ರಾಜ್ಯ ಕಾರ್ಯಧ್ಯಕ್ಷರಾದ ಆಲ್ಕೋಡ್ ಹನುಮಂತಪ್ಪ, ಮಾಜಿ ಸಚಿವರು, ಹಿರಿಯ ಮಹಿಳಾ ಮುಖಂಡರಾದ ಲೀಲಾದೇವಿ ಆರ್. ಪ್ರಸಾದ್, ಮಾಜಿ ವಿಧಾನಪರಿಷತ್ ಸದಸ್ಯರು, ನಗರ ಅಧ್ಯಕ್ಷರಾಸ ಹೆಚ್.ಎಂ.ರಮೇಶ್ ಗೌಡ, ಮಹಿಳಾ ರಾಜ್ಯಾಧ್ಯಕ್ಷರಾದ ರಶ್ಮಿ ರಾಮೇಗೌಡ ಸೇರಿದಂತೆ ಮಾಜಿ ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಜೆಡಿಎಸ್ ವಿವಿಧ ವಿಭಾಗಗಳ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಮಹಾ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಧ್ಯಕ್ಷರುಗಳು, ಮಹಿಳಾ ಮುಖಂಡರಿದ್ದು, ಸಭೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಹಾಗೂ ಬಲವರ್ಧನೆಯ ಕುರಿತು ಚರ್ಚಿಸಿದರು. 

 ಇದೇ ವೇಳೆ ಜೆಡಿಎಸ್ ಮಹಿಳಾ ಮುಖಂಡರಾದ ವತ್ಸಲ್ ಕುಮಾರ್ ಮಹಾಪ್ರಧಾನ ಕಾರ್ಯದರ್ಶಿ ವೆಂಕಟೇಶಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಲಿಂಗರಾಜು ಎನ್.ಸಿ., ನರಸಯ್ಯ, ಜೆಡಿಎಸ್ ಸೇವಾದಳ ಜಿಲ್ಲಾಧ್ಯಕ್ಷರು, ಕಲ್ಬುರ್ಗಿ ಜಿಲ್ಲಾ ಜೆಡಿಎಸ್ ಸೇವಾದಳ  ವಿಭಾಗದ ವತಿಯಿಂದ ಬಸವರಾಜ ಪಾದಯಾತ್ರಿ ಅವರಿಗೆ ಸನ್ಮಾನಿಸಲಾಯಿತು.ಬಸವರಾಜ ಪಾದಯಾತ್ರಿ ಅವರ ಹಿನ್ನೆಲೆ :ಬಸವರಾಜ ಪಾದಯಾತ್ರಿ ಅವರು ಯಲಹಂಕ ಕ್ಷೇತ್ರದ ದೊಡ್ಡಬೆಟ್ಟಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಜನತಾ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು, 1983ರಲ್ಲಿ ಜನತಾ ಪರಿವಾರದ ಪ್ರಧಾನಿಯಾಗಿದ್ದ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು, ನೇಗಿಲು ಹೊತ್ತು ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಮನ ಸೆಳೆದಿದ್ದರು. ಬದಲಾದ ಕಾಲ ಘಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಜಾತ್ಯಾತೀತ ಜನತಾದಳದಲ್ಲಿ ಅಂದಿನಿಂದ, ಇಂದಿನವರೆಗೂ ಪಕ್ಷದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಆಪಾರ ಅನುಭವ ಹೊಂದಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಸವರಾಜ ಪಾದಯಾತ್ರಿ ಅವರು ರಾಜ್ಯದಾದ್ಯಂತ ಪ್ರವಾಸ ಮಾಡಿ, ಜೆಡೆಎಸ್ ಪಕ್ಷ ಸಂಘಟನೆಗಾಗಿ ಶ್ರಮಿಸಿರುವ ಹಿನ್ನೆಲೆ ಹೊಂದಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವಲ್ಲಿ ದೊಡ್ಡ ಪಾತ್ರ ವಹಿಸಿರುವ ಬಸವರಾಜ ಪಾದಯಾತ್ರಿ ಅವರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಬಹುದೊಡ್ಡ ಅಭಿಮಾನಿ ಬಳಗವಿದ್ದು, ಅಲ್ಲಿ ಇವರನ್ನು ಜೂನಿಯರ್ ದೇವೇಗೌಡ ಎಂದೇ ಸಂಭೋದಿಸುವ ಪರಿಪಾಠವಿದೆ. ಬಸವರಾಜ ಪಾದಯಾತ್ರಿ ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ನೇತೃತ್ವದಲ್ಲಿನ ಜೆಡಿಎಸ್ ಪ್ರಚಾರ ಕಾರ್ಯದಲ್ಲಿ ಹತ್ತು ವರ್ಷಗಳ ಸ್ಟಾರ್ ಕ್ಯಾಂಪೇನರ್ ಆಗಿ ಕೆಲಸ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಸೇವಾದಳದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಸವರಾಜ ಪಾದಯಾತ್ರಿ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಬೇಕೆಂಬ ಒತ್ತಾಯವನ್ನು ಉತ್ತರ ಕರ್ನಾಟಕದ ಜೆಡಿಎಸ್ ಮುಖಂಡರು ಹಲವು ಬಾರಿ ವ್ಯಕ್ತಪಡಿಸಿದ್ದು, ಇದೀಗ ಕೇಂದ್ರ ಸರ್ಕಾರದ ನಿಗಮ, ಮಂಡಳಿಯ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಇದರಲ್ಲಾದರೂ ಬಸವರಾಜ ಪಾದಯಾತ್ರಿ ಅವರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಉತ್ತರ ಕರ್ನಾಟಕದ ಜೆಡಿಎಸ್ ಪಕ್ಷದ ಮುಖಂಡರಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *