ಬಾಗಲೂರು-ಬೂದಿಗೆರೆ ರಸ್ತೆ ಗುಂಡಿ ಮುಚ್ಚಲು ಒತ್ತಾಯ : ರಸ್ತೆತಡೆ ನಡೆಸಿ ಹೋರಾಟದ ಎಚ್ಚರಿಕೆ :

ಬ್ಯಾಟರಾಯನಪುರ : ಕ್ಷೇತ್ರದ ಬಾಗಲೂರು- ಬೂದಿಗೆರೆ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ರಸ್ತೆ ಗುಂಡಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕ್ಷೇತ್ರದ ಬಿಜೆಪಿ ಮುಖಂಡರು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ನೇತೃತ್ವದಲ್ಲಿ ಗೋಪಾಲಪುರ ಗ್ರಾಮದ ಬಳಿ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಈ ವೇಳೆ ಎಚ್.ಸಿ.ತಮ್ಮೇಶ್ ಗೌಡ ಮಾತನಾಡಿ’ಬಾಗಲೂರು-ಬೂದಿಗೆರೆ ರಸ್ತೆ ಇತ್ತೀಚೆಗಷ್ಟೇ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಗುಂಡಿಬಿದ್ದು ಹಳೆಯ ಯಥಾಸ್ಥಿತಿಗೆ ತಲುಪಿದೆ, ಪ್ರತಿನಿತ್ಯ ಈ ರಸ್ತೆಯಲ್ಲಿ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿದ್ದು‌, ಪ್ರಾಣಹಾನಿ ಉಂಟಾಗುತ್ತಿವೆ. ಇದುವರೆಗೂ ಈ ರಸ್ತೆಯಲ್ಲಿ ಸರಿಸುಮಾರು ಹತ್ತು ಜನ ವಾಹನ ಸವಾರರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಆದರೂ ಸಹ ರಸ್ತೆ ಅಭಿವೃದ್ಧಿ ಪಡಿಸಿರುವ ಗುತ್ತಿಗೆದಾರನಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ, ಕ್ಷೇತ್ರದ ಶಾಸಕರಾಗಿರುವ ಸಚಿವ ಕೃಷ್ಣಬೈರೇಗೌಡ ಅವರಾಗಲಿ ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸುವ ಕಾಳಜಿ ತೋರದೆ ಜನರ ಪ್ರಾಣದ ಜೊತೆಗೆ ಚಿಲ್ಲಾಟವಾಡುತ್ತಿರುವುದು ದುರ್ದೈವದ ಸಂಗತಿ. ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡದಿದ್ದರೆ ರಸ್ತ ತಡೆ ನಡೆಸಿ ಉಗ್ರವಾದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ, ಗ್ರಾ.ಪಂ.ಸದಸ್ಯ ಮರಳುಕುಂಟೆ ನಾರಾಯಣಸ್ವಾಮಿ ಮಾತನಾಡಿ ‘ಬಾಗಲೂರು- ಬೂದಿಗೆರೆ ಮಾರ್ಗವಾಗಿರುವ ಈ ರಸ್ತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಂಪರ್ಕ ರಸ್ತೆಯೂ ಸಹ ಆಗಿದೆ, ಆದರೆ ಇದರ ಸ್ಥಿತಿ ಯಾವುದೋ ಕುಗ್ರಾಮದ ರಸ್ತೆಯಂತಿದೆ. ಕ್ಷೇತ್ರದ ಶಾಸಕರು, ಕಂದಾಯ ಸಚಿವರು ಆಗಿರುವ ಮಾನ್ಯ ಕೃಷ್ಣಬೈರೇಗೌಡ ಅವರು ‘ಮನೆ ಗೆದ್ದು ಮಾರು ಗೆಲ್ಲು’ ಎಂಬ ಗಾದೆ ಮಾತಿನಂತೆ ರಾಜ್ಯದ ವಿವಿದ ಜಿಲ್ಲೆಗಳನ್ನು ಸುತ್ತಿ ಕಂದಾಯ ಇಲಾಖೆಯ ಸುಧಾರಣೆ ಮಾಡುವುದರ ಜೊತೆಗೆ ನಿಮ್ಮದೇ ಸ್ವಂತ ಕ್ಷೇತ್ರದ ಜನರ ಅಳಲು, ಅಭಿವೃದ್ಧಿ, ಸುಧಾರಣೆ ಕಡೆಗೂ ಸಹ ಗಮನ ಹರಿಸಬೇಕು, ಕೆಲಸ ಮಾಡದ ಅಧಿಕಾರಿಗಳ ಮೇಲೆ ತೀಕ್ಷ್ಣ ಮಾತಿನ ಚಾಟಿ ಬೀಸುವ ತಾವು, ನಿಮ್ಮದೇ ಕ್ಷೇತ್ರದಲ್ಲಿನ‌ ಹದಗೆಟ್ಟ ರಸ್ತೆಗಳ ಸುಧಾರಣೆಗಾಗಿ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ ಅವರು ರೋಮ್ ಸಾಮ್ರಾಜ್ಯ ಹತ್ತಿ ಉರಿಯುತ್ತಿದ್ದಾಗ ಸಾಮ್ರಾಟ ನಿರೊ ಪಿಟೀಲು ಬಾರಿಸುತ್ತಿದ್ದ ಹಾಗೆ ಬ್ಯಾಟರಾಯನಪುರ ಕ್ಷೇತ್ರದ ಗತಿ ಆಗದಿರಲಿ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ದಾಸನಾಯಕ ನಹಳ್ಳಿ ಮುರಳಿ, ಕೃಷ್ಣಪ್ಪ, ಡಿ.ಎಂ.ನಾಗರಾಜ್, ಮಹದೇವಕೊಡಿಗೇಹಳ್ಳಿ ತಿಮ್ಮೇಗೌಡ, ಗೋಪಾಲಪುರ ನಾರಾಯಣಗೌಡ, ಚೊಕ್ಕನಹಳ್ಳಿ ನಾಗರಾಜ್, ನಟರಾಜ್, ಬಾಗಲೂರು ನವೀನ್, ಹರ್ಷ(ಸುನಿಲ್), ಎಂ.ಹೊಸಳ್ಳಿ ಆನಂದ್, ರವಿ, ಕಿರಣ್, ಮರಳುಕುಂಟೆ ನಾರಾಯಣಸ್ವಾಮಿ, ಮಂಜುನಾಥ್, ಪ್ರವೀಣ್ ಯಾದವ್, ಮುನಿರಾಜು, ಕೆಂಪಣ್ಣ, ಮಂಚಪ್ಪನಹಳ್ಳಿ ರಮೇಶ್, ಯಡಿಯೂರು ರಾಜಣ್ಣ, ಚಾಗಲೇಟಿ ಅನಿಲ್, ಮಾರಸಂದ್ರ ಮುನಿರಾಜು, ಮಾರೇನಹಳ್ಳಿ ಚಿಕ್ಕಪ್ಪಣ್ಣ, ರಾಜಣ್ಣ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau

Kogilu layout Yelahanka

9845085793

7349337989

Leave a Reply

Your email address will not be published. Required fields are marked *