












ಆರೋಗ್ಯದ ಬಗ್ಗೆ ನಿರಂತರ ಕಾಳಜಿಯಿರಲಿ : ನಾಗರೀಕರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸಲಹೆ
ಯಲಹಂಕ : ಜೀವನದಲ್ಲಿ ಆರೋಗ್ಯಕ್ಕಿಂತ ಅತ್ಯಮೂಲ್ಯ ವಾದುದು ಬೇರಿನ್ನೇನೂ ಇಲ್ಲ ಇದನ್ನು ಮನಗಂಡು ಉತ್ತಮ ಆರೋಗ್ಯಕ್ಕಾಗಿ ಪ್ರತಿಯಬ್ಬರು ನಿರಂತರ ಕಾಳಜಿ ವಹಿಸಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ನಾಗರೀಕರಿಗೆ ಕಿವಿಮಾತು ಹೇಳಿದರು.
ಯಲಹಂಕ ಕ್ಷೇತ್ರದ ರಾಜಾನುಕುಂಟೆಯಲ್ಲಿ ‘ವಿಶ್ವವಾಣಿ’ ಫೌಂಡೇಶನ್, ಸಪ್ತಗಿರಿ ಆಸ್ಪತ್ರೆ ಹಾಗೂ ರಾಜಾನುಕುಂಟೆ ಗ್ರಾ.ಪಂ.ಸಹಯೋಗದೊಂದಿಗೆ ಏರ್ಪಡಿಸಿದ್ದ ‘ಉಚಿತ ಆರೋಗ್ಯ ಶಿಬಿರ ಮತ್ತು ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಯಲಹಂಕ ಕ್ಷೇತ್ರದ ನಾಗರೀಕರ ಉತ್ತಮ ಆರೋಗ್ಯದ ದಿಸೆಯಲ್ಲಿ ‘ವಿಶ್ವವಾಣಿ’ ಫೌಂಡೇಶನ್ ಕ್ಷೇತ್ರದದಾದ್ಯಂತ ಉಚಿತ ಆರೋಗ್ಯ ಶಿಬಿರ ಆಯೋಜಿಸಲು ನಿರ್ಧರಿಸಿದ್ದು, ಇತ್ತೀಚೆಗೆ ಮೈಲಪ್ಪನಹಳ್ಳಿ ಗ್ರಾಮದಿಂದ ಉಚಿತ ಆರೋಗ್ಯ ಶಿಬಿರವನ್ನು ಆರಂಭಿಸಿದ್ದು, ಇದು ಎರಡನೆಯ ಶಿಬಿರವಾಗಿದೆ.
ಹಾಗೆಯೇ ವಿಶ್ವವಾಣಿ ಫೌಂಡೇಶನ್ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಪಡೆದ ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ ಸಹ ಆಯೋಜಿಸಲಾಗಿದೆ. ಶಾಸಕನಾದ ಆರಂಭದ ದಿನಗಳಲ್ಲಿ ಕಚೇರಿಯಲ್ಲಿ ಜನಸಂಪರ್ಕ ಮಾಡಿ ನಿರ್ಗಮಿಸಿದ ನಂತರ ಕ್ಷೇತ್ರದ ಹಲವು ಮಹಿಳೆಯರು ನಮ್ಮ ಧರ್ಮಪತ್ನಿ ವಾಣಿಶ್ರೀ ವಿಶ್ವನಾಥ್ ಅವರ ಬಳಿ ಬಂದು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದುದು ಕಂಡು ಬಂತು, ಈ ಮಹಿಳೆಯರಿಗಾಗಿ ನಾವೇ ಏಕೆ ಒಂದು ಫೌಂಡೇಶನ್ ಆರಂಭಿಸಿ ಸೇವೆ ಕೈಗೊಳ್ಳಬಾರದು ಎಂಬ ಚಿಂತನೆಯ ಫಲವಾಗಿ ಅಸ್ತಿತ್ವಕ್ಕೆ ಬಂದದ್ದೇ ‘ವಿಶ್ವವಾಣಿ’ ಫೌಂಡೇಶನ್. ಇದರ ಪೂರ್ಣ ಯಶಸ್ಸು ವಾಣಿಶ್ರೀ ವಿಶ್ವನಾಥ್ ಅವರಿಗೆ ಸಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರ, ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ, ಟೈಲರಿಂಗ್ ಮಿಶನ್ ಗಳ ವಿತರಣೆ, ಬ್ಯೂಟೀಶಿಯನ್ ತರಬೇತಿ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ವಿಶೇಷ ಚೇತನರಿಗೆ ನೆರವು ಮುಂತಾದ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬರಲಾಗಿದೆ. ಇಂದು ಸಹ ರಾಜಾನುಕುಂಟೆ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ, ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇ.85% ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಉಚಿತ ಔಷದಿ ವಿತರಣೆ, ವಿಶೇಷ ಚೇತನರಿಗೆ ಸಹಾಯಧನದ ಚೆಕ್ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳುತ್ತಿರುವ ಬಗ್ಗೆ ಸಂತೋಷವಿದೆ ಎಂದರು.
ವಿಶ್ವವಾಣಿ ಫೌಂಡೇಶನ್ ನ ಕಾರ್ಯದರ್ಶಿ ಡಾ.ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ವಿಶ್ವವಾಣಿ ಫೌಂಡೇಶನ್ ವತಿಯಿಂದ ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತಿದ್ದು, ಶಿಬಿರದ ಮೂಲಕ ಬಿ.ಪಿ., ಶುಗರ್ ಸೇರಿದಂತೆ ಎಲ್ಲಾ ಸಾಮಾನ್ಯ ರೋಗಗಳ ತಪಾಸಣೆ, ಇಸಿಜಿ, ಎಕೋ ಟೆಸ್ಟ್, ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವು, ಸಾಮಾನ್ಯ ಹೆರಿಗೆ ಅಥವಾ ಸಿಸೇರಿಯನ್ ಆಪರೇಷನ್ ಹೆರಿಗೆಗೆ ನೆರವು, ಉಚಿತ ಔಷದಿ ವಿತರಣೆ, ಹೊಲಿಗೆ ತರಬೇತಿ ಪಡೆದ 120 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು ಪ್ರಮಾಣ ಪತ್ರ ಪಡೆದ ಮಹಿಳೆಯರಿಗೆ ಎಸ್ ಆರ್ ವಿಶ್ವನಾಥ್ ಅವರ ಹುಟ್ಟುಹಬ್ಬದಂದು ಟೈಲರಿಂಗ್ ಮಿಶಿನ್ ಗಳನ್ನು ವಿತರಿಸಲಾಗುವುದು. ಹಾಗೆಯೇ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ದಿಸೆಯಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದಿಂದ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸ್ವ ಉದ್ಯೋಗ ಕೈಗೊಳ್ಳುವ ಮಹಿಳೇಯರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್, ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಭವಾನಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಗ್ರಾ.ಪಂ.ಸದಸ್ಯ ರಾದ ಆರ್.ಡಿ.ರಾಜಣ್ಣ, ನಾಗೇಶ್, ಸುಜಾತಮ್ಮ, ಹನುಮೇಗೌಡ, ವೆಂಕಟೇಶ್, ಮಮತಾ, ಪಿಡಿಓ ನಾಗರಾಜ್, ಪೀಪಲ್ಸ್ ಟ್ರಸ್ಟ್ ನ ಹರೀಶ್ ಉತ್ತಯ್ಯ, ರಾಮಸ್ವಾಮಿ, ಅಪ್ಪಣ್ಣಗೌಡ, ಮುಖಂಡರಾದ ರಘು, ಸಾದೇನಹಳ್ಳಿ ಪ್ರಕಾಶ್ ಗೌಡ, ಆರೋಗ್ಯ ಪ್ರಕೋಷ್ಠದ ಲತಾ ಚಂದ್ರಶೇಖರ್ ಸೇರಿದಂತೆ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಹಾಗೂ ಸೇವಾ ಸಿಬ್ಬಂದಿಗಳಿದ್ದರು.