ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ : ಕೃಷ್ಣಪ್ಪ ಎಂ.
ಬ್ಯಾಟರಾಯನಪುರ : ಸರ್ಕಾರದಿಂದ ದೊರೆಯುವ ಅನುದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಸೇರಿದಂತೆ ವಿವಿಧ ಹುಟ್ಟುವಳಿ ಮುಂತಾದ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಾತನೂರು ಗ್ರಾ.ಪಂ.ಅಧ್ಯಕ್ಷ ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳೆಯ ಬಡಾವಣೆಗಳಲ್ಲಿ ನೀರು, ರಸ್ತೆ, ಕಸ ವಿಲೇವಾರಿ ಸೇರಿದಂತೆ ಸಮರ್ಪಕ ಮೂಲಭೂತ ಸವಲತ್ತುಗಳನ್ನು ನೀಡಲಾಗಿದ್ದು, ಹೊಸದಾಗಿ ನಿರ್ಮಿಸಿರುವ ಕಂದಾಯ ಬಡಾವಣೆಗಳಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಪರಿಹರಿಸುವ ಕುರಿತು ಅಲ್ಲಿನ ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿ, ಅಗತ್ಯ ಕ್ರಮ ಕೈಗೊಳ್ಳಲು ಶ್ರಮಿಸಲಾಗುವುದು.
ಗ್ರಾಮಗಳಲ್ಲಿ ಸಂಗ್ರಹಿಸಿರುವ ಕಸದ ಶುಲ್ಕ, ದಂಡ ವಸೂಲಿ, ವಿಂಗಡಿಸಿರುವ ಕಸದಲ್ಲಿ ಸಂಗ್ರಹವಾಗಿರುವ ವಸ್ತುಗಳ ಮಾರಾಟ ಮುಂತಾದ ಕಾರ್ಯಗಳಿಂದ ಸುಮಾರು 7.82 ಲಕ್ಷ ರು.ಗಳ ಆದಾಯ ಬಂದಿದ್ದು, ಇದನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು.
ಗ್ರಾಮ ಪಂಚಾಯ್ತಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಮೀಸಲಿಡಲಾಗಿದೆ, ಆದರೆ ಜಾಗದ ವಿಚಾರದಲ್ಲಿ ಉಚ್ಛ ನ್ಯಾಯಾಲಯ ದಲ್ಲಿ ಪ್ರಕರಣ ಬಾಕಿಯಿದೆ, ಪ್ರಕರಣ ಇತ್ಯರ್ಥವಾದ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಲಾಗಿದ್ದು, ಆಯಾ ಗ್ರಾಮಗಳ ಅಭಿವೃದ್ಧಿಯ ಅಗತ್ಯಗಳ ಕುರಿತು ಸಾರ್ವಜನಿಕರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳಲ್ಲಿನ‌ ಅಂಶಗಳನ್ನು ಅವಲೋಕಿಸಿ, ಕ್ರಿಯಾ ಯೋಜನೆ ರೂಪಿಸಲಾಗಿದೆ. ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ಕ್ರಿಯಾಯೋಜನೆ ಅನುಷ್ಠಾನಕ್ಕೆ ಮುಂದಿನ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಗ್ರಾಮಸಭೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ 35 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರು.ಗಳ ಪ್ರೋತ್ಸಾಹ ಧನದ ಚೆಕ್, ಪ.ಜಾ/ಪ.ಪಂಗಡಗಳ ಮೂರು ವಿದ್ಯಾರ್ಥಿಗಳಿಗೆ ವ್ಯಾಸಂಗದ ಅನುಕೂಲತೆಗಾಗಿ ಲ್ಯಾಪ್‌ಟಾಪ್, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಹಾಯಧನದ ಚೆಕ್ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಗ್ರಾಮದ ನಿವಾಸಿಗಳಿಗೆ ಪ್ಲಾಸ್ಟಿಕ್ ಬಕೆಟ್ ಗಳನ್ನು ವಿತರಿಸಲಾಯಿತು.
ಗ್ರಾಮಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಜಹೇರ ತಸ್ನೀಮ್, ಸದಸ್ಯರಾದ ಮಾಲಾ ಎಂ., ಶಿವಣ್ಣ, ಮುನಿತಿಮ್ಮರಾಯಪ್ಪ, ನಾರಾಯಣಸ್ವಾಮಿ, ಮಾನಸ ಬಿ.ಆರ್., ಸುಶ್ಮಿತಾ ಎನ್., ಸುಜಾತ ಎಸ್.ಎಲ್., ಅಶ್ವಿನಿ ಕೆ.ಎನ್., ಪಿಡಿಓ ಮಮತಾ ಬಿ. ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

ಆರ್ ಹನುಮಂತು

9845085793

9035282296

7349337989

Leave a Reply

Your email address will not be published. Required fields are marked *