ಕೆಂಪೇಗೌಡರು ಐನೂರು ವರ್ಷಗಳ ಹಿಂದೆಯೇ ಬೆಂಗಳೂರನ್ನು ಇಂದಿನ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಕಟ್ಟಿದ್ದರು : ಎಸ್ ಆರ್ ವಿಶ್ವನಾಥ್  

ಯಲಹಂಕ : ‘ಇಂದಿನ ಸ್ಮಾರ್ಟ್‌ ಸಿಟಿ ಯೋಜನೆಗೆ ಪೂರಕವೆಂಬಂತೆ ಐನೂರು ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ಕಟ್ಟುವ ಮೂಲಕ ತೋರಿಸಿ ಕೊಟ್ಟವರು ನಾಡಪ್ರಭು ಕೆಂಪೇಗೌಡರುʼ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು.

ಕರ್ನಾಟಕ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟದ ಆಶ್ರಯದಲ್ಲಿ ಯಲಹಂಕ ಉಪನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೆಂಗಳೂರು ನಗರದ ಬೆಳವಣಿಗೆ ಕುರಿತು ದೂರದೃಷ್ಟಿ ಹೊಂದಿದ್ದ ಕೆಂಪೇಗೌಡರು, ರಸ್ತೆಗಳು, ದೇವಸ್ಥಾನ, ಕಲ್ಯಾಣಿ, ಕೆರೆಗಳು ಹಾಗೂ ಉದ್ಯಾನಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಎಲ್ಲಾ ಜಾತಿ-ಜನಾಂಗದವರಿಗಾಗಿ ವ್ಯಾಪಾರ ವಹಿವಾಟು ಮಾಡಲು ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಇಂತಹ ಮಹಾನ್‌ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳ ಬೇಕು ಎಂದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ ‘ಕೆಂಪೇಗೌಡರು ನಮ್ಮ ಸಮಾಜ, ಬೆಂಗಳೂರು ನಗರಕ್ಕೆ ವಿಶೇಷ ಕೊಡುಗೆ ನೀಡುವ ಮೂಲಕ ಇಡೀ ಜನತ್ತಿನಲ್ಲಿ ಬೆಂಗಳೂರನ್ನು ಗುರುತಿಸುವ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಇಂತಹ ಮಹಾಪುರುಷನನ್ನು ನಾವೆಲ್ಲರೂ ಸದಾ ಸ್ಮರಿಸಬೇಕು. 

ಒಕ್ಕೂಟದ ಸದಸ್ಯರು ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತ ಮನವಿಪತ್ರ ನೀಡಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಎಂ.ರಮೇಶ್‌ಗೌಡ, ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲಾ ಉಪ ನಿರ್ದೇಶಕ ಕೆ.ಜಿ. ಆಂಜಿನಪ್ಪ, ಒಕ್ಕೂಟದ ಅಧ್ಯಕ್ಷ ಶ್ರೀರಾಮಚಂದ್ರ, ಕಾರ್ಯದರ್ಶಿ ವಿ.ಸುರೇಶ್‌, ಉಪಾಧ್ಯಕ್ಷ ಸಿ.ಡಿ. ಪಾಪೇಗೌಡ, ಖಜಾಂಚಿ ಎಚ್‌.ವಿ.ಚಿಕ್ಕಹನುಮಂತೇ ಗೌಡ, ಸಹ ಕಾರ್ಯದರ್ಶಿ ಆರ್‌.ಬಿ.ಬೀರೇಗೌಡ, ಉಮಾ ಮೇಡಂ ವಾಗ್ದೇವಿ ಇಂಟರ್ನ್ಯಾಷನಲ್ ಇಂಗ್ಲಿಷ್ ಸ್ಕೂಲ್ ಬಾಲಾಜಿ ಲೇಔಟ್ ಯಲಹಂಕ ಬಿ.ಎಂ.ರಮೇಶ್, ಸುಹಾಸ್ ಸುಬ್ಬರಾಜು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 41 ಗಣ್ಯರಿಗೆ ನಾಡಪ್ರಭು ಕೆಂಪೇಗೌಡರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಯಲಹಂಕ ಮಿನಿ ವಿಧಾನಸೌಧದ ಆವರಣ ದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿರಥದಲ್ಲಿ ಇಟ್ಟು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅಂಬೇಡ್ಕರ್‌ ಭವನದವರೆಗೆ ಮೆರವಣಿಗೆ ನಡೆಸಲಾಯಿತು.

Leave a Reply

Your email address will not be published. Required fields are marked *