ಜಂಟಿ ಸಹಭಾಗಿತ್ವದಲ್ಲಿ ಜಾಗತಿಕ ಮಾರುಕಟ್ಟೆಗೆ ಐಷಾರಾಮಿ ಎಲೆಕ್ಟ್ರಿಕ್ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ ಗಳ ಸರಣಿಯನ್ನು ಬಿಡುಗಡೆ ಮಾಡಿದ ಕೈನೆಟಿಕ್ ಗ್ರೀನ್ ಮತ್ತು ಇಟಲಿಯ ಟೊನಿನೊ ಲ್ಯಾಂಬೋರ್ಗಿನಿ

ಈ ಸೊಗಸಾದ ಸರಣಿಯು ಇಟಾಲಿಯನ್ ವಿನ್ಯಾಸ ಮತ್ತು ಭಾರತೀಯ ಆವಿಷ್ಕಾರದ ಸಮ್ಮಿಲನದ ಮೂಲಕ ರೂಪುಗೊಂಡಿದೆ

ಬೆಂಗಳೂರು, ಭಾರತ – ಜುಲೈ 21, 2025 – ಭಾರತದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೊಲ್ಯೂಷನ್ಸ್ ಲಿಮಿಟೆಡ್ ಮತ್ತು ಇಟಲಿಯ ಟೊನಿನೊ ಲ್ಯಾಂಬೋರ್ಗಿನಿ ಸಂಸ್ಥೆಗಳು ಜಂಟಿಯಾಗಿ ಇಂದು ಜಾಗತಿಕ ಮಾರುಕಟ್ಟೆಗೆ ತಮ್ಮ ವಿಶೇಷವಾದ, ಸೊಗಸಾದ ಮತ್ತು ಅತ್ಯಾಧುನಿಕ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ಗಳ ಸರಣಿಯನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ.

ಸೊಗಸಾಗಿ ವಿನ್ಯಾಸಗೊಳಿಸಿರುವ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ಗಳು ಐಷಾರಾಮಿ ಸಾರಿಗೆ ವಿಭಾಗದಲ್ಲಿ ಹೊಸ ಮಾನದಂಡ ಹಾಕಿಕೊಡಲಿವೆ. ಈ ಮೂಲಕ ಕೈನೆಟಿಕ್ ಗ್ರೀನ್‌ ಸಂಸ್ಥೆಯು ಈ ವಿಶಿಷ್ಟ 4 ವೀಲರ್ ಸಾರಿಗೆ ವಿಭಾಗಕ್ಕೆ ಪ್ರವೇಶ ಮಾಡಿದೆ ಮತ್ತು ಈ ಮೂಲಕ ಭಾರತದ ವಿದ್ಯುತ್ ವಾಹನ ತಯಾರಕರೊಬ್ಬರು ಜಾಗತಿಕ ಮಟ್ಟಕ್ಕೆ ವಿಸ್ತರಣೆ ಹೊಂದಿದಂತಾಗಿದೆ. ಟೊನಿನೊ ಲ್ಯಾಂಬೋರ್ಗಿನಿಯ ಇಟಾಲಿಯನ್ ವಿನ್ಯಾಸ ಮತ್ತು ಕೈನೆಟಿಕ್ ಗ್ರೀನ್‌ ನ ಎಲೆಕ್ಟ್ರಿಕ್ ವಾಹನ ಪರಿಣತಿಯ ಸಮ್ಮಿಲನದೊಂದಿಗೆ ಈ ಕಾರ್ಟ್ ಗಳು ತಯಾರಾಗಿವೆ.

ಕಾರ್ಟ್ ಬಿಡುಗಡೆ ಸಮಾರಂಭದಲ್ಲಿ ಭಾರತದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾದ ಶ್ರೀ. ಪೀಯೂಷ್ ಗೋಯಲ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಭಾರತದಲ್ಲಿನ ಇಟಲಿಯ ರಾಯಭಾರಿ ಡಾ. ಆಂಟೋನಿಯೊ ಬಾರ್ಟೊಲಿ ಅವರು ಉಪಸ್ಥಿತರಿದ್ದರು. ಕೈನೆಟಿಕ್ ಗ್ರೂಪ್‌ ನ ಅಧ್ಯಕ್ಷ ಡಾ. ಅರುಣ್ ಫಿರೋಡಿಯಾ ಮತ್ತು ಟೊನಿನೊ ಲ್ಯಾಂಬೋರ್ಗಿನಿ ಸಂಸ್ಥಾಪಕ ಡಾ. ಟೊನಿನೊ ಲ್ಯಾಂಬೋರ್ಗಿನಿ ಅವರು ಉಪಸ್ಥಿತರಿದ್ದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳು, ಪ್ರಮುಖ ಗಾಲ್ಫ್ ಕ್ರೀಡಾಸಕ್ತರು, ಪ್ರಮುಖ ಉದ್ಯಮಿಗಳು, ಆತಿಥ್ಯ ಕ್ಷೇತ್ರದ ದಿಗ್ಗಜರು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೈನೆಟಿಕ್ ಗ್ರೀನ್‌ನ ಸಂಸ್ಥಾಪಕಿ ಮತ್ತು ಸಿಇಓ ಡಾ. ಸುಲಜ್ಜಾ ಫಿರೋಡಿಯಾ ಮೋಟ್ವಾನಿ ಅವರು , ” ಗಾಲ್ಫ್ ಕಾರ್ಟ್ ವಿಭಾಗವು ಬಹಳ ಸಮಯದಿಂದ ಒಂದು ಹೊಸ ಸಂಚಲನಕ್ಕಾಗಿ ಕಾಯುತ್ತಿತ್ತು. ಅಲ್ಲದೇ ವರ್ಷಗಳಿಂದ, ಗಾಲ್ಫ್ ಕಾರ್ಟ್‌ ಗಳ ಬಳಕೆಯು ಗಾಲ್ಫ್‌ ಗಿಂತಲೂ ಮೀರಿ, ಐಷಾರಾಮಿ ರೆಸಾರ್ಟ್‌ ಗಳು, ವಿಶ್ವದರ್ಜೆಯ ವಿಮಾನ ನಿಲ್ದಾಣಗಳು, ವಿಶಾಲವಾದ ಟೌನ್‌ ಶಿಪ್‌ ಗಳು, ಕಾರ್ಪೊರೇಟ್ ಕ್ಯಾಂಪಸ್‌ ಗಳು ಮತ್ತು ವೈಯಕ್ತಿಕ ಬಳಕೆಗೆ ಬಳಸಲ್ಪಟ್ಟಿವೆ.

ಕೈನೆಟಿಕ್ ಗ್ರೀನ್‌ ವಿಚಾರದಲ್ಲಿ ಇದು ಭಾರತದಲ್ಲಿ ತಯಾರಾದ ವಿದ್ಯುತ್ ವಾಹನಗಳನ್ನು ವಿಶ್ವಕ್ಕೆ ತೆಗೆದುಕೊಂಡು ಹೋಗುವ ನಮ್ಮ ಜಾಗತಿಕ ಪಯಣದ ಆರಂಭವನ್ನು ಸೂಚಿಸುತ್ತದೆ. ಕೈನೆಟಿಕ್ ಗ್ರೀನ್‌ ಸಂಸ್ಥೆಯು 2030 ರ ವೇಳೆಗೆ 1 ಬಿಲಿಯನ್ ಡಾಲರ್‌ ನ ವಿದ್ಯುತ್ ವಾಹನ ವ್ಯವಹಾರವನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದೆ ಮತ್ತು ಈ ಜಂಟಿ ಉದ್ಯಮವು ನಮ್ಮ ಜಾಗತಿಕ ಪ್ರಯಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಹೇಳಿದರು.

ಟೊನಿನೊ ಲ್ಯಾಂಬೋರ್ಗಿನಿ ಸ್ಪಾ ಕಂಪನಿಯ ಉಪಾಧ್ಯಕ್ಷರಾದ ಶ್ರೀ. ಫೆರುಕ್ಸಿಯೋ ಲ್ಯಾಂಬೋರ್ಗಿನಿ ಅವರು ಮಾತನಾಡಿ , “ಕೈನೆಟಿಕ್ ಗ್ರೀನ್‌ ಜೊತೆಗಿನ ಈ ಸಹಯೋಗವು ನನ್ನ ತಂದೆಯವರು 45 ವರ್ಷಗಳ ಹಿಂದೆ ಸ್ಥಾಪಿಸಿದ ಈ ಬ್ರಾಂಡ್‌ ನ ಇತಿಹಾಸದಲ್ಲಿ ಒಂದು ಸೊಗಸಾದ ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಈ ಗಾಲ್ಫ್ ಮತ್ತು ಲೈಫ್ ಸ್ಟೈಲ್ ಕಾರ್ಟ್‌ ಗಳ ಮೂಲಕ ನಾವು ಆ ಸಿದ್ಧಾಂತವನ್ನು ಒಂದು ಹೊಸ ವಿಭಾಗಕ್ಕೆ ಪರಿಚಯಿಸುತ್ತಿದ್ದೇವೆ. ಈ ಪಯಣವನ್ನು ಭಾರತದಂತಹ ಒಂದು ಚೈತನ್ಯಮಯ ಮಾರುಕಟ್ಟೆಯಲ್ಲಿ ಆರಂಭಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.

Leave a Reply

Your email address will not be published. Required fields are marked *