ಲಾಭಾಂಶವನ್ನು ಹಾಲು ಉತ್ಪಾದಕರಿಗೆ ಹಂಚಿರುವ ಒಕ್ಕೂಟದ ಕ್ರಮ ಪ್ರಶಂಸಾರ್ಹವಾದುದು : ಸತೀಶ್ ಕಡತನಮಲೆ
ಹಾಲು ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರ ಸಭೆ :
ಯಲಹಂಕ : ಹಾಲು ಉತ್ಪಾದಕ ರೈತರು, ಸಹಕಾರ ಸಂಘಗಳ ಏಳಿಗೆಯ ನಿಟ್ಟಿನಲ್ಲಿ ಲಾಭಾಂಶವನ್ನು ನೇರವಾಗಿ ಅವರ ಖಾತೆಗೆ ನೇರವಾಗಿ ಸಂದಾಯ‌ ಮಾಡಿರುವ ಬೆಂಗಳೂರು ಹಾಲು ಒಕ್ಕೂಟದ ಕ್ರಮಕ್ಕೆ ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಪ್ರಶಂಸೆ ವ್ಯಕ್ತಪಡಿಸಿದರು.
ಯಲಹಂಕ ಕ್ಷೇತ್ರದ ಕಾಕೋಳು ಸಮೀಪದ ಅನುಬಂಧ ಇವೆಂಟ್ಸ್ ನಲ್ಲಿ ಸೋಮವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘2025-26ನೇ ಸಾಲಿನಲ್ಲಿ ಬೆಂಗಳೂರು ಹಾಲು ಒಕ್ಕೂಟ(ಬಮೂಲ್) 74 ಕೋಟಿ ಲಾಭ ಗಳಿಸಿದ್ದು, ಈ ಲಾಭಾಂಶವನ್ನು ಹಾಲು ಉತ್ಪಾದಕರು ಮತ್ತು ಸಿಬ್ಬಂದಿಗಳ ಖಾತೆಗೆ ನೇರವಾಗಿ ಸಂದಾಯ ಮಾಡುವ ಮೂಲಕ ಅವರ ಆರ್ಥಿಕ ಬೆಳವಣಿಗೆಗೆ ಸಹಕರಿಸಿರುವುದು ಬೆಂಗಳೂರು ಹಾಲು ಒಕ್ಕೂಟದ ಇತಿಹಾಸದಲ್ಲೇ ಒಂದು ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಬಹುದು. ಇದು ಅಭಿವೃದ್ಧಿಯ ಆರಂಭ, ಮುಂದಿನ ದಿನಗಳಲ್ಲಿ ಒಕ್ಕೂಟ ಇನ್ನೂ ಹೆಚ್ಚಿನ ಲಾಭ ಗಳಿಸುವ ಮೂಲಕ ಹಾಲು ಉತ್ಪಾದಕರಿಗೆ ನೆರವಾಗಲಿದೆ. ಹಾಲು ಉತ್ಪಾದಕ ರೈತರ ಪ್ರಗತಿಯ ನಿಟ್ಟಿನಲ್ಲಿ ಒಕ್ಕೂಟದ ವತಿಯಿಂದ ಇನ್ನೂ ಹೆಚ್ಚಿನ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು, ಇಂತಹ ರೈತಪರ ಆಡಳಿತ ಮಂಡಳಿಯಲ್ಲಿ ನಿರ್ದೇಶಕ ನಾಗಿರುವುದಕ್ಕೆ ಹೆಮ್ಮೆಯ ಜೊತೆಗೆ ಸಾರ್ಥಕತೆಯ ಭಾವವಿದೆ.
ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಾಹಕರು ಯಶಸ್ವಿನಿ ಯೋಜನೆ, ಪಶು ಆಹಾರ ಗುಣಮಟ್ಟ, ಪಶು ಆಹಾರ ದರ, ಸದಸ್ಯರು ಮತ್ತು ಸಿಬ್ಬಂದಿಗಳಿಗೆ ವಿಮೆ ಸೌಲಭ್ಯ, ರಿಯಾಯಿತಿ ದರದಲ್ಲಿ ರಾಸುಗಳಿಗೆ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳ ವಿತರಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಬೇಡಿಕೆ ಇಟ್ಟಿದ್ದು, ಹಂತಹಂತವಾಗಿ ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರು ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *