ಕಾವೇರಿ ಆಸ್ಪತ್ರೆಯಿಂದ 760ಕ್ಕೂ ಹೆಚ್ಚು ಅಂಗಾಂಗ ಕಸಿ ಯಶಸ್ವಿ ಶಸ್ತ್ರ ಚಿಕಿತ್ಸೆ: ಹೃದಯ ಕಸಿಗೆ ಸಿದ್ಧತೆ, ರಾಜ್ಯಾದ್ಯಂತ ಅಂಗಾಂಗ ದಾನ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಜುಲೈ 22, 2025:
ದಕ್ಷಿಣ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸೇವಾ ಸಂಸ್ಥೆಯಾಗಿರುವ ಕಾವೇರಿ ಆಸ್ಪತ್ರೆಯು, 2024 ರಿಂದ ತನ್ನ ನೆಟ್‌ವರ್ಕ್‌ನ ಒಟ್ಟು 12 ಆಸ್ಪತ್ರೆಗಳಲ್ಲಿ
760ಕ್ಕೂ ಹೆಚ್ಚು ಅಂಗಾಂಗ ಕಸಿಗಳನ್ನು (ಮೂತ್ರಪಿಂಡ, ಯಕೃತ್ತು, ಹೃದಯ ಮತ್ತು ಶ್ವಾಸಕೋಶ) ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಕಾವೇರಿ ಆಸ್ಪತ್ರೆ ವತಿಯಿಂದ ಮಾತ್ರ
52 ಮೂತ್ರಪಿಂಡ ಮತ್ತು 11 ಯಕೃತ್ತು ಕಸಿ ಸೇರಿದಂತೆ 64 ಯಶಸ್ವಿ ಕಸಿಗಳನ್ನು ನಡೆಸಲಾಗಿದೆ. ಇದು ಕಾವೇರಿ ಆಸ್ಪತ್ರೆಯ ಕ್ಷಿಪ್ರ ಪ್ರಗತಿ ಮತ್ತು ವೈದ್ಯಕೀಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.
ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಮಲ್ಟಿ-ಆರ್ಗನ್ ಟ್ರಾನ್ಸ್‌ಪ್ಲಾಂಟ್ – ಕಿಮಾಟ್ (KIMOT) ಈಗ ಹೃದಯ ಕಸಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಮೂಲಸೌಕರ್ಯ ಮತ್ತು ಪರಿಣತಿಯನ್ನು ಹೊಂದಿರುವ ಆಸ್ಪತ್ರೆಯು ಸಂಪೂರ್ಣ ರೋಬೋಟಿಕ್ ಆಧಾರಿತ ಶಸ್ತ್ರಚಿಕಿತ್ಸೆ ಕೈಗೊಳ್ಳುತ್ತದೆ. ಈ ವಿಧಾನದ ಶಸ್ತ್ರಚಿಕಿತ್ಸೆಯಲ್ಲಿ ನಿಖರತೆಯನ್ನು ಹೆಚ್ಚುತ್ತದೆ ಮತ್ತು ರೋಗಿ ವೇಗವಾಗಿ ಗುಣಮುಖವಾಗುತ್ತಾರೆ. ಇದು ಶೇ. 93.79% ರಷ್ಟು ವೈದ್ಯಕೀಯ ಯಶಸ್ಸಿನ ಪ್ರಮಾಣ ಹೊಂದಿದ್ದು, ಕೇವಲ ಶೇ. 3.4% ರಷ್ಟು ಮಾತ್ರ ಮರಣ ಪ್ರಮಾಣ ಹೊಂದಿದೆ. ಯಶಸ್ಸಿನ ಪ್ರಮಾಣ ಈ ಪ್ರದೇಶದಲ್ಲಿಯೇ ಅತ್ಯುತ್ತಮವಾಗಿದೆ.
“ಕಾವೇರಿಯಲ್ಲಿನ ಪ್ರತಿಯೊಂದು ಅಂಗಾಂಗ ಕಸಿಯೂ ಮಸುಕಾಗಬಹುದಾದ ಜೀವನಕ್ಕೆ ಹೊಸ ಬೆಳಕು, ಆಶಾಭಾವ ನೀಡುವ ಬದ್ಧತೆಯಾಗಿದೆ. ನಾವು ಜೀವಗಳನ್ನು ಉಳಿಸುವುದಲ್ಲದೆ, ಅವುಗಳನ್ನು ಪರಿವರ್ತಿಸುವ ಆಂದೋಲನದಲ್ಲಿ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇವೆ” ಎಂದು ಕಾವೇರಿ ಆಸ್ಪತ್ರೆಯ ಬೆಂಗಳೂರು ಮತ್ತು ಹೊಸೂರಿನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರನ್ ಹೇಳಿದರು.
ಕಾವೇರಿ ಆಸ್ಪತ್ರೆ ಸಮೂಹದಿಂದ #HandOverHope – Give with Grace. Live through Others.” ಎಂಬ ಪರಿಕಲ್ಪನೆಯಲ್ಲಿ ಸಾರ್ವಜನಿಕ ಅಂಗಾಂಗ ದಾನ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಆಗಸ್ಟ್ 13 ರಂದು ವಿಶ್ವ ಅಂಗಾಂಗ ದಾನ ದಿನದಂದು ಈ ಅಭಿಯಾನ ನಡೆಯಲಿದ್ದು, ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರದ ಬಗ್ಗೆ ಕರ್ನಾಟಕದಾದ್ಯಂತ ಜಾಗೃತಿ ಮೂಡಿಸಲಿದೆ.
ಸೊಟ್ಟೊ ಕರ್ನಾಟಕ (SOTTO Karnataka) (ಹಿಂದೆ ಜೀವಸಾರ್ಥಕತೆ) ಸಹಯೋಗದೊಂದಿಗೆ, ಕಾವೇರಿ ಆಸ್ಪತ್ರೆಯು ದಾನಿಗಳ ನೋಂದಣಿ ಶಿಬಿರಗಳು, ಸಮುದಾಯ ತಲುಪುವ ಮತ್ತು ಸಾರ್ವಜನಿಕ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಿದೆ. ಈ ಉಪಕ್ರಮವು ದಾನಿಗಳ ಕಾಯುವಿಕೆ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗಲಿದೆ. ಸಕಾಲಿಕ ಕಸಿಗಳನ್ನು ಖಚಿತಪಡಿಸಿಕೊಳ್ಳಲು ಕಾವೇರಿಯು ದೀರ್ಘಾವಧಿಯ ಬದ್ಧತೆಯನ್ನು ಪ್ರದರ್ಶಿಸಲಿದೆ.
“ಪರಿಣಿತ ವೈದ್ಯರ ತಂಡದಿಂದ ನಿಖರವಾದ ಶಸ್ತ್ರ ಚಿಕಿತ್ಸೆ, ರೋಗಿಗಳಿಗೆ ಸೂಕ್ತ ಔಷಧ ಸಲಹೆ, ಉತ್ತಮ ಆರೈಕೆ, ಕಾಳಜಿಯನ್ನು ಕಾವೇರಿ ಆಸ್ಪತ್ರೆ ತೋರುತ್ತದೆ. ಮೂತ್ರಪಿಂಡ ಮತ್ತು ಯಕೃತ್ತು ಕಸಿಗಳ ಮೂಲಕ ನಾವು ಪರಿವರ್ತಿಸಿದ ಜೀವಗಳ ಬಗ್ಗೆ ಹೆಮ್ಮೆ ಇದೆ. ಆದರೆ, ಅಂಗಾಂಗಗಳ ಅಗತ್ಯತೆ ಕುರಿತಾದ ವಾಸ್ತವತೆ ಕರ್ನಾಟಕದಲ್ಲಿ ಗಂಭೀರವಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಪ್ರಸ್ತುತ 5,500ಕ್ಕೂ ಹೆಚ್ಚು ರೋಗಿಗಳು ಅಂಗಾಂಗಗಳಿಗಾಗಿ ಹೆಸರು ನೋಂದಾಯಿಸಿ ಮತ್ತು ಕಾಯುತ್ತಿದ್ದಾರೆ. ಅದರಲ್ಲಿ 4,500 ಮೂತ್ರಪಿಂಡಗಳು, 500 ಯಕೃತ್ತು ಮತ್ತು 500 ಹೃದಯ, ಶ್ವಾಸಕೋಶ ಮತ್ತು ಮೇದೋಜ್ಜೀರಕ ಗ್ರಂಥಿಗಳಿಗಾಗಿ ಬೇಡಿಕೆ ಇದೆ. ಪ್ರತಿಯೊಬ್ಬರು ಜೀವ ಕೈಯಲ್ಲಿ ಹಿಡಿದು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಹೆಚ್ಚು ಜನರು ಮುಂದೆ ಬಂದು ಅಂಗಾಂಗ ದಾನ ಪ್ರತಿಜ್ಞೆ ಮಾಡದಿದ್ದರೆ ಅನೇಕರಿಗೆ ಎರಡನೇ ಅವಕಾಶ ಸಿಗದಿರಬಹುದು. ಹೀಗಾಗಿ, ಸಮುದಾಯದ ಪಾಲ್ಗೊಳ್ಳುವಿಕೆಗೆ ಉತ್ತೇಜಿಸಲು, ಕೊರತೆಯನ್ನು ನೀಗಿಸಲು ಆಂದೋಲನ ಕೈಗೊಳ್ಳುತ್ತಿದ್ದೇವೆ. ಇಂದು ಮಾಡಿದ ಪ್ರತಿಯೊಂದು ಪ್ರತಿಜ್ಞೆಯು ನಾಳೆ ಜೀವವನ್ನು ಉಳಿಸಬಹುದು” ಎಂದು ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿಯ ನಿರ್ದೇಶಕ ಡಾ. ರಾಮಮೋಹನ್ ಶ್ರೀಪಾದ್ ಭಟ್ ತಿಳಿಸಿದರು.

Leave a Reply

Your email address will not be published. Required fields are marked *