









ನಮಸ್ತೇಸ್ತು ಗಣೇಶ ಗೆಳೆಯರ ಬಳಗದಿಂದ 8ನೇ ವರ್ಷದ ಅದ್ಧೂರಿ ಗಣೇಶೋತ್ಸವ :
99999 ಸಾವಿರಕ್ಕೆ ಹರಾಜು ಪ್ರಕ್ರಿಯೆ ಮೂಲಕ ಗಣೇಶನ ಲಡ್ಡು ಪ್ರಸಾದ ಖರೀದಿಸಿದ ಎ.ಎನ್.ಮಧುಸೂದನ್ :
ಯಲಹಂಕ : ‘ಶ್ರೀ ನಮಸ್ತೇಸ್ತು ಗಣೇಶ ಗೆಳೆಯರ ಬಳಗ’ದ ವತಿಯಿಂದ ಯಲಹಂಕ ಉಪನಗರದ ಬಿಬಿಎಂಪಿ ಕಛೇರಿಯ ಮುಂಭಾಗದಲ್ಲಿ ಆಯೋಜಿಸಿದ್ದ 8ನೇ ವರ್ಷದ ಗಣೇಶೋತ್ಸವ ಸಮಾರಂಭವು ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸೇರಿದಂತೆ ಹಲವು ಗಣ್ಯಮಾನ್ಯರು ಪಾಲ್ಗೊಳ್ಳುವ ಮೂಲಕ ಅದ್ದೂರಿಯಾಗಿ ನೆರವೇರಿತು.
ಗಣೇಶೋತ್ಸವ ಸಮಾರಂಭದಲ್ಲಿ ಸಿಹಿ,ಖಾರ ಮತ್ತು ಇನ್ನಿತರ ತಿನಿಸುಗಳಿಗೆ ಹೆಸರಾದ ‘ಸಂಪ್ರದಾಯ
ಫುಡ್ಸ್’ ಸಂಸ್ಥೆಯವರಿಂದ ತಯಾರಾಗಿದ್ದ 11 ಕೆ.ಜಿ. ಲಡ್ಡುನ್ನು ಹರಾಜು ಪ್ರಕ್ರಿಯೆಯಲ್ಲಿ ಇಡಲಾಗಿತ್ತು, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಪ್ರಾರಂಭಿಕ ಬೆಲೆ ೧೦ ಸಾವಿರ ದಿಂದ ಬಿಡ್ ಆರಂಭಿಸಿ, ಪೈಪೋಟಿ ಕೂಗಿನ ನಂತರ ಅಂತಿಮವಾಗಿ 99999 ಸಾವಿರ ರು. ಕೂಗಿದ ಖ್ಯಾತ ಉದ್ಯಮಿ ಎ.ಎನ್. ಮಧುಸೂದನ್ ಅವರು ಹರಾಜಿನಲ್ಲಿ ಲಡ್ಡು ಪ್ರಸಾದವನ್ನು ತಮ್ಮದಾಗಿಸಿಕೊಂಡರು.
8ನೇ ಗಣೇಶೋತ್ಸವ ಸಮಾರಂಭದ ಪ್ರಯುಕ್ತ ನಿವೃತ್ತ ಸೈನಿಕರು, ನಿವೃತ್ತ ಅಧಿಕಾರಿಗಳು ಸೇರಿದಂತೆ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಹಲವು ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಗಣೇಶೋತ್ಸವದ ಪ್ರಯುಕ್ತ ಸುಮಾರು ಆರು ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಗಣೇಶೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ, ರಸಪ್ರಶ್ನೆ, ಜಡೆ ಕೋಲಾಟ ಸೇರಿದಂತೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶಿವಮೊಗ್ಗದ ಸುಚ ಮ್ಯೂಸಿಕ್ ನ ಚಂದ್ರಶೇಖರ್ ಮತ್ತು ತಂಡದಿಂದ ಭಕ್ತಗೀತೆ, ಭಾವಗೀತೆ, ಚಿತ್ರಗೀತೆಗಳ ಗಾನವೈಭವ ಕಾರ್ಯಕ್ರಮ ಏರ್ಪಡಿಸಿದ್ದರು.
ಕೊನೆಯ ದಿನ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಗಣೇಶನಿಗೆ ಅಭಿಷೇಕ, ಮಹಾಪೂಜೆ ನೆರವೇರಿಸಿ, ಯಲಹಂಕ ಉಪನಗರದ ಪ್ರಮುಖ ಬೀದಿಗಳಲ್ಲಿ ತಮಟೆ, ಚಂಡೆ, ನಾಸಿಕ್ ನಗಾರಿ, ನಂದಿ ಧ್ವಜ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಅದ್ಧೂರಿ ಮೆರವಣಿಗೆಯ ಮೂಲಕ ಅಳ್ಳಾಳಸಂದ್ರದ ಕೆರೆಯ ಪಕ್ಕದ ಕಲ್ಯಾಣಿಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.
ಸಾರ್ವಜನಿಕ ಅನ್ನಸಂತರ್ಪಣೆಯ ಸಹಭೋಜನದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಪಂಕ್ತಿಯಲ್ಲಿ ಕುಳಿತು ಭೋಜನ ಸ್ವೀಕರಿಸಿದ್ದು ನಮಸ್ತೇಸ್ತು ಗಣೇಶ ಗೆಳೆಯರ ಬಳಗದ ಪದಾಧಿಕಾರಿಗಳಿಗೆ ಹರ್ಷ ಉಂಟು ಮಾಡಿತು.
ನಮಸ್ತೇಸ್ತು ಗಣೇಶ ಗೆಳೆಯರ ಬಳಗ ಕಳೆದ ಹಲವು ವರ್ಷಗಳಿಂದ ಯಲಹಂಕ ಉಪನಗರದಲ್ಲಿ ಹಿಂಧೂ ಧಾರ್ಮಿಕ ಆಚರಣೆಗಳು, ಹಬ್ಬಗಳು ಮತ್ತು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಸಮಾಜ ಸೇವೆ ಕೈಗೊಳ್ಳುವ ಸಹೃದಯಿಗಳಿಗೆ ಸನ್ಮಾನಿಸುವ ಮೂಲಕ ಅವರ ಕಾರ್ಯ ಶ್ಲಾಘನೆ ಮಾಡಿ ಉತ್ತೇಜಿಸುವ ಸತ್ಕಾರ್ಯವನ್ನು ಮಾಡುತ್ತಿದೆ.