

ಹುಬ್ಬಳ್ಳಿಯ ಹೆಸ್ಕಾಂ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ಅಹೋರಾತ್ರಿ ಧರಣಿ :
ಯಲಹಂಕ : ವಿದ್ಯುತ್ ಗೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಫೆ.24ರಂದು ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಮಹತ್ವದ ಈ ಧರಣಿ ಸತ್ಯಾಗ್ರಹದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ವಿ.ಆರ್.ನಾರಾಯಣರೆಡ್ಡಿ ರಾಜ್ಯದ ರೈತರಿಗೆ ಮನವಿ ಮಾಡಿದರು.
ಶುಕ್ರವಾರ ಯಲಹಂಕ ಉಪನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ರೈತರಿಗೆ ವಿದ್ಯುತ್ ಇಲಾಖೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ, ರೈತರ ಪಂಪ್ ಸೆಟ್ ಗಳಿಗೆ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ, ಹೊಲ, ಅರಣ್ಯ ಪ್ರದೇಶಗಳಲ್ಲಿ ಮನೆ ಮಾಡಿಕೊಂಡು ವಾಸವಿರುವ ರೈತರು ಕಾಡು ಪ್ರಾಣಿಗಳ ಭಯದಲ್ಲಿ ವಾಸಿಸುತ್ತಿರುತ್ತಾರೆ, ಅವರಿಗೆ ವಿದ್ಯುತ್ ನ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದರೆ ವಿದ್ಯುತ್ ಇಲಾಖೆಯ ಕಣ್ಣಾಮುಚ್ಚಾಲೆಯಿಂದಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಒಂದೊಮ್ಮೆ ಯೋಚಿಸಿದರೆ ಕಳೆದ ಬಾರಿಯ ಬಿಜೆಪಿ ಸರ್ಕಾರದಲ್ಲಿ ವಿದ್ಯುತ್ ಪೂರೈಕೆ ಚೆನ್ನಾಗಿತ್ತು. ರೈತರಿಗೆ ಅಗತ್ಯವಿದ್ದ ವಿದ್ಯುತ್ ಪೂರೈಕೆ ಸರಿಯಾಗಿತ್ತು, ಆದರೆ ಈಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ವಿದ್ಯುತ್ ಇಲ್ಲ, ಹಾಗೆಯೇ ರೈತರ ಬೆಳೆಗಳಿಗೆ ಸಮರ್ಪಕವಾದ ಬೆಲೆಯೂ ಇಲ್ಲ, ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರು ಕೃಷಿ ಕ್ಷೇತ್ರದಿಂದ ದೂರ ಉಳಿಯದೆ ಇನ್ನೇನು ಮಾಡುತ್ತಾರೆ ಎಂದರು.
ವಿದ್ಯುತ್ ಸೇರಿದಂತೆ ರೈತರ ಹಲವು ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಮಾರ್ಗೋಪಾಯ ಕಲ್ಪಿಸಬೇಕೆಂಬ ಬೇಡಿಕೆಗಳನ್ನು ಇಟ್ಟುಕೊಂಡು ಫೆ.24ರಂದು ಹುಬ್ಬಳ್ಳಿಯ ಹೆಸ್ಕಾಂ ಕಛೇರಿ ಮುಂದೆ 10 ಸಾವಿರ ರೈತರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ರೈತ ಬಾಂಧವರು ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರತ್ನ ಭಾರತ ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್, ರಾಜ್ಯ ರೈತ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ,ರಾಜ್ಯ ಕಾರ್ಯದರ್ಶಿ ನಾಗರಾಜ್ ರೆಡ್ಡಿ, ರತ್ನ ಭಾರತ ರೈತ ಸಂಘದ ಹೊಸಕೋಟೆ ತಾಲ್ಲೂಕು ಅಧ್ಯಕ್ಷ ಬತೀಶ್ ಪಿಳ್ಳಪ್ಪ ಉಪಸ್ಥಿತರಿದ್ದರು.
