ಒಕ್ಕಲಿಗರು ಸಾಮುದಾಯಿಕವಾಗಿ ಇನ್ನೂ ಹೆಚ್ಚಿನ ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯವಿದೆ : ಡಾ.ಕೆ.ಸುಧಾಕರ್
ಯಲಹಂಕದಲ್ಲಿ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ : 
ಯಲಹಂಕ : ಒಕ್ಕಲಿಗ ಸಮುದಾಯ ರಾಜಕೀಯ ವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲವಾಗಿದ್ದರೂ ಸಹ ಇತರ ಸಮುದಾಯಗಳಿಗೆ ಹೋಲಿಸಿದರೆ ಸಮುದಾಯಿಕವಾಗಿ ಇನ್ನೂ ಹೆಚ್ಚಿನ ಒಗ್ಗಟ್ಟು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದು ಸಂಸದ ಡಾ. ಕೆ.ಸುಧಾಕರ್ ಅಭಿಪ್ರಾಯಪಟ್ಟರು.
 ಜೂನ್ 27ರಂದು ಯಲಹಂಕ ತಾಲೂಕು ಒಕ್ಕಲಿಗರ ಸಂಘದಿಂದ ಆಯೋಜಿಸಿರುವ ‘ನಾಡಪ್ರಭು ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ‘ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ದೆಹಲಿಯ ಕೆಂಪುಕೋಟೆಯ ಮೇಲೆ ಕರ್ನಾಟಕದ ಧ್ವಜ ಹಾರಿಸಿದ ಹಿರಿಯ ಮುತ್ಸದ್ದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಎಂಬುದು ಹೆಮ್ಮೆಯ ಸಂಗತಿ. ಪ್ರಸಕ್ತವಾಗಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿ.ಕೆ.ಶಿವಕುಮಾರ್ ಸಹ ಒಕ್ಕಲಿಗ ಸಮುದಾವರೇ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಂತಹ ಅಪ್ರತಿಮ ಆಡಳಿತಗಾರರನ್ನು ರಾಜ್ಯಕ್ಕೆ ನೀಡಿದ ಹಿರಿಮೆ ಒಕ್ಕಲಿಗ ಸಮುದಾಯಕ್ಕಿದೆ. ಹೀಗಿದ್ದು ಸಹ ಸಾಮುದಾಯಕ ವಾಗಿ ಒಕ್ಕಲಿಗರು ಇನ್ನೂ ಹೆಚ್ಚಿನ ಒಗ್ಗಟ್ಟು ಪ್ರದರ್ಶಿಸ ಬೇಕಾದ ಅಗತ್ಯವಿದೆ. ಇತ್ತೀಚಿಗೆ ಚಿಕ್ಕಪುಟ್ಟ ಸಮುದಾಯಗಳು ಸಹ ಒಗ್ಗಟ್ಟಿನ ವಿಷಯದಲ್ಲಿ ಒಕ್ಕಲಿಗ ಸಮುದಾಯಕಿಂತಲೂ ಮುಂಚೂಣಿಯಲ್ಲಿವೆ, ಇದನ್ನು ಒಕ್ಕಲಿಗ ಸಮುದಾಯ ಅರ್ಥೈಸಿಕೊಂಡು ಇನ್ನೂ ಹೆಚ್ಚಿನ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಾಮುದಾಯಿಕ ಪ್ರಗತಿಗೆ ಇಂಬು ನೀಡುಬೇಕಿದೆ. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ಅತ್ಯಂತ ಸುಸಜ್ಜಿತ ರೀತಿಯಲ್ಲಿ  ಕಟ್ಟಿದ ನಿರ್ಮಾತೃ ಅಂತಹ ಮಹಾನ್ ಪುರುಷರ ಜಯಂತಿಯನ್ನು ಜೂನ್ 27ರಂದು ಒಕ್ಕಲಿಗ ಸಮುದಾಯದ ಜನತೆ ಇತರೆ ಸಮುದಾಯಗಳನ್ನು ಒಳಗೊಂಡು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದು, ರಾಜ್ಯ ಒಕ್ಕಲಿಗರ ಸಂಘ ಸಹ ಈ ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಹಕಾರ ನೀಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಲಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಬಮುಲ್ ನಿರ್ದೇಶಕ ಸತೀಶ್ ಕಡತನಮಲೆ ಅವರು ಮಾತನಾಡಿ ‘ಕೆಂಪೇಗೌಡರು ಬೆಂಗಳೂರಿನಲ್ಲಿ 62 ಸಮುದಾಯ ಗಳಿಗೆ ಪ್ರತ್ಯೇಕವಾದ ಪೇಟೆ ನಿರ್ಮಿಸುವ ಮೂಲಕ 500 ವರ್ಷಗಳ ಹಿಂದೆಯೇ ಸಮಾನತೆಯ ತತ್ವಾದರ್ಶವನ್ಶು ಪಾಲಿಸಿ ನಾಡಿಗೆ ಮಾದರಿಯಾಗಿದ್ದಾರೆ. ಅವರ ತತ್ವಾದರ್ಶಕಗಳ ಅಡಿಯಲ್ಲಿ ನಾವು ಸಹ ಇತರ ಸಮುದಾಯಗಳ ವಿಶ್ವಾಸದೊಂದಿಗೆ ಮುನ್ನಡೆಯಬೇಕಿದೆ. ಯಲಹಂಕ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಜೂನ್ 27ರಂದು ನಡೆಯಲಿ ರುವ ಕೆಂಪೇಗೌಡ ಜಯಂತಿ ಜಾತ್ಯತೀತವಾಗಿ ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಾಡುತ್ತಿರುವ ಕಾರ್ಯಕ್ರಮವಾಗಿದ್ದು,ಯಲಹಂಕ ತಾಲೂಕಿನ ಜನತೆ ಜಾತಿ, ಪಕ್ಷಭೇದ ಬದಿಗಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ  ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ಡಬಳ್ಳಾಪುರ ಮಾಜಿ ಶಾಸಕ ಗಂಟಿಗಾನಹಳ್ಳಿ ಕೃಷ್ಣಪ್ಪ ವಹಿಸಿದ್ದು, ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ನೆಲ್ಲಿಗೆರೆ ಬಾಲು, ನಿರ್ದೇಶಕ ಪ್ರಕಾಶ್, ಜೆಡಿಎಸ್ ಮುಖಂಡ ರಾದ ಈ.ಕೃಷ್ಣಪ್ಪ, ಕೃಷ್ಣಪ್ಪ( ಡಿ ವೈ ಎಸ್ ಪಿ ), ಬಿಜೆಪಿ ಮುಖಂಡರಾದ ದೊಡ್ಡ ಬಸವರಾಜು, ಹೆಚ್.ಬಿ. ಹನುಮಯ್ಯ, ಕೆ.ಶ್ರೀನಿವಾಸಯ್ಯ, ಕಾಂಗ್ರೆಸ್ ಮುಖಂಡರಾದ ಕೇಶವರಾಜಣ್ಣ, ದಾನೇಗೌಡ, ವಿ.ಜಿ.ಜಯರಾಮಯ್ಯ, ಮಂಜುನಾಥ ಅದ್ದೆ, ರವಿ, ಅವಲಹಳ್ಳಿ ಶ್ರೀನಿವಾಸ್, ರಘು, ಬೆಟ್ಟಹಲಸೂರು ಬಿ.ಎಂ.ನಾಗೇಶ್, ಬೆಂಕಿ ನಾರಾಯಣ, ರವೀಂದ್ರನಾಥಗೌಡ, ಮುನಿನಾರಾಯಣ, ಚಿಕ್ಕಜಾಲ ಲಕ್ಷ್ಮೀಪತಿ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *