










ಜಾತಿ ವ್ಯವಸ್ಥೆ ನಿಂತ ನೀರಿನಂತೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಯಲಹಂಕದಲ್ಲಿ 14 ಅಡಿಗಳ ಅಂಬೇಡ್ಕರ್ ಆವರ ಕಂಚಿನ ಪ್ರತಿಮೆ ಅನಾವರಣ :
ಯಲಹಂಕ : ಸಂವಿಧಾನ ರಕ್ಷಣೆಯಾದರೆ ನಮ್ಮ ಹಕ್ಕುಗಳೂ ರಕ್ಷಣೆಯಾಗುತ್ತವೆ, ಈ ದಿಸೆಯಲ್ಲಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಸಂವಿಧಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಯಲಹಂಕ ಮಿನಿ ವಿಧಾನಸೌಧದ ಮುಂದೆ 14 ಅಡಿಗಳ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಶನಿವಾರ ಅನಾವರಣ ಗೊಳಿಸಿ ಅವರು ಮಾತನಾಡಿದರು.
ನಮ್ಮ ದೇಶ, ನಮ್ಮ ಸಮಾಜಕ್ಕೆ ಅವಶ್ಯಕವಾಗಿದ್ದಂತಹ ಅತ್ಯುತ್ತಮ ಸಂವಿಧಾನವನ್ನು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಈ ದೇಶದ ಸಾಮಾಜಿಕ ಪರಿಸ್ಥಿತಿ, ಜಾತಿ ವ್ಯವಸ್ಥೆ ಅಂಬೇಡ್ಕರ್ ಅವರಿಗೆ ಅರ್ಥ ಆದಷ್ಟು ಬೇರೆಯವರಿಗೆ ಆಗಿರಲಿಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ.
ಜಾತಿ ವ್ಯವಸ್ಥೆ ಇದ್ದಷ್ಟೂ ಕಾಲ ಮೀಸಲಾತಿ ಇರಲೇಬೇಕು ಎಂಬುದನ್ನು ಅವರು ಬಲವಾಗಿ ನಂಬಿದ್ದರು ಎಂದರು.
ಜಾತಿ ವ್ಯವಸ್ಥೆಗೆ ಚಲನೆ ಇಲ್ಲ :
ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆದರೆ ವರ್ಗಕ್ಕೆ ಚಲನೆಯಿದೆ. ನಮ್ಮ ಸಮಾಜದಲ್ಲಿ ಶ್ರೀಮಂತ ಬಡವನಾದರೂ, ಬಡವ ಶ್ರೀಮಂತನಾದರೂ ಕಡೆಯವರೆಗೂ ಉಳಿದು ಕೊಳ್ಳುವುದು ಹುಟ್ಟಿದ ಜಾತಿಯಲ್ಲಿ ಮಾತ್ರ. ಆದ್ದರಿಂದ ಈ ಜಾತಿ ವ್ಯವಸ್ಥೆ ನಿಂತ ನೀರಿನಂತೆ.
ಇದನ್ನು ಮನಗಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ ಯಶಸ್ಸನ್ನು ಕಾಣಬೇಕಾದರೆ ಈ ದೇಶದ ಅವಕಾಶ ವಂಚಿತರು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರಿ ಗೆಲ್ಲರಿಗೂ ಸಮಾನ ಅವಕಾಶಗಳು ದೊರೆತು ಅವರೆಲ್ಲರೂ
ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದ್ದರು ಎಂದರು.
ಸ್ವಾತಂತ್ರ್ಯಾನಂತರ ಒಬ್ಬ ವ್ಯಕ್ತಿ , ಒಂದು ಮತ ಜಾರಿಗೆ ಬಂದಿದೆ . ಇದು ಈ ದೇಶದ ರಾಷ್ಟ್ರಪತಿ ಗಳಿಗೂ ಒಂದೇ. ಒಬ್ಬ ಪೌರಕಾರ್ಮಿಕನಿಗೂ ಒಂದೇ. ಬಸವಣ್ಣನವರು ಹೇಳಿದ್ದು ಇದನ್ನೇ. ಅಂಬೇಡ್ಕರ್ ಅವರು ಕೂಡಾ ಬಸವಣ್ಣನವರ ವಚನಗಳನ್ನು ಓದಿದ್ದರು ಎಂಬುದು ಅವರ ಬರಹಗಳಿಂದ ತಿಳಿದು ಬರುತ್ತದೆ. ಸಮಾಜದಲ್ಲಿ ಯಾವ ಕೆಲಸವೂ ಮೇಲೂ ಅಲ್ಲ, ಕೀಳೂ ಅಲ್ಲ. ಎಲ್ಲವೂ ಸಮಾನ ಎಂದೇ ಪ್ರತಿಪಾದಿಸಿದ್ದರು ಎಂದರು.
ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಸಾಮಾಜಿಕ, ಆರ್ಥಿಕ, ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲಿವರೆಗೂ ಇದು ಸಿಗುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಿಲ್ಲ. ನಮ್ಮ ಸರ್ಕಾರವು ಇದನ್ನೇ ನಂಬಿದ್ದು, ನಾವು ರೂಪಿಸುತ್ತಿರುವ ಕಾರ್ಯಕ್ರಮಳೂ ಇದೇ ಹಿನ್ನೆಲೆಯಲ್ಲಿ ಮೂಡಿಬಂದಿವೆ ಎಂದರು.
ಸಂವಿಧಾನದ ಆಶಯಗಳನ್ನು ಮುಂದಕ್ಕೆ ಎಳೆಯಲು ಪ್ರಯತ್ನ ಮಾಡಬೇಕು :
ಸಂವಿಧಾನದ ಆಶಯಗಳನ್ನು ಹಿಂದಕ್ಕೆ ಮಾತ್ರ ತಳ್ಳಬೇಡಿ. ಮುಂದಕ್ಕೆ ಎಳೆಯಲು ಪ್ರಯತ್ನ ಮಾಡಬೇಕು. ಮುಂದಕ್ಕೆ ಎಳೆಯಲು ಸಾಧ್ಯವಾಗದಿದ್ದರೆ ಅಲ್ಲೇ ಬಿಡಿ. ಆದರೆ ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದ ಮುಖ್ಯಮಂತ್ರಿ ಗಳು ಅಂಬೇಡ್ಕರ್ ಅವರು ತಾವು ಓದಿಕೊಂಡಿರುವುದು ಸ್ವಾರ್ಥಕ್ಕಾಗಿ ಅಲ್ಲ, ಅಸಮಾನತೆಯನ್ನು ಹೋಗಲಾಡಿಸಲು ಎಂದು ತಿಳಿಸಿದ್ದರು. ನಾವು ಸಾಧ್ಯವಾದಷ್ಟರ ಮಟ್ಟಿಗೆ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶಿಕ್ಷಣವನ್ನು ಪಡೆದುಕೊಳ್ಳಲೇ ಬೇಕು :
ನಮ್ಮ ಸರ್ಕಾರ ಆರ್ಥಿಕವಾಗಿ, ಸಾಮಾಜಿಕವಾಗಿ ಜನರಲ್ಲಿ ಶಕ್ತಿ ತುಂಬಲು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಶಕ್ತಿ ತುಂಬದಿದ್ದರೆ ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಒಂದೇ ಬಾರಿಗೆ ಎಲ್ಲರನ್ನೂ ಮುಖ್ಯವಾಹಿನಿಗೆ ತರಲು ಸಾಧ್ಯವಾಗದಿದ್ದರೂ ಕ್ರಮೇಣವಾಗಿ ಮಾಡಲು ಪ್ರಯತ್ನ ಮಾಡಬೇಕು. ನಮ್ಮ ಹೋರಾಟ ನಿರಂತರವಾಗಿರಬೇಕು. ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಮಂತ್ರಗಳನ್ನು ಬಿಟ್ಟು ಹೋಗಿದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶಿಕ್ಷಣವನ್ನು ಪಡೆದುಕೊಳ್ಳಲೇ ಬೇಕು. ಆಗ ಮಾತ್ರ ಸ್ವಾಭಿಮಾನ, ಜ್ಞಾನ ಬರಲು, ಸಂಘಟಿತರಾಗಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ಎಷ್ಟೇ ಕಷ್ಟವಾದರೂ, ಮಾನಸಿಕ ತೊಂದರೆಯಾದರೂ ಶಿಕ್ಷಣವನ್ನು ಬಿಡಲಿಲ್ಲ ಎಂದರು. ಅಂಬೇಡ್ಕರ್ ಅವರೊಬ್ಬ ದೂರದೃಷ್ಟಿಯಿದ್ದ ನಾಯಕರು. ಅಂಥವರಿಗೆ ಮಾತ್ರ ನೂರು ವರ್ಷಗಳಲ್ಲಿ ಸಮಾಜದಲ್ಲಿ ಏನಾಗಬಹುದು ಎಂದು ಊಹಿಸಲು ಸಾಧ್ಯವಾಗುತ್ತದೆ ಎಂದರು.
ಅಂಬೇಡ್ಕರ್ ಅವರ ವಿಚಾರಗಳು ಇನ್ನಷ್ಟು ಪಸರಿಸಲಿ :
ಸಮಗ್ರ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಅಂಬೇಡ್ಕರ್ ದಲಿತರಾಗಿ ಹುಟ್ಟಿದ್ದರೂ, ಸಾಮಾಜಿಕ ನ್ಯಾಯದಿಂದ ವಂಚಿತರಾದವರೆಲ್ಲರ ನಾಯಕರಾಗಿದ್ದರು. ಈ ದೇಶದಲ್ಲಿ ಅವರು ಹುಟ್ಟಿರವುದೇ ನಮಗೆ ಹೆಮ್ಮೆಯ ಸಂಗತಿ. ಅಂಬೇಡ್ಕರ್ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಪ್ರತಿಮೆಗಳು ಕೇವಲ ಸಂಕೇತಗಳಾದರೂ, ಇವುಗಳಿಂದ ಅಂಬೇಡ್ಕರ್ ಅವರ ವಿಚಾರಗಳು ಇನ್ನಷ್ಟು ಪಸರಿಸು ವಂತಾಗಬೇಕು ಎಂದರು.
ಬೇಡಿಕೆ ಪರಿಗಣಿಸಲಾಗುವುದು :
ಶಾಸಕ ಎಸ್.ಆರ್.ವಿಶ್ವನಾಥ್ ಅವರು ಯಲಹಂಕದಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಹೇಳಿರುವುದನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು, ಯಲಹಂಕದಲ್ಲಿ ದಲಿತರು, ಹಿಂದುಳಿದವರೇ ಹೆಚ್ಚಿದ್ದು, ಎಲ್ಲರಿಗೂ ನ್ಯಾಯ ದೊರಕಿಸುವ ಕೆಲಸವನ್ನು ವಿಶ್ವನಾಥ್ ಮಾಡುತ್ತಿದ್ದಾರೆ. ವಿಶ್ವನಾಥ್ ಅವರು ಕ್ಷೇತ್ರಾಭಿವೃದ್ಧಿಗಾಗಿ ಅನುದಾನದ ಬೇಡಿಕೆ ಇಟ್ಟಿದ್ದಾರೆ, ಅವರ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಸಿ.ಎಂ. ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಅಂಬೇಡ್ಕರ್ ಅವರ ಪ್ರತಿಮೆಯನ್ನು ಹಿಂದುಳಿದ ವರ್ಗಗಳ ಮತ್ತು ದೀನ ದಲಿತರ ನಾಯಕರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಮತ್ತು ಡಾ.ಎಚ್.ಸಿ.ಮಹದೇವಪ್ಪ ನವರ ಅಮೃತ ಹಸ್ತದಿಂದ ಅನಾವರಣ ಗೊಳಿಸಿರುವುದು ಅರ್ಥಪೂರ್ಣ ವಾದ ಕ್ರಮವಾಗಿದೆ. ಅಂಬೇಡ್ಕರ್ ರವರ ಪ್ರತಿಮೆ ಅನಾರಣದ ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಒಂದು ಐತಿಹಾಸಿಕ ಕ್ಷಣ ಮತ್ತು ನಮ್ಮೆಲ್ಲರ ಸುಯೋಗವಾಗಿದೆ. ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಮೃತ ಹಸ್ತದಿಂದಲೇ ಅನಾವರಣ ಗೊಳಿಸಬೇಕು ಎಂಬುದು ನಮ್ಮೆಲ್ಲರ ಉತ್ಕಟವಾದ ಆಶಯವಾಗಿತ್ತು, ಈ ಬಗ್ಗೆ ಹಲವು ದಲಿತಪರ ಸಂಘಟನೆಗಳ ಮುಖಂಡರು ಬಹಳಷ್ಟು ಒತ್ತಾಯಿಸಿದ್ದರು. ಇಂದು ಪ್ರತಿಮೆ ಅನಾವರಣ ದೊಂದಿಗೆ ನಮ್ಮೆಲ್ಲರ ಆಶಯ ಈಡೇರಿದಂತಾಗಿದ್ದು, ಮಿನಿ ವಿಧಾನಸೌಧದಲ್ಲಿ ತಮ್ಮ ಕೆಲಸ, ಕಾರ್ಯಗಳಿಗೆಂದು ಬರುವ ಜನತೆ ಇಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಕೈಮುಗಿದು ಒಳಗಿನ ಕಚೇರಿಗಳಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿ ನಿಮ್ಮ ಕೆಲಸ ಕಾರ್ಯಗಳನ್ನು ಬಿಡದೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಂದಾಯ ಸಚಿವ ಕೃಷ್ಣಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ರಾಯಚೂರು ಸಂಸದ ಕುಮಾರ್ ನಾಯ್ಕ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ, ಜಿಲ್ಲಾಧಿಕಾರಿ ಜಗದೀಶ್ ಜಿ., ಬೆಂ. ನಗರ ಜಿಲ್ಲಾ ಪಂಚಾಯ್ತಿ ಸಿಇಓ ಲತಾಕುಮಾರಿ, ದಲಿತಪರ ಸಂಘಟನೆಗಳ ಮುಖಂಡರಾದ ಮಾರಪ್ಪ, ಮುನಿಆಂಜಿನಪ್ಪ, ಬಿ.ಆರ್.ಮುನಿರಾಜು, ಸಿಂಗನಾಯಕನಹಳ್ಳಿ ರಾಜಣ್ಣ, ರಾಮಗೊಂಡನಹಳ್ಳಿ ರಮೇಶ್, ಮಾವಳಿಪುರ ಬಿ.ಶ್ರೀನಿವಾಸ್, ಕೆ.ಎಂ.ಮುರಳಿ ಸೇರಿದಂತೆ ಇನ್ನಿತರರಿದ್ದರು.