









ಪೀಪಲ್ಸ್ ಟ್ರಸ್ಟ್ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ :
ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ ವೀರ ಯೋಧ :
ಯಲಹಂಕ : ಕೇಂದ್ರ ಗ್ರಾಮೀಣಾಭಿವೃದ್ಧಿ ಮಂಡಳಿ ಪೀಪಲ್ಸ್ ಟ್ರಸ್ಟ್ ಶ್ರೀರಾಮನಹಳ್ಳಿ ಸೇವಾ ಕೇಂದ್ರದ ವತಿಯಿಂದ ದಾನಿಗಳ ನೆರವಿನೊಂದಿಗೆ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ದಲ್ಲಿ ಹಸೆಮಣೆ ಏರಿದ 17 ನವ ವಧು,ವರರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಅಕ್ಷತೆ ಹಾಕಿ ಹರಸಿದರು.
ಸಾಮೂಹಿಕ ವಿವಾಹದಲ್ಲಿ ಆಂಧ್ರಪ್ರದೇಶದ ಪುಟ್ಟಪರ್ತಿ ಜಿಲ್ಲೆ ವೀರಯೋಧ ರಾಜಶೇಖರ್ ದೇವನಹಳ್ಳಿ ತಾಲ್ಲೂಕಿನ ಹರದೇಶಹಳ್ಳಿಯ ಸರಿತಾ ಎಂಬುವರೊಂದಿಗೆ ಸಪ್ತಪದಿ ತುಳಿದದ್ದು ಗಮನ ಸೆಳೆಯಿತು.
ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಶ್ರೀರಾಮನಹಳ್ಳಿಯ ಪೀಪಲ್ಸ್ ಟ್ರಸ್ಟ್ ವತಿಯಿಂದ ಕಳೆದ 22 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬರಲಾಗುತ್ತಿದ್ದು, ಬಡವರ ಕಲ್ಯಾಣಕ್ಕೆ ಸಹಕಾರ ನೀಡುವ ಪುಣ್ಯದ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ. ಯಲಹಂಕ, ನಗರದ ಹೆಬ್ಬಾಳ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಗೌರಿಬಿದನೂರು ತಾಲ್ಲೂಕು ಮತ್ತು ಆಂಧ್ರಪ್ರದೇಶದ ಗಡಿಭಾಗದ ಜಿಲ್ಲೆಗಳಿಂದ ವಧು,ವರರು ಆಗಮಿಸಿ ಪೀಪಲ್ಸ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ ಟ್ರಸ್ಟ್ ನ ಈ ಕಾರ್ಯ ಶ್ಲಾಘನೀಯವಾದುದು. ಇಂದು ಹಸೆಮಣೆ ಏರಿರುವ ವಧು, ವರರು ನೂರು ಕಾಲ ಸುಖ ಸಂಸಾರ ನಡೆಸುವಂತಾಗಲಿ ಎಂದು ಹರಸಿದರು.
ಪೀಪಲ್ಸ್ ಟ್ರಸ್ಟ್ ನ ವ್ಯವಸ್ಥಾಕ ಟ್ರಸ್ಟಿ ಹರೀಶ್ ಉತ್ತಯ್ಯ ಮಾತನಾಡಿ ‘ಧರ್ಮದರ್ಶಿ ಎನ್.ಸಿ.ನಾಣಯ್ಯ ಅವರ ಸ್ಮರಣೆಯಲ್ಲಿ ಕಳೆದ 22 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗುತ್ತಿದ್ದು, ಇದುವರೆಗೆ ಸುಮಾರು 450ಕ್ಕೂ ಹೆಚ್ಚು ಜೋಡಿಗಳು ಉಚಿತ ಸಾಮೂಹಿಕ ವಿವಾಹದ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಬಾರಿಯ ವಿವಾಹದಲ್ಲಿ 17 ನವ ವಧು ವರರು ಹಸೆಮಣೆ ಏರುವ ಮೂಲಕ ಗೃಹಸ್ತಾಶ್ರಮಕ್ಕೆ ಕಾಲಿಟ್ಟಿದ್ದಾರೆ. ವಿವಾಹದಲ್ಲಿ ಪಾಲ್ಗೊಳ್ಳುವ ವಧು, ವರರಿಗೆ ತಾಳಿ, ಬಟ್ಟೆ, ಮಿಂಚು, ಕಾಲುಂಗುರ ಸೇರಿದಂತೆ ವಿವಾಹ ಶಾಸ್ತ್ರಕ್ಕೆ ಅಗತ್ಯವಿರುವ ಸಲಕರಣೆಗಳನ್ನು ನೀಡಲಾಗುವುದು. ವಿವಾಹ ಮಹೋತ್ಸವದಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಜನತೆ ಭೋಜನ ಸವಿದಿದ್ದಾರೆ ಎಂದು ಮಾಹಿತಿ ನೀಡಿದರು.
ಉಚಿತ ಸಾಮೂಹಿಕ ವಿವಾಹದ ಈ ಶುಭ ಕಾರ್ಯದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು,ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಭವಾನಿ ಶ್ರೀನಿವಾಸ್, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂಡಳಿ ಸಮಿತಿಯ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಬೆಟ್ಟೇನಹಳ್ಳಿ ರಾಜಣ್ಣ, ನಿರ್ದೇಶಕ ರಾದ ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ), ರಾಮಸ್ವಾಮಿ ಎಂ., ಸಂಚಾಲಕ ರಾದ ಎಸ್.ಎಚ್.ಅಪ್ಪಣ್ಣಗೌಡ, ಸುಜಾತಮ್ಮ,ಗ್ರೀನ್ ಸರ್ಕಲ್ ಸಂಸ್ಥೆಯ ಅಧ್ಯಕ್ಷ ಸೆಲ್ವರಾಜನ್, ಮುಖಂಡರಾದ ದಿಬ್ಬೂರು ಜಯಣ್ಣ, ಮಂಜುನಾಥ್, ಸತೀಶ್ ಕಡತನಮಲೆ, ಟಿ.ಮುನಿರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ಇಟಗಲ್ ಪುರ ಮೋಹನ್ ಸೇರಿದಂತೆ ಇನ್ನಿತರರಿದ್ದರು.