ಧರ್ಮ, ಪರಂಪರೆ, ಮೌಲ್ಯಗಳೇ ನಮ್ಮ ಶಕ್ತಿ : ಬಿ.ಎಸ್.ಯಡಿಯೂರಪ್ಪ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಬಸವ ಜಯಂತಿ, ರೇಣುಕಾಚಾರ್ಯರ ಯುಗಮಾನೋತ್ಸವ :

ಯಲಹಂಕ : ಧರ್ಮ, ಪರಂಪರೆ, ಮೌಲ್ಯಗಳೇ ನಮ್ಮ ಶಕ್ತಿಯಾಗಿದ್ದು, ಸಮಾನತೆಯ ತತ್ವದ ಅಡಿಯಲ್ಲಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಕಳೆದ ಎಂಟು ಶತಮಾನಗಳಿಂದ ಯಶಸ್ವಿಯಾಗಿ ಸಾಗುತ್ತಾ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಸಮನ್ವಯ ಸಮಿತಿ ವತಿಯಿಂದ ಯಲಹಂಕ ಉಪನಗರದ ನಿಸರ್ಗ ಮೈದಾನದ ಶ್ರೀ ಶಿವಕುಮಾರಸ್ವಾಮಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಮತ್ತು ರೇಣುಕಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ‘ಸಮಾಜ ದಾರಿ ತಪ್ಪಿದಾಗ, ಮಾನವೀಯ ಮೌಲ್ಯಗಳು ಕುಸಿದಾಗ ಬಸವಣ್ಣ, ರೇಣುಕಾಚಾರ್ಯರಂತಹ ಯುಗ ಪುರುಷರ ಆಗಮನವಾಗುತ್ತದೆ. ಹನ್ನೆರಡನೇ ಶತಮಾನದಲ್ಲಿ ಸಮಾನತೆಯ ತಳಹದಿಯಲ್ಲಿ ಉದಯವಾದ ಲಿಂಗಾಯತ ಪರಂಪರೆ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿ ಸಾಗಿ ಬಂದಿದೆ. ನಮ್ಮ ಹಿರಿಯರು ಮೌಲ್ಯಗಳ ಅಡಿಪಾಯದ ಮೇಲೆ, ಸಮಾನತೆಯ ತತ್ವದ ಮೇಲೆ ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿರುವ ವೀರಶೈವ ಲಿಂಗಾಯತ ಧರ್ಮ ಪರಂಪರೆಯನ್ನು ನಾವು ಸಹ ಅಷ್ಟೇ ಶ್ರದ್ಧೆಯಿಂದ ಕಾಪಾಕೊಂಡು ಹೋಗಬೇಕಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಯಾವುದೇ ಜಾತಿ, ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಒಗ್ಗಟ್ಟು ಮೂಲಮಂತ್ರವಾಗಿದೆ. ಒಗ್ಗಟ್ಟು ಒಡೆದರೆ ಧರ್ಮ ಅಥವಾ ಜಾತಿ ಒಡೆದು ಚೂರಾಗುತ್ತದೆ ಇದನ್ನು ನಾವು ಅರ್ಥ ಮಾಡಿಕೊಂಡು, ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಲಿಂಗಾಯತ ಧರ್ಮ ಪರಂಪರೆ ಬಸವೇಶ್ವರರು ಹನ್ನೆರಡನೇ ಶತಮಾನದಲ್ಲಿ ಎಲ್ಲಾ ಜಾತಿ, ವರ್ಗದ ಜನರನ್ನು ಸಮಾನತೆಯ ಅಡಿಯಲ್ಲಿ ಒಗ್ಗೂಡಿಸಿ ಕಟ್ಟಿದ ಭವ್ಯವಾದ ಪರಂಪರೆಯಾಗಿದೆ. ಇಂತಹ ಭವ್ಯವಾದ ಪರಂಪರೆಯನ್ನು ಒಳಪಂಗಡಗಳು, ಕುಲ ಕಸುಬಿನ ಸಂಕುಚಿತ ಭಾವನೆಯ ಅಡಿಯಲ್ಲಿ ಒಡೆಯದೆ, ಒಗ್ಗಟ್ಟಿನ ಅಡಿಯಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದ ಅವರು ಯಲಹಂಕ ಕ್ಷೇತ್ರದ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಆವರ ಕೊಡಿಗೆ ಅಪಾರವಾದುದು, ಅವರು ನೀಡಿದ ಉದಾರವಾದ ಅನುದಾನದಲ್ಲಿ ಯಲಹಂಕಕ್ಕೆ ಅಭಿವೃದ್ಧಿಯ ಸ್ಪರ್ಷ ನೀಡಲು ಸಾಧ್ಯವಾಗಿದೆ, ಯಲಹಂಕ ಮಿನಿ ವಿಧಾನಸೌಧದ ಮುಂದೆ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಬಸವೇಶ್ವರರಿಗೆ ಗೌರವ ಸಲ್ಲಿಸಲಾಗಿದೆ, ಕ್ಷೇತ್ರದಲ್ಲಿರುವ ವೀರಶೈವ ಲಿಂಗಾಯತರು ಸಹ ನಮಗೆ ಅಭೂತ ಪೂರ್ವ ಬೆಂಬಲ ನೀಡುತ್ತಾ ಸಹಕರಿಸಿದ್ದಾರೆ, ಅವರೊಟ್ಟಿಗೆ ಸದಾ ಇರುವುದಾಗಿ ತಿಳಿಸಿದರು.

ಬಸವ ಜಯಂತಿ ಮತ್ತು ರೇಣುಕಾಚಾರ್ಯರ ಯುಗಮಾನೋತ್ಸವದ ಅಂಗವಾಗಿ ಯಲಹಂಕ ಮಿನಿ ವಿಧಾನಸೌಧದ ಮುಂದಿನ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಸವೇಶ್ವರರು ಮತ್ತು ರೇಣುಕಾಚಾರ್ಯರ ಭಾವಚಿತ್ರವನ್ನು ರಥದಲ್ಲಿ ಪ್ರತಿಷ್ಠಾಪಿಸಿ ನಗರದ ರಾಜ ಬೀದಿಗಳಲ್ಲಿ ಡೊಳ್ಳು ಕುಣಿತ, ವೀರಗಾಸೆ ಮುಂತಾದ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಸಹಸ್ರಾರು ಜನ ಮೆರವಣಿಗೆ ಮೂಲಕ ವೇದಿಕೆಯ ವರೆಗೂ ಸಾಗಿದರು.

ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳಿಗೆ ಸನ್ಮಾನ, ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿದ್ಯ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಯಲಹಂಕ ಕ್ಷೇತ್ರ ಘಟಕದ ಅಧ್ಯಕ್ಷೆ ಹೇಮಲತಾ ಚಿದಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ, ಅ.ಭಾ.ವೀ.ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಾಪ್ಪನವರ್, ಮರಿಸ್ವಾಮಿ, ಸಚ್ಚಿನಂದಮೂರ್ತಿ, ಗುರುಸ್ವಾಮಿ, ಮನೋಹರ್ ಅಬ್ಬಿಗೆರೆ, ನವೀನ್ ಕುಮಾರ್, ಮೃತ್ಯುಂಜಯಸ್ವಾಮಿ ಸೇರಿದಂತೆ ಸಮನ್ವಯ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಿದ್ದರು.

Leave a Reply

Your email address will not be published. Required fields are marked *