ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಸಂಕಲ್ಪದೊಂದಿದೆ ಅರ್ಥಪೂರ್ಣವಾದ ವಿಶ್ವ ಪರಿಸರ ದಿನ ಆಚರಿಸಿದ ಮಾಹೆ ಬೆಂಗಳೂರು

ಬೆಂಗಳೂರು, 30 ಮೇ 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಬೆಂಗಳೂರು ಕ್ಯಾಂಪಸ್ ನಲ್ಲಿ ಇಂದು ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಸಂಕಲ್ಪದಿಂದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶ್ವ ಸಂಸ್ಥೆಯ “ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ” ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಸಾಂಕೇತಿಕವಾಗಿ ಗಿಡ ನೆಟ್ಟು ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಶನ್ (ಐಇಟಿಓ) ಮತ್ತು ಮಣಿಪಾಲ್ ಸೆಂಟರ್ ಫಾರ್ ದ್ವೀಪ (ಡಿಸೈನ್ ವಿತ್ ಎನ್ವಿರಾನ್ಮೆಂಟ್ ತ್ರೂ ಎಜುಕೇಶನ್, ಪ್ಲಾನಿಂಗ್ & ಅಡ್ವಕಸಿ – ದ್ವೀಪ) ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಮಾಹೆ ಬೆಂಗಳೂರಿನ ಪ್ರೊ ವೈಸ್-ಚಾನ್ಸೆಲರ್ ಪ್ರೊ. (ಡಾ.) ಮಧು ವೀರರಾಘವನ್ ಮತ್ತು ಮಣಿಪಾಲ್ ಸೆಂಟರ್ ಫಾರ್ ದ್ವೀಪದ ಪ್ರೊ. (ಡಾ.) ದೀಪ್ತಾ ಸತೀಶ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಬೆಂಗಳೂರಿನ ಪ್ರೊ ವೈಸ್-ಚಾನ್ಸೆಲರ್ ಪ್ರೊ. (ಡಾ.) ಮಧು ವೀರರಾಘವನ್ ಅವರು, “ಪ್ರತೀವರ್ಷ ವಿಶ್ವದಾದ್ಯಂತ 400 ಮಿಲಿಯನ್ ಟನ್‌ ನಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ, ಹೀಗಾಗಿ ಪರಿಸರ ಸಂರಕ್ಷಣೆಗೆ ತಕ್ಷಣದ ಕೈಗೊಳ್ಳುವ ಅಗತ್ಯವಿದೆ. ಜವಾಬ್ದಾರಿಯುತ ವಿಶ್ವವಿದ್ಯಾಲಯವಾಗಿ ನಾವು ಶೂನ್ಯ- ತ್ಯಾಜ್ಯ ಸಾಧಿಸುವುದಕ್ಕೆ ಬದ್ಧರಾಗಿದ್ದೇವೆ. ನಾವು ಕ್ಯಾಂಪಸ್‌ ನಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ನಿಯಂತ್ರಿಸಿದ್ದೇವೆ ಮತ್ತು ಸುಸ್ಥಿರ ಪರ್ಯಾಯವಾಗಿ ಗಾಜಿನ ಬಾಟಲಿಂಗ್ ಬಳಕೆ ಪ್ರಾರಂಭಿಸಿದ್ದೇವೆ. ವೇದಾಂತ ಜೊತೆಗಿನ ಪಾಲುದಾರಿಕೆ ಮತ್ತು ಸಮಗ್ರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಇಂದು ನಾವು ತೆಗೆದುಕೊಳ್ಳುವ ಪ್ರತೀ ಸಣ್ಣ ಕ್ರಮವೂ ಸುಸ್ಥಿರ ಭವಿಷ್ಯಕ್ಕೆ ಭದ್ರ ಅಡಿಪಾಯ ಮತ್ತು ಶಿಕ್ಷಣ ಸಂಸ್ಥೆಗಳು ಪರಿಸರ ಬದಲಾವಣೆಗೆ ಪ್ರೇರಣೆ ನೀಡಬಲ್ಲವು ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಹೇಳಿದರು.

ಪ್ರಧಾನ ಭಾಷಣವನ್ನು ಮಾಡಿದ ಭಾರತದಲ್ಲಿರುವ ಈಕ್ವಡಾರಿನ ರಾಯಭಾರಿ ಫರ್ನಾಂಡೋ ಬುಚೆಲಿ ಅವರು, “ಮಣಿಪಾಲ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ದೊರೆತ ಗೌರವವಾಗಿದೆ. ಮಾಹೆಯು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದೆ. ಸಂಸ್ಥೆಯ ಪ್ರೊಫೆಸರ್‌ಗಳು ಮತ್ತು ವಿದ್ಯಾರ್ಥಿಗಳ ಪರಿಸರ ಸ್ನೇಹಿ ನಡವಳಿಕೆ ಗಮನಾರ್ಹವಾಗಿದೆ. ಈಕ್ವೆಡಾರ್ 2019 ರಲ್ಲಿ ಬಾಸೆಲ್ ಕನ್ವೆನ್ಷನ್‌ ನಲ್ಲಿ ಪ್ಲಾಸ್ಟಿಕ್ ಮಾಲಿನ್ಯ ವಿರುದ್ಧವಾಗಿ ಜಾಗತಿಕ ಮಟ್ಟದಲ್ಲಿ ಮೊದಲು ಪ್ರಸ್ತಾವನೆ ಸಲ್ಲಿಸಿತ್ತು ಮತ್ತು ಈಗ ಯುಎನ್‌ ನ ಇಂಟರ್‌ ಗವರ್ನ್‌ಮೆಂಟಲ್ ನೆಗೋಶಿಯೇಟಿಂಗ್ ಕಮಿಟಿಯ ಅಧ್ಯಕ್ಷತೆ ವಹಿಸಿದೆ. ಜರ್ಮನಿ, ಗಿನಿಯಾ ಮತ್ತು ವಿಯೆಟ್ನಾಂನಂತಹ ರಾಷ್ಟ್ರಗಳೊಂದಿಗೆ ಕಾನೂನುಬದ್ಧ ಜಾಗತಿಕ ಒಪ್ಪಂದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿ ಈಕ್ವೆಡಾರ್ ಕುಟುಂಬವೂ ಈ ಬದ್ಧತೆಯ ಭಾಗವಾಗಿದೆ” ಎಂದು ಹೇಳಿದರು.

ಪರಿಸರವಾದಿ, ಪ್ರಾಧ್ಯಾಪಕರು ಹಾಗು ಬೆಂಗಳೂರಿನ ಐಐಎಂನ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಕೇಂದ್ರದ ಅಧ್ಯಕ್ಷರಾದ ಪ್ರೊ. ಎಂ. ವಿ. ರಾಜೀವ್ ಗೌಡ ಮತ್ತು ಐಇಟಿಓ ಅಧ್ಯಕ್ಷ ಡಾ. ಆಸಿಫ್ ಇಕ್ಬಾಲ್ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಪಣತೊಟ್ಟಿರುವ ವಿವಿಧ ಕ್ಷೇತ್ರದ ಗಣ್ಯರಾದ ಯೂನಿಫೈಡ್ ಇಂಟೆಲಿಜೆನ್ಸ್ ಪ್ರೈ. ಲಿಮಿಟೆಡ್‌ ನ ಸಹ-ಸಂಸ್ಥಾಪಕ ಟಿ. ಪಾಲ್ ಕೋಶಿ, ಸಮುದ್ರ ಆಹಾರ ಉದ್ಯಮ ತಜ್ಞ ದಾವೂದ್ ಸೇಠ್, ಶಿಕ್ಷಣತಜ್ಞೆ ಮತ್ತು ಪರಿಸರ ತತ್ವಜ್ಞಾನಿ ಡಾ. ಮೀರಾ ಬೈಂದೂರ್ ಹಾಗು ಪ್ರೊ. ಎಂ. ವಿ. ರಾಜೀವ್ ಗೌಡ ಪ್ಲಾಸ್ಟಿಕ್ ನಿರ್ಮೂಲನೆಯ ವಿವಿಧ ವಿಚಾರಗಳನ್ನು ಹಂಚಿಕೊಂಡರು.

ಮಾಹೆ ಈಗಾಗಲೇ ಅನೇಕ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡಿದ್ದು, ಸುತ್ತಮುತ್ತಲಿನ ಕೆರೆಗಳ ಸಂರಕ್ಷಣೆ ಮತ್ತು ಕ್ಯಾಂಪಸ್‌ ನಲ್ಲಿ ಸ್ಥಳೀಯ ಗಿಡಗಳನ್ನು ನೆಡುವ ಮೂಲಕ ಇಲ್ಲಿನ ಸ್ಥಳೀಯ ಜೀವ ವೈವಿಧ್ಯವನ್ನು ಸಮೃದ್ಧಗೊಳಿಸುವ ಕಾರ್ಯ ಮಾಡುತ್ತಿದೆ. ಮಾಹೆಯು ಸಸ್ಟೇನೇಬಲ್ ಇನ್‌ಸ್ಟಿಟ್ಯೂಶನ್ಸ್ ಆಫ್ ಇಂಡಿಯಾದ ಗ್ರೀನ್ ರ‍್ಯಾಂಕಿಂಗ್ಸ್ – ಎಸ್‌ಐಐನಲ್ಲಿ ಪ್ಲಾಟಿನಂ+ ಬ್ಯಾಂಡ್‌ ನಲ್ಲಿ ನಂ.1 ಸ್ಥಾನವನ್ನು ಪಡೆದಿದೆ.

ಸಮಾರಂಭದಲ್ಲಿ ಭಾಗವಹಿಸಿದವರೆಲ್ಲರೂ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಶಪಥ ಮಾಡಿದರು. ಇದರ ಭಾಗವಾಗಿ ಮಾಹೆಯ ಪ್ಲಾಸ್ಟಿಕೇತರ ಕ್ಯಾಂಪಸ್ ಮಾಡುವ ನಿಟ್ಟಿನಲ್ಲಿ ಕಾಡಿಕೊಂಡಿರುವ, ಸ್ವಂತ ನೀರು ಪೂರೈಸುವ ಗಿಡಗಳ ಸ್ಥಾಪನೆ, 3,200 ಮರುಬಳಕೆ ಗಾಜಿನ ನೀರಿನ ಬಾಟಲಿಗಳು , 200 ಎಂಎಲ್ ಮತ್ತು 500 ಎಂಎಳ್ ಪ್ಲಾಸ್ಟಿಕ್ ಬಾಟಲಿಗಳ ಸಂಪೂರ್ಣ ನಿಷೇಧ, ಮತ್ತು ಕ್ಯಾಂಪಸ್‌ ನಾದ್ಯಂತ ತ್ಯಾಜ್ಯ ವಿಂಗಡಣೆ ವ್ಯವಸ್ಥೆಯ ಜಾರಿಗೊಳಿಸುವಿಕೆ ಇತ್ಯಾದಿ ಯೋಜನೆಗಳನ್ನು ಬಗ್ಗೆ ಪ್ರಸ್ತಾಪಿಸಲಾಯಿತು.

ಮಣಿಪಾಲ್ ಲಾ ಸ್ಕೂಲ್, ಬೆಂಗಳೂರಿನ ಪ್ರೊಫೆಸರ್ ಸುನಿಲ್ ಜಾನ್ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *