ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ : ಎಸ್ ಆರ್ ವಿಶ್ವನಾಥ್

‘ಸಂವಿಧಾನ ಗೌರವ ಹಬ್ಬ’ದ ಪ್ರಯುಕ್ತ ಯಲಹಂಕದಲ್ಲಿ ಬೃಹತ್ ಮೆರವಣಿಗೆ :

ಯಲಹಂಕ : ಸಂವಿಧಾನ ರಚನೆ, ನಿಮ್ಮ ವರ್ಗದ ಜನತೆಗೆ ಸಮಾನ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ನೀಡಿರುವುದು ಸೇರಿದಂತೆ ದೇಶಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಭಾರತದ ಇತಿಹಾಸದಲ್ಲಿ ಅಂಬೇಡ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ರೂವಾರಿ, ಬಾಬು ಜಗಜೀವನ್ ರಾಮ್ ರವರ ಜಯಂತಿ ಪ್ರಯುಕ್ತ ಯಲಹಂಕ ನಗರ ಮಂಡಲ ಬಿಜೆಪಿ ಎಸ್.ಸಿ.ಮೋರ್ಚಾ ವತಿಯಿಂದ ಯಲಹಂಕ ಉಪನಗರದ ಶ್ರೀ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂವಿಧಾನ ಗೌರವ ಹಬ್ಬ’ ಉದ್ಘಾಟಿಸಿ ಮಾತನಾಡಿದ ಅವರು ‘ದೇಶಕ್ಕೆ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಕೊಡುಗೆ ಅಪಾರವಾಗಿದ್ದು, ದೇಶದಲ್ಲಿ ಈ ಈರ್ವರು ಮಹಾನ್ ವ್ಯಕ್ತಿಗಳು ಜನಿಸದಿದ್ದರೆ, ದೇಶದ ತಳ ಸಮುದಾಯದ ಜನತೆಯ ಸ್ಥಿತಿ ಶೋಚನೀಯವಾಗಿರುತ್ತಿತ್ತು. ಅಂಬೇಡ್ಕರ್ ಅವರು ಸಮಾನತೆಯ ಹರಿಕಾರರು, ಸಂವಿಧಾನ ರಚನೆಯ ಮೂಲಕ ದೇಶದ ಜನತೆಗೆ ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವದ ಬದುಕನ್ನು ಕಳಿಸಿಕೊಟ್ಟ ಮಹಾನ್ ಚೇತನರು. ಇಂತಹ ಮಹಾನ್ ಮಾನವತಾ ವಾದಿಯನ್ನು ಅಂದಿನ ಕಾಂಗ್ರೆಸ್ ನಾಯಕರು ಕುತಂತ್ರದಿಂದ ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿ, ರಾಜಕೀಯ ಅಧಿಕಾರ ವಂಚಿತರಾಗುವಂತೆ ಮಾಡಿದರು. ಅವರನ್ನು ಸಂಪೂರ್ಣವಾಗಿ ಮೂಲೆ ಗುಂಪು ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಿರುವ ಕಾಂಗ್ರೆಸ್ ಮುಖಂಡರಿಗೆ ಅಂಬೇಡ್ಕರ್ ಅವರ ಹೆಸರನ್ನಾಗಲಿ, ಸಂವಿಧಾನದ ಹೆಸರನ್ನಾಗಲಿ ಹೇಳುವ ಯಾವ ನೈತಿಕತೆಯೂ ಇಲ್ಲ ಎಂದರು.

2008ರಲ್ಲಿ ಯಲಹಂಕ ಶಾಸಕನಾಗಿ ಆಯ್ಕೆಯಾದ ನಂತರ ಯಲಹಂಕ ನಗರ ವ್ಯಾಪ್ತಿಯ ಎಲ್.ಬಿ.ಎಸ್. ನಗರ, ಅಂಬೇಡ್ಕರ್ ನಗರ, ಜೆ.ಪಿ.ಕಾಲನಿ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಕಾಲನಿಗಳಿಗೆ ಅಗತ್ಯ ಮೂಲಸೌಕರ್ಯವನ್ನು ನೀಡುವ ಮೂಲಕ ಅಭಿವೃದ್ಧಿಯ ಸ್ಪರ್ಷ ನೀಡಿದ್ದು, ದಲಿತ ಸಮುದಾಯದ ಸಾವಿರಾರು ಜನರಿಗೆ ಏಳೆಂಟು ಲಕ್ಷ ರು.ಗಳ ನೆರವು ನೀಡಿ ಸುಂದರ ವಾದ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಹೆಮ್ಮೆಯ ಜೀವನ ನಡೆಸುವಂತೆ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಯಲಹಂಕದಲ್ಲಿ 8 ಕೋಟಿ ರು.ವೆಚ್ಚದಲ್ಲಿ ನಗರದಲ್ಲೇ ಎರಡನೆಯ ಅತಿದೊಡ್ಡ ಹವಾ ನಿಯಂತ್ರಿತ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ, ಮಿನಿ ವಿಧಾನಸೌಧದ ಮುಂದೆ ಒಂದೂವರೆ ಕೋಟಿ ರು.ವೆಚ್ಚದಲ್ಲಿ 14 ಅಡಿಗಳ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ, ಕಡತ‌ನಮಲೆ ಗ್ರಾಮದಲ್ಲಿ 2 ಕೋಟಿ ರು.ವೆಚ್ಚದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಹೆಸರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಉಳಿದಂತೆ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಅಂಬೇಡ್ಕರ್ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ದಲಿತ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಅಭಿವೃದ್ಧಿ ಸ್ಪರ್ಷ ನೀಡಿದ್ದು, ಯಲಹಂಕ ಕ್ಷೇತ್ರದಲ್ಲಿ ದಲಿತ ಸಮುದಾಯದ ಜನತೆ ಆರ್ಥಿಕವಾಗಿ ಎಲ್ಲರಂತೆ ಹೆಮ್ಮೆಯ ಬದುಕು ನಡೆಸಲು ಅಗತ್ಯ ಸವಲತ್ತುಗಳನ್ನು ನೀಡಿ ಪ್ರೋತ್ಸಾಹ ನೀಡಲಾಗಿದೆ.

ಯಲಹಂಕ ಕ್ಷೇತ್ರದಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವ ಮೂಲಕ ಬಿಜೆಪಿ ಪಕ್ಷವನ್ನು ಸುಭದ್ರವಾಗಿ ಕಟ್ಟಲಾಗಿದೆ. ಬೆಂಗಳೂರು ನಗರದ ವಿಧಾನ ಸಭಾ ಕ್ಷೇತ್ರಗಳ ಪೈಕಿ ಎಸ್.ಸಿ‌. ಮೋರ್ಚಾ ಯಲಹಂಕದಲ್ಲಿ ಅತ್ಯಂತ ಬಲಿಷ್ಠವಾಗಿದೆ ಎಂಬುದು ಹೆಮ್ಮೆಯ ವಿಷಯ, ಪಕ್ಷದಲ್ಲಿನ ಹುದ್ದೆಯ ಅವಕಾಶಗಳನ್ನು ತುಂಬಲಷ್ಟೇ ಯಲಹಂಕದಲ್ಲಿ ಎಸ್.ಸಿ.ಮೋರ್ಚಾ ಇದೆಯೇ ಹೊರತು ಬೆರಿನ್ಯಾವ ಉದ್ದೇಶಕ್ಕೂ ಅಲ್ಲ, ಯಲಹಂಕದಲ್ಲಿ ಜಾತಿ ಮೀರಿದ ಸಮಾನತೆಯ ಆಧಾರದ ಮೇಲೆ ಬಿಜೆಪಿ ಪಕ್ಷವನ್ನು ಕಟ್ಟ ಲಾಗಿದೆ. ಇದರಿಂದಲೇ ಯಲಹಂಕ ದಲ್ಲಿ ಬಿಜೆಪಿ ಅತ್ಯಂತ ಸುಭದ್ರ ವಾಗಿದೆ ಎಂದರು.

ಕಾರ್ಯಕ್ರಮ ಅಂಗವಾಗಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮದಿನಾಚರಣೆ, ಯಲಹಂಕ ನಗರ ಮಂಡಲ ಬಿಜೆಪಿ ಎಸ್ ಸಿ ಮೋರ್ಚಾ ವತಿಯಿಂದ ಯಲಹಂಕ ಡೈರಿ ವೃತ್ತದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರದ ಮೆರವಣಿಗೆ, ವಾರ್ಡ್ 3ರ ಎಸ್.ಸಿ.ಮೋರ್ಚಾ ವತಿಯಿಂದ ಬೈಕ್ ರ್ಯಾಲಿ, ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡಳಿಗೆ ಬಾಬು ಜಗಜೀವನ್ ರಾಮ್ ಟ್ರೋಫಿ ವಿತರಣೆ ಮತ್ತು ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ ಟ್ರೋಫಿ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿರುವ ಮಹನೀಯರಿಗೆ ‘ಸಂವಿಧಾನ ಸದ್ಭಾವನಾ ಪ್ರಶಸ್ತಿ’ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಹರೀಶ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕ ಅಲೋಕ್ ವಿಶ್ವನಾಥ್, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ವೆಂಕಟಾಲ ಕೆಂಪೇಗೌಡ, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಸತೀಶ್, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ನಗರ ಮಂಡಲ ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಒಬಿಸಿ ಮೋರ್ಚಾ ಅಧ್ಯಕ್ಷ ಎಂ‌.ಮುನಿರಾಜು, ಎ.ಸಿ.ಮುನಿಕೃಷ್ಣಪ್ಪ ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್. ಕಿರಣ್, ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾ ವೀರೇಶ್,ಎಸ್ ಸಿ ಮೋರ್ಚಾ ಪದಾಧಿಕಾರಿಗಳಾದ ಅಟ್ಟೂರು ವಿಶ್ವ, ಮುನಿರಾಜು, ಸುರೇಶ್, ಎಸ್.ಸೋಮಶೇಖರ್, ಸುನಿಲ್ ಕುಮಾರ್, ಜಯಣ್ಣ, ಗಣೇಶ್, ನಾಗಯ್ಯ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *