






ಯಲಹಂಕ : ಆಸಕ್ತಿ, ಏಕಾಗ್ರತೆ ಮತ್ತು ಸತತ ಅಭ್ಯಾಸ ಉತ್ತಮ ಶಿಕ್ಷಣದ ಮೂಲಾಧಾರವಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ರೂಢಿಸಿಕೊಂಡು ವ್ಯಾಸಂಗ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಲತಾಕುಮಾರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯಲಹಂಕ ಕ್ಷೇತ್ರದ ರಾಜಾನುಕುಂಟೆ ಸರ್ಕಾರಿ ಶಾಲೆ, ಪದವಿಪೂರ್ವ ಕಾಲೇಜು ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಮತ್ತು ಅಕ್ಷರಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ವಿದ್ಯಾರ್ಥಿಗಳ ಸರ್ವಾಂಗೀಣ ಶೈಕ್ಷಣಿಕ ಪ್ರಗತಿಯ ದಿಸೆಯಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮದ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ ಮುಂತಾದ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಸರ್ಕಾರದ ಎಲ್ಲಾ ಸವಲತ್ತುಗಳ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕಂಬ ಸಂಕಲ್ಪ ಮಾಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಬಾಲ್ಯವಿವಾಹದಿಂದ ದೂರ ಉಳಿದು ಉನ್ನತ ವ್ಯಾಸಂಗ ಮಾಡಬೇಕು, ಬಾಲ್ಯವಿವಾಹ ಅಥವಾ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಸಹಾಯವಾಣಿಯ ನೆರವು ಪಡೆದು ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ರಾಜಾನುಕುಂಟೆ ಪಿಯು ಕಾಲೇಜಿನ ವಿದ್ಯಾರ್ಥಿನಿಗೆ ದಾನಿಗಳಾದ ಇಟಗಲ್ ಪುರ ಮೋಹನ್ ಅವರು 50 ಸಾವಿರ ರು.ಗಳ ಪ್ರೋತ್ಸಾಹ ಧನದ ಚೆಕ್ ವಿತರಿಸಿದರು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಲೇಖನ ಪರಿಕರಗಳ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಭವಾನಿ ಶ್ರೀನಿವಾಸ್, ಶಿಕ್ಷಣ ಇಲಾಖೆಯ ಬೆಂ.ಉತ್ತರ ಜಿಲ್ಲಾ ಉಪ ನಿರ್ದೇಶಕ ಆಂಜಿನಪ್ಪ ಕೆ.ಜಿ., ಯಲಹಂಕ ಎನ್-4 ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಮೂರ್ತಿ, ಬಿಆರ್ ಸಿ ಪ್ರಕಾಶ್, ದಾನಿಗಳಾದ ಇಟಗಲ್ ಪುರ ಮೋಹನ್, ಗ್ರಾ.ಪಂ.ಸದಸ್ಯ ಚಿಕ್ಕಣ್ಣ, ರಾಜೇಂದ್ರ, ಎಂಬೆಸಿ ಗ್ರೂಪ್ ನ ಶೈಲಾ, ಮದ್ಯಾಹ್ನ ಉಪಹಾರ ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾದೇವಿ, ಜಗದೀಶ್, ಪ್ರಾಂಶುಪಾಲರಾದ ಗಂಗಲಕ್ಷ್ಮಿ, ಮುಖ್ಯೋಪಾಧ್ಯಾಯ ಕಾಂತರಾಜು, ಶಿಕ್ಷಣ ಸಂಯೋಜಕ ರಾದ ತಿಮ್ಮಯ್ಯ, ದಯಾನಂದ ಸೇರಿದಂತೆ ಇನ್ನಿತರರಿದ್ದರು.