ಹೆಚ್ಚಿನ ಹಾಲು ಉತ್ಪಾದನೆಗೆ ಒತ್ತು ನೀಡಿ : ರೈತರಿಗೆ ಸತೀಶ್ ಕಡತನಮಲೆ ಸಲಹೆ
ದಾಸೇಸನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಭೇಟಿ, ರೈತರೊಂದಿಗೆ ಸಂವಾದ :
ಯಲಹಂಕ : ಬೆಂಗಳೂರು ಹಾಲು‌ ಒಕ್ಕೂಟಕ್ಕೆ ಪ್ರತಿದಿನ 25 ಲಕ್ಷ ಲೀಟರ್ ಹಾಲಿನ‌ ಅವಶ್ಯಕತೆ ಇದ್ದು, ಪ್ರಸ್ತುತವಾಗಿ 18.5 ಲಕ್ಷ ಲೀಟರ್ ಹಾಲು ಮಾತ್ರ ಸಂಗ್ರವಾಗುತ್ತಿದೆ. ಈ‌ ಹಿನ್ನೆಲೆಯಲ್ಲಿ, ಹೆಚ್ಚುವರಿ 6.5 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ದಿಸೆಯಲ್ಲಿ ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಹಾಲು ಉತ್ಪಾದಿಸಲು ಬೃಹತ್ ಅಭಿಯಾನದ ಮೂಲಕ ಕರೆ ನೀಡಲಾಗಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಬೆಂ.ಉತ್ತರ ನಿರ್ದೇಶಕ ಸತೀಶ್ ಕಡತನಮಲೆ ತಿಳಿಸಿದ್ದಾರೆ.
ಯಲಹಂಕ ಕ್ಷೇತ್ರದ ಹೆಸರಘಟ್ಟ ಸಮೀಪದ ದಾಸೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ, ಹಾಲು ಉತ್ಪಾದಕರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು ‘ಕನಕಪುರದಲ್ಲಿ 900 ಕೋಟಿ ರು.ವೆಚ್ಚದಲ್ಲಿ ಬೃಹತ್ ಡೈರಿ ನಿರ್ಮಾಣ ಮಾಡಿದ್ದು, ಇದರಿಂದಾಗಿ ಹಾಲು ಸಂಗ್ರಹಣೆ ಸಾಮರ್ಥ್ಯ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರು ತಮ್ಮ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ದಾಸೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರತಿದಿನ 1400 ಲೀಟರ್ ಹಾಲು ಉತ್ಪಾದನೆ ಆಗುತ್ತಿರುವುದು ಸಂತೋಷದ ವಿಷಯ. ಬೆಂಗಳೂರು ನಗರ ಪ್ರದೇಶದಲ್ಲಿ ಸಾವಿರ ಲೀಟರ್ ಗಿಂತ ಹೆಚ್ಚು ಹಾಲು ಉತ್ಪಾದಿಸುವ ಸಹಕಾರ ಸಂಘಗಳ ಸಂಖ್ಯೆ ವಿರಳ ಸಂಖ್ಯೆಯಲ್ಲಿ ಇವೆ, ಇಂತಹ ಪರಿಸ್ಥಿತಿಯಲ್ಲಿ ದಾಸೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರತಿದಿನ 1400 ಲೀಟರ್ ಹಾಲು ಉತ್ಪಾದನೆ ಯಾಗುತ್ತಿರುವುದು ಪ್ರಶಂಸಾರ್ಹ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರು ಮತ್ತು ಸಹಕಾರ ಸಂಘಗಳ ನಿರ್ದೇಶಕರೇ ಬಮೂಲ್ ನ ಮಾಲೀಕರು, ಜೀವನಾಡಿಗಳಾಗಿದ್ದು, ಅವರು ಹಾಲು ಉತ್ಪಾದನೆಯ ಜೊತೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಕಲ್ಪಿಸುವ ದಿಸೆಯಲ್ಲಿ ಅಗತ್ಯ ಪ್ರಚಾರ ಮತ್ತು ಕ್ರಮ ವಹಿಸಬೇಕಿದೆ ಎಂದರು.
ಹಾಲು ಉತ್ಪಾದಕರಿಗೆ ಹಸು ಖರೀದಿಸಲು ಮತ್ತು ಅಗತ್ಯ ಕೊಟ್ಟಿಗೆ ನಿರ್ಮಾಣಕ್ಕೆ ಐದು ಲಕ್ಷ ರು.ಗಳ ಬಡ್ಡಿ ರಹಿತ ಸಾಲ ಸೌಲಭ್ಯವಿದ್ದು, ಇದನ್ನು ಪಡೆದುಕೊಳ್ಳಲು ಸಹಕರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಲವು ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ವಿತರಿಸಲಾಯಿತು. ಇದೇ ವೇಳೆ ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ದಾಸೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರು, ಹೆಸರಘಟ್ಟ ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಎಂ.ಸುರೇಶ್, ಸಹಕಾರ ಸಂಘದ ಹಾಲಿ ಅಧ್ಯಕ್ಷ ಲಕ್ಷ್ನಯ್ಯ, ಹೆಸರಘಟ್ಟ ಗ್ರಾ.ಪಂ‌.ಅಧ್ಯಕ್ಷೆ ಪರಿಮಳ ಶ್ರೀನಿವಾಸ್, ಉಪಾಧ್ಯಕ್ಷ ಆರ್.ಶಿವಾನಂದ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್, ನಿರ್ದೇಶಕರಾದ ಸುನಿಲ್ ಕುಮಾರ್, ವನಜಾಕ್ಷಮ್ಮ, ಶಶಿಕಲಾ, ಪ್ರಕಾಶ್, ಸುಶೀಲಮ್ಮ, ಶಾಂತಮ್ಮ, ಮುನಿಯಮ್ಮ, ಹೊನ್ನಮ್ಮ, ಲಕ್ಷ್ಮಮ್ಮ ಗ್ರಾ.ಪಂ.ಸದಸ್ಯರಾದ ಪಿ.ಕೆ.ರಾಜಣ್ಣ, ಕಚೇರಿ ಕಾರ್ಯದರ್ಶಿ ಎಂ‌.ಮುನಿರಾಜು ಸೇರಿದಂತೆ ಹಾಲು ಉತ್ಪಾದಕ ರೈತರಿದ್ದರು.

Leave a Reply

Your email address will not be published. Required fields are marked *