
ಸಂಸ್ಕೃತ ಭಾಷಾ ಕಲಿಕೆ ಕುರಿತು ಜನಜಾಗೃತಿ :
ಬ್ಯಾಟರಾಯನಪುರ : ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮುಂತಾದ ಬಹು ಭಾಷೆಗಳ ಕಲಿಕೆಯಂತೆಯೇ ಸಂಸ್ಕೃತ ಭಾಷೆಯ ಕಲಿಕೆಗೂ ಸಹ ಅವಕಾಶ ಮತ್ತು ಆದ್ಯತೆ ನೀಡುವ ಕುರಿತು ಜನಜಾಗೃತಿ ಮೂಡಿಸುವ ದಿಸೆಯಲ್ಲಿ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಸುರವಾಣೀ ಸಂಸ್ಕೃತ ಫೌಂಡೇಶನ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಭಾರತ ಸಂಸ್ಕೃತ ಶೋಭಾಯಾತ್ರೆ ಯಲ್ಲಿ ಸಂಸ್ಕೃತ ಭಾಷಾ ಕಲಿಕೆ ಕುರಿತು ಜನಜಾಗೃತಿ ಮೂಡಿಸಲಾಯಿತು.
ಶೋಭಾಯಾತ್ರೆ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯದ ಬಳಿಯಿಂದ ಎನ್.ಟಿ.ಐ.ಮೈದಾನದವರೆಗೆ ಸಾಗಿತು. ಶೋಭಾಯಾತ್ರೆಯಲ್ಲಿ ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಶೋಭಾಯಾತ್ರೆ ಯಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು.
ಭಾರತ ಸಂಸ್ಕೃತ ಶೋಭಾಯಾತ್ರೆಯಲ್ಲಿ ಕುರಿತು ಶ್ರೀ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಶ್ರೀ ಅಭಯಾನಂದ ಸ್ವಾಮೀಜಿ ಅವರು ಮಾತನಾಡಿ ‘ಸಂಸ್ಕೃತ ಭಾಷೆ ಭಾರತದ ಭವ್ಯ ಪರಂಪರೆಯ ಆಧಾರ ಶಕ್ತಿಯಾಗಿದೆ. ಸಂಸ್ಕೃತ ಭಾಷೆಯ ಪ್ರಚಾರದಿಂದ ನಮ್ಮ ಒಟ್ಟಾರೆ ಭವ್ಯ ಪರಂಪರೆ ಯನ್ನೇ ಪುನರುಜ್ಜೀವನಗೊಳಿಸಲು ಸಾಧ್ಯವಿದೆ. ಸುರವಾಣೀ ಸಂಸ್ಕೃತ ಫೌಂಡೇಶನ್ ಮತ್ತು ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ಮಕ್ಕಳಲ್ಲಿ ಸಂಸ್ಕೃತ ಭಾಷಾ ಪ್ರೇಮ ಜಾಗೃತಗೊಳಿಸುವ ಮೂಲಕ ಸಂಸ್ಕೃತ ಭಾಷೆಯ ಕಲಿಕೆಗೆ ಪ್ರೋತ್ಸಾಹ, ಉತ್ತೇಜನ ನೀಡುತ್ತಿರುವುದು ನಿಜವಾಗಿಯೂ ಸಕಾಲಿಕವಾದ ಕ್ರಮವಾಗಿದೆ ಎಂದರು.
ಹಿರಿಯ ಬಿಜೆಪಿ ಮುಖಂಡ ಎ.ರವಿ ಮಾತನಾಡಿ ‘ಭಾರತದ ಸನಾತನ ಪರಂಪರೆಯ ಯೋಗ ಇಂದು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವಂತೆಯೇ, ಸನಾತನ ಭಾಷೆಯಾಗಿರುವ ಸಂಸ್ಕೃತವು ಜಗತ್ತಿನ ಎಲ್ಲಾ ಜನರ ಕಲಿಕೆಯ ಭಾಷೆಯಾಗಬೇಕಿದೆ. ಅಪಾರ ಜ್ಞಾನ ಭಂಢಾರವನ್ನು ಹೊಂದಿರುವ ವೇದ, ಆಗಮ, ಉಪನಿಷತ್ ಗಳ ಭಾಷೆಯಾಗಿರುವ ಸಂಸ್ಕೃತ ಭಾಷೆಯನ್ನು ಬಾಲ್ಯದಿಂದಲೇ ಅಭ್ಯಾಸ ಮಾಡಿಸಿದರೆ ಮಕ್ಕಳ ಜ್ಞಾನ ವಿಕಾಸವಾಗುತ್ತದೆ ಎಂದರು.
ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು, ಭಾರತ ಸಂಸ್ಕೃತ ಶೋಭಾಯಾತ್ರೆಯ ಆಯೋಜಕರಾದ ವಸಂತ ಕುಮಾರ್ ಶಾಸ್ತ್ರಿ ಮಾತನಾಡಿ ‘ಭಾರತೀಯ ಸಂಸ್ಕೃತಿಗೂ ಸಂಸ್ಕೃತ ಭಾಷೆಗೂ ಅವಿನಾಭಾವ ಸಂಬಂಧವಿದ್ದು, ಇವು ಒಂದೇ ನಾಣ್ಯದ ಎರಡು ಮುಖಗಳಂತಿವೆ. ಈ ದಿಸೆಯಲ್ಲಿ ಇತರೆ ಭಾಷೆಗಳನ್ನು ಆಡು ಭಾಷೆಯಾಗಿ ಬಳಸುವಂತೆಯೇ ಸಂಸ್ಕೃತ ಭಾಷೆಯನ್ನು ಸಹ ಆಡು ಭಾಷೆಯಾಗಿ ಕಲಿಸುವಂತಾ ಗಬೇಕು, ಕನಿಷ್ಟಪಕ್ಷ ಸರಳವಾಗಿಯಾದರೂ ಸಂಸ್ಕೃತ ಭಾಷೆಯನ್ನು ಮಕ್ಕಳು ಕಲಿಯುವಂತಾದರೆ ನಮ್ಮ ಸಂಸ್ಕೃತಿ, ಪರಂಪರೆಯ ಪೋಷಣೆಗೆ ಇಂಬು ನೀಡಿದಂತಾಗುತ್ತದೆ ಎಂದರು.
ಶೋಭಾಯಾತ್ರೆಯಲ್ಲಿ ಸುರವಾಣೀ ಫೌಂಡೇಶನ್ ನ ಅಧ್ಯಕ್ಷ ಸದಾಶಿವ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಸವರಾಜ ಡೊಂಕಬಳ್ಳಿ, ಸಮಾಜ ಸೇವಕರಾದ ಎಚ್.ರವೀಂದ್ರ, ವೆಂಕಟಾಚಲಪತಿ, ದೇವ್ ಇನ್ ಶಾಲೆಯ ಸರ್ವಮಂಗಳ ಸೇರಿದಂತೆ ದೇವ್ ಇನ್ ಶಾಲೆಯ 400 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.