ಬೆಂಗಳೂರು ಉತ್ತರ ನಗರ ಪಾಲಿಕೆಯ ಸಮಗ್ರ ಬೆಳವಣಿಗೆಗಾಗಿ ಕರ್ತವ್ಯ ನಿರ್ವಹಿಸಿ : ಪೊಮ್ಮಲ ಸುನೀಲ್ ಕುಮಾರ್.

ಬೆಂಗಳೂರು: ಸೆ. 05:

ಬೆಂಗಳೂರು ಉತ್ತರ ನಗರ ಪಾಲಿಕೆಯ ಸಮಗ್ರ ಬೆಳವಣಿಗೆಗಾಗಿ ಕರ್ತವ್ಯ ನಿರ್ವಹಿಸಲು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಅಧಿಕಾರಿಗಳಿಗೆ ಕರೆ ನೀಡಿದರು.

ಯಲಹಂಕ ಎನ್.ಇ.ಎಸ್ ವೃತ್ತದ ಬಳಿಯ ಡಾ: ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಇಂದು ಅಧಿಕಾರಿ/ನೌಕರರ ಪರಿಚಯ ಹಾಗೂ ವಿಚಾರ ವಿನಿಮಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ಸ್ಥಳೀಯವಾಗಿರುವ ಸಮಸ್ಯೆಗಳನ್ನು ಅರ್ಥೈಸಿಕೊಂಡು ಬಗೆಹರಿಸುವ ಕೆಲಸ ಮಾಡಬೇಕು. ನಿರ್ಲ್ಯಕ್ಷ್ಯದಿಂದ ಕರ್ತವ್ಯ ನಿರ್ವಹಿಸುವವರ ವಿರುದ್ದ ಕ್ರಮಕೈಗೊಳ್ಳಲಾಗುವುದಾಗಿ ಸೂಚನೆ ನೀಡಿದರು.

ಕಲ್ಯಾಣ ಕಾರ್ಯಕ್ರಮಗಳಡಿ ಪೌರಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಸಾಕಷ್ಟು ಸೌಲಭ್ಯಗಳಿವೆ. ಅವೆಲ್ಲವೂ ಅವರಿಗೆ ಸಿಗುವಂತೆ ನಾವು ಮಾಡಬೇಕು. ಜೊತೆಗೆ ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಇತ್ಯರ್ಥ ಮಾಡುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.

ನಾಗರಿಕರಿಗೆ ಮೊದಲ ಆದ್ಯತೆ ನೀಡಿ:

ಅಧಿಕಾರಿಗಳಿಗೆ ಸೌಲಭ್ಯಗಳಿರಲಿ, ಇಲ್ಲದಿದಲಿ ನಾಗರಿಕಗೆ ಮೊದಲ ಆದ್ಯತೆ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಅದನ್ನು ಬಗೆಹರಿಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಅದರ ಜೊತೆಗೆ ಅಧಿಕಾರಿ/ಸಿಬ್ಬಂದಿಗಳ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಹುಡುಕಿ ಬಗೆಹರಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.

ಆಸ್ತಿ ತೆರಿಗೆ ಸಂಗ್ರಹಕ್ಕೆ ಪ್ರಾಮುಖ್ಯತೆ:

ಕಂದಾಯ ವಿಭಾಗವು ಪಾಲಿಕೆಗೆ ಅತ್ಯಂತ ಅವಶ್ಯಕವಾಗಿದ್ದು, ಎಲ್ಲಾ ಕಾರ್ಯನಿರ್ವಹಕ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಕಂದಾಯ ಸಂಗ್ರಹಣೆಗೆ ಶ್ರಮಿಸಬೇಕು. ಈಗಾಗಲೇ ನೀಡಿರುವ ಗುರಿಯಂತೆ ಹೆಚ್ಚಿನ ಕಂದಾಯ ಸಂಗ್ರಹಿಸಲು, ಕಂದಾಯ ಪರಿಮಿತಿಯಿಂದ ಹೊರಗುಳಿದ ಹೊಸ ಆಸ್ತಿಗಳನ್ನು ಕಂದಾಯ ವ್ಯಾಪ್ತಿಗೆ ತರಲು, ಕಂದಾಯ ಪರಿಷ್ಕರಣೆ ಮಾಡಲು ಹಾಗೂ ಇದರ ಜೊತೆಗೆ ಇ-ಖಾತಾ, ಚುನಾವಣಾ ಕಾರ್ಯ, ಸರ್ವೆ, ಗಣತಿ ಕಾರ್ಯ ಹಾಗೂ ಪಾಲಿಕೆಯಿಂದ ನಿರ್ದೇಶಿಸಿದ್ದಲ್ಲಿ ಇತರೆ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಸೂಚಿಸಿದರು.

ವಿದ್ಯುತ್ ಕಂಬಗಳ ಪರಿಶೀಲನೆ ಮಾಡಿ:

ಪಾಲಿಕೆಯ ವಿದ್ಯುತ್ ವಿಭಾಗದ ಅಭಿಯಂತರು ಹಾಗೂ ಸಿಬ್ಬಂದಿಗಳು ಇಂದಿನಿಂದ ಮೂರು ದಿನಗಳ ಕಾಲ ಎಲ್ಲಾ ಪ್ರದೇಶಗಳನ್ನು ತಪಾಸಣೆ ನಡೆಸಿ, ಬೀದಿಗಳಲ್ಲಿ ಹಾಗೂ ಉದ್ಯಾನವನಗಳಲ್ಲಿ ದೀಪಗಳನ್ನು ಸರಿಪಡಿಸಿ, ವರದಿ ಸಲ್ಲಿಸಲು ಸೂಚನೆ ನೀಡಿದರು.

ಸಂಪೂರ್ಣ ಸ್ವಚ್ಛತೆಗೆ ಆದ್ಯತೆ:

ಪೌರಕಾರ್ಮಿಕರಿಗೆ ರಸ್ತೆ ಗುಡಿಸುವ ಜವಾಬ್ದಾರಿ ಮಾತ್ರವಲ್ಲ. ಗ್ರೇಟಿಂಗ್ ಗಳ ಬಳಿ ಸ್ವಚ್ಛತೆ ಕಾಪಾಡಿ ಶೋಲ್ಡರ್ ಡ್ರೈನ್ ಗೆ ನೀರು ಸರಾಗವಾಗಿ ಹೋಗುವ ಕೆಲಸ ಕೂಡ ಮಾಡಬೇಕು. ಪಾದಚಾರಿ ಮಾರ್ಗಗಳಲ್ಲಿಯೂ ಸ್ವಚ್ಛತೆ ಕಾಪಾಡಬೇಕೆಂದು ಸೂಚಿಸಿದರು.

ರಸ್ತೆ ಗುಂಡಿಗಳನ್ನು ಮುಚ್ಚುವುದು:

ರಸ್ತೆ ಮೇಲೆ ನೀರು ನಿಂತಾಗ ರಸ್ತೆ ಗುಂಡಿಗಳು ಹೆಚ್ಚಾಗಿ ಬೀಳಲಿವೆ. ಈ ಸಂಬಂಧ ಬಿದ್ದ ನೀರು ರಸ್ತೆಯಲ್ಲಿ ನಿಲ್ಲದಂತೆ ಮಾಡಬೇಕು. ಎಸ್.ಒ.ಪಿ ಪ್ರಕಾರ ರಸ್ತೆಗುಂಡಿಗಳನ್ನು ಸರಿಯಾಗಿ ಮುಚ್ಚುವ ಕೆಲಸ ಮಾಡಬೇಕು. ಜೊತೆಗೆ ರಸ್ತೆಯಲ್ಲಿ ಒಳಚರಂಡಿ ಚೇಂಬರ್ಸ್ ರಸ್ತೆ ಮಟ್ಟಕ್ಕೆ ಹಾಕಬೇಕಿದ್ದು, ಅದನ್ನು ಪರಿಶೀಲಿಸಿ ತಾಂತ್ರಿಕವಾಗಿ ಸರಿಯಾಗಿ ಮಾಡಬೇಕು. ನಾವು ಗುಣಮಟ್ಟ ಕೆಲಸಗಳನ್ನು ಮಾಡಿದರೆ ಜನರು ಸ್ವತಃ ನಾವು ಮಾಡುವ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದರು.

ಬೃಹತ್ ನೀರುಗಾಲುವೆಗಳಲ್ಲಿ ಸ್ವಚ್ಚತೆ ಕಾಪಾಡಿ:

ಮಳೆ ಈಗಾಗಲೇ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಗಳಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ. ಈ ಸಂಬಂಧ ಬೃಹತ್ ನೀರುಗಾಲುವೆಗಳಲ್ಲಿ ಸಂಗ್ರಹವಾಗಿರುವ ಕಸ ಹಾಗೂ ಹೂಳನ್ನು ನಿರಂತರವಾಗಿ ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಸೂಚನೆ ನೀಡಿದರು.

ವಿವಿಧ ಇಲಾಖೆಗಳ ಅಗಾಧ ಪರಿಣಿತಿ:

ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಗಾಧ ಪರಿಣಿತಿ ಹೊಂದಿದ್ದಾರೆ. ಕಂದಾಯ ಇಲಾಖೆಯ ಆಯುಕ್ತಾಲಯದಲ್ಲಿ ಮೊಟ್ಟ ಮೊದಲ ಆಯುಕ್ತರಾಗಿ ಕರ್ತವ್ಯವನ್ನು ಪ್ರಾರಂಭಿಸಿದರು. ಕ್ರಮೇಣ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಬಿಬಿಎಂಪಿಯಲ್ಲಿ ಅಪರ ಜಿಲ್ಲಾ ಜುನಾವಣಾಧಿಕಾರಿ (ADEO) ಆಗಿ ಕರ್ತವ್ಯ ನಿರ್ವಹಿಸಿ, ಕಲಬುರಗಿ ಕಾರ್ಪೋರೇಷನ್ ಆಯುಕ್ತರಾಗಿ ಹಾಗೂ ಬಾಗಲಕೋಟೆ, ಬಿಜಾಪುರ, ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಬೆಂಗಳೂರು ಉತ್ತರ ನಗರ ಪಾಲಿಕೆಯ ಪ್ರಥಮ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ನಿರ್ದೇಶನದಂತೆ ಎಲ್ಲರೂ ಕರ್ತವ್ಯ ನಿರ್ವಹಿಸೋಣ ಎಂದು ಜಂಟಿ ಆಯುಕ್ತರು ತಿಳಿಸಿದರು.

ಅಪರ ಆಯುಕ್ತರು (ಅಭಿವೃದ್ಧಿ) ಆದ ಲತಾ ಆರ್ ರವರು ಮಾತನಾಡಿ, ಉತ್ತರ ನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಒಂದು ತಂಡವಾಗಿ ಕೆಲಸ ಮಾಡಿ ಉತ್ತಮ ನಗರ ಪಾಲಿಕೆಯನ್ನಾಗಿ ಮಾಡೋಣ ಎಂದರು.

ಈ ವೇಳೆ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಡಾ: ಮಮತಾ ಬಿ.ಕೆ ಹಾಗೂ ಮಂಗಳ ಗೌರಿ, ಮುಖ್ಯ ಅಭಿಯಂತರರಾದ ರಂಗನಾಥ್, ಯಮುನಾ, ಕಾರ್ಯಪಾಲಕ ಅಭಿಯಂತರರು, ಕಂದಾಯ ಅಧಿಕಾರಿಗಳು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *