ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ನಿರ್ಮಾತೃಗಳು : ಎಸ್ ಆರ್ ವಿಶ್ವನಾಥ್

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಂ. ಉತ್ತರ ವಲಯ-4ರ ವತಿಯಿಂದ ಶಿಕ್ಷಕರ ದಿನಾಚರಣೆ :

ಯಲಹಂಕ : ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ನಿರ್ಮಾತೃಗಳು, ಉತ್ತಮ ಗುರುವಿನ ಸಾಮಿಪ್ಯ ಮತ್ತು ಸಾನಿದ್ಯವು ಶಿಷ್ಯನನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಂ. ಉತ್ತರ ವಲಯ- 4, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಯಲಹಂಕ ಉಪನಗರದ ಖಾಸಗಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರ ಆಯೋಜಿಸಿದ್ದ 2025ನೇ ಸಾಲಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮಹತ್ತರವಾದ ಪಾತ್ರ ವಹಿಸುತ್ತಾರೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ, ಶಿಸ್ತು, ಸಂಯಮ, ಮಾನವೀಯ ಮೌಲ್ಯಗಳು, ದೇಶಭಕ್ತಿಯಂತಹ ಸಕಾರಾತ್ಮಕ ಮೌಲ್ಯಗಳನ್ನು ಬೋಧಿಸಿದರೆ ಆ ಮಕ್ಕಳು ತನ್ನಿಂತಾನೇ ಸತ್ ಪ್ರಜೆಯಾಗಿ ರೂಪುಗೊಂಡು, ಸಮಾಜದ ಆಸ್ತಿಯಾಗುತ್ತಾರೆ. ಈ ತೆರನಾದ ಶಿಕ್ಷಣ ಬೋಧಿಸದಿದ್ದರೆ ಅದೇ ಮಕ್ಕಳು ಸಮಾಜಕ್ಕೆ ಹೊರೆಯಾಗುತ್ತಾರೆ. ಶಿಕ್ಷಕರು ಮಕ್ಕಳ ಭವಿಷ್ಯದ ಶಿಲ್ಪಿಗಳಿದ್ದಂತೆ, ಅವರು ಕೆತ್ತಿದಂತೆ ಮಕ್ಕಳು ರೂಪುಗೊಳ್ಳುತ್ತಾರೆ ಈ ಬಗ್ಗೆ ಶಿಕ್ಷಕರು ದೀರ್ಘವಾದ ಆಲೋಚನೆ ಮಾಡಬೇಕು.

2000 ಇಸವಿಯಲ್ಲಿ ನಾನು ಹೆಸರಘಟ್ಟ ಜಿಲ್ಲಾ ಪಂಚಾಯತಿ ಸದಸ್ಯನಾಗಿದ್ದಾಗ ಮೊದಲ ಬಾರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದೆ, ಅಂದಿನಿಂದ ಇಂದಿನವರೆಗೂ ಸತತ 25 ವರ್ಷಗಳಿಂದ ಶಿಕ್ಷಕರೊಟ್ಟಿಗೆ ಇದ್ದೇನೆ, ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ, ಅವರ ಅಹವಾಲುಗಳಿಗೆ ಧ್ವನಿಯಾಗಿ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಯಲಹಂಕ ಕ್ಷೇತ್ರದ ಸರ್ಕಾರಿ ಶಾಲೆಗಳು ಶೈಕ್ಷಣಿಕವಾಗಿ ರಾಜ್ಯದಲ್ಲಿ ಹೆಗ್ಗಳಿಕೆಯ ಹೆಸರು ಗಳಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ. ಶಿಕ್ಷಕರ ಪ್ರಾಮಾಣಿಕ ಕಾರ್ಯ ವೈಖರಿಯಿಂದಲೇ ಯಲಹಂಕ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರಿಗೂ ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಬೆಂ. ಉತ್ತರ ವಲಯ -4ರ ವ್ಯಾಪ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಶಿಕ್ಷಕರು ಮತ್ತು ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಹೊಂದಿದ ಹಲವು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡ, ಬೆಂ.ಉತ್ತರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆಂಜಿನಪ್ಪ, ಬೆಂ.ಉತ್ತರ ವಲಯ-4ರ ಕ್ಷೇತ್ರ ಶಿಕ್ಷಣಾಧಿಕಾರಿ ಶೈಲ ಆರ್.ಎನ್., ಬಿ.ಆರ್.ಸಿ. ಪ್ರಕಾಶ್ ಬಿ.ಕೆ., ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂ.ಉತ್ತರ ಜಿಲ್ಲಾಧ್ಯಕ್ಷ ಕೆ.ಎಸ್.ಗಿರೀಶ್, ಬೆಂ. ಉತ್ತರ ಜಿಲ್ಲಾ ಎಸ್.ಸಿ., ಎಸ್.ಟಿ.ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಭದ್ರಾನಾಯಕ್, ಕ.ರಾ.ಪ.ಪ್ರಾ.ಶಾಲಾ ಶಿಕ್ಷಕರ ಸಂಘದ ಬೆಂ.ಉತ್ತರ ಜಿಲ್ಲಾಧ್ಯಕ್ಷ ಎಚ್.ಶೇಖರಪ್ಪ ದೈಹಿಕ ಶಿಕ್ಷಣ ಪರಿವೀಕ್ಷಕ ಗಂಗಪ್ಪ ಮಲಘಾಣ ಸೇರಿದಂತೆ ಬೆಂಗಳೂರು ಉತ್ತರ ವಲಯ ವ್ಯಾಪ್ತಿಯ ಹಲವು ಶಾಲೆಗಳ ಶಿಕ್ಷಕರಿದ್ದರು.

Leave a Reply

Your email address will not be published. Required fields are marked *