








ಭೂಮಿ ಕಳೆದುಕೊಂಡ ರೈತರಿಗೆ ವಿಶ್ವನಾಥ್ ಅಭಯ :
ಬಿಡಿಎ ವಿಧಿಸಿರುವ ಅವೈಜ್ಞಾನಿಕ ಪುರೋಭಿವೃದ್ಧಿ ತೆರಿಗೆ ಬಗ್ಗೆ ರೈತರ ಆಕ್ಷೇಪ :
ಯಲಹಂಕ : ಡಾ.ಕೆ.ಶಿವರಾಮ್ ಕಾರಂತ. ಬಡಾವಣೆ ನಿರ್ಮಾಣ ಯೋಜನೆಗಾಗಿ ತಮ್ಮ ಅಮೂಲ್ಯ ಭೂಮಿ ಕಳೆದುಕೊಂಡಿರುವ 17 ಗ್ರಾಮಗಳ ರೈತರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ರೀತಿಯ ಅನ್ಯಾಯ ವಾದರೆ ಸಹಿಸಿಕೊಂಡು ಕೂರುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಗ್ರಾಮಸ್ಥರು ಮತ್ತು ರೈತರಿಗೆ ಅಭಯ ನೀಡಿದರು.
ಡಾ.ಕೆ.ಶಿವರಾಮ್ ಕಾರಂತ ಬಡಾವಣೆ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರ ವತಿಯಿಂದ ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ‘ಜೆಸಿಸಿ ಕಮಿಟಿಯಿಂದ ದೃಢೀಕರಣ ಪತ್ರ ನೀಡಿರುವ ಮನೆಗಳಿಗೆ ಬಿಡಿಎ ವಿಧಿಸಿರುವ ಅವೈಜ್ಞಾನಿಕ ಪುರೋಭಿವೃದ್ಧಿ ತೆರಿಗೆ’ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಸ್ಥಳೀಯ ಗ್ರಾಮಸ್ಥರು ಮತ್ತು ರೈತರ ಹಲವು ಸವಾಲುಗಳು, ಪರ-ವಿರೋಧ, ಪ್ರತಿರೋಧ, ಹೋರಾಟಗಳನ್ನು ದಾಟಿ ಬಿಡಿಎ ವತಿಯಿಂದ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದ್ದು, ಆರಂಭದಲ್ಲಿ ಬಡಾವಣೆ ನಿರ್ಮಾಣ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದ ರೈತರು ಇದೀಗ ಬಡಾವಣೆ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿರುವುದನ್ನು ಕಂಡು ಕೊಂಚ ಸಮಾಧಾನ ಪಟ್ಟುಕೊಂಡಿದ್ದಾರೆ. ಭೂ ಪರಿಹಾರವಾಗಿ ನೀಡಿರುವ ಶೇಕಡಾ 40% ನಿವೇಶನಗಳನ್ನು ಬಹಳಷ್ಟು ಮಂದಿ ಒಪ್ಪಿಕೊಂಡು, ಅದನ್ನು ಪಡೆಯಲು ಪರಿಹಾರ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಬಡಾವಣೆ ವ್ಯಾಪ್ತಿಯಲ್ಲಿ ಈ ಹಿಂದೆಯೇ ನಿವೇಶನ ಖರೀದಿಸಿ, ಮನೆಗಳನ್ನು ಕಟ್ಟಿಕೊಂಡಿರುವ ಮನೆಗಳನ್ನು ತೆರವುಗೊಳಿಸದಂತೆ ಕ್ರಮ ವಹಿಸಲಾಗಿದೆ. ಆದರೆ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳಲ್ಲಿ ಪುರೋಭಿವೃದ್ಧಿ ಶುಲ್ಕ ನಿಗಧಿ ವಿಷಯದಲ್ಲಿ ಬಿಡಿಎ ಸರಿಯಾದ ಮಾನದಂಡ ಅನುಸರಿಸಿಲ್ಲ. ಪ್ರತಿ ಗ್ರಾಮಗಳಿಗೆ ಸಮಾಧಾನಕರವಾದ ಏಕರೂಪದ ಅಭಿವೃದ್ಧಿ ಶುಲ್ಕ ವಿಧಿಸುವ ಬದಲಿಗೆ ಪ್ರತಿ ಗ್ರಾಮಕ್ಕೆ ವಿಭಿನ್ನ ರೀತಿಯ ಅಭಿವೃದ್ಧಿ ಶುಲ್ಕ ವಿಧಿಸಿರುವುದು ಸ್ಥಳೀಯ ಗ್ರಾಮಸ್ಥರ ಆಕ್ಷೇಪ, ಆಕ್ರೋಶಕ್ಕೆ ಕಾರಣವಾಗಿದ್ದು, ಕೆಲ ಗ್ರಾಮಗಳಿಗೆ ಅತಿ ಕಡಿಮೆ ಅಭಿವೃದ್ಧಿ ಶುಲ್ಕ ವಿಧಿಸಲಾಗಿದೆ, ಪಕ್ಕದಲ್ಲೇ ಇರುವ ಗ್ರಾಮಗಳಿಗೆ ಅತ್ಯಧಿಕ ಅಭಿವೃದ್ಧಿ ಶುಲ್ಕ ವಿಧಿಸಿರುವುದು ನಿವಾಸಿಗಳ ಆಕ್ಷೇಪಕ್ಕೆ ಕಾರಣವಾಗಿದೆ. ಈ ಕುರಿತಂತೆ ಎಲ್ಲಾ ಗ್ರಾಮಗಳಿಗೂ ಏಕರೂಪದ ಅಭಿವೃದ್ಧಿ ಶುಲ್ಕ ವಿಧಿಸಬೇಕೆಂಬುದು ನಿವಾಸಿಗಳ ಒತ್ತಾಯವಾಗಿದ್ದು, ಈ ಕುರಿತು ನನ್ನ ಬಳಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಾನಿಂದು ಈ ಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಈ ಕುರಿತಂತೆ ಬಿಡಿಎ ಆಯುಕ್ತರ ಬಳಿ ಮಾತನಾಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದೇನೆ, ಏಕರೂಪದ ಅಭಿವೃದ್ಧಿ ಶುಲ್ಕ ನಿಗಧಿ ಜಾರಿಗೆ ತರುವ ವಿಶ್ವಾಸವಿದೆ ಎಂದರು.
ನಾನು ಬಿಡಿಎ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಗ್ರಾಮಗಳ ಸಂತ್ರಸ್ತ ರೈತರಿಗೆ ಅವರ ಜಮೀನಿನಲ್ಲೇ ನಿವೇಶನ ನೀಡಬೇಕು, ಸಾಧ್ಯವಾಗದಿದ್ದರೆ ಪಕ್ಕದ ಜಮೀನಿನಲ್ಲಿ ಅಥವಾ ಅದೇ ಗ್ರಾಮಕ್ಕೆ ಒಳಪಡುವ ಪ್ರದೇಶದಲ್ಲೇ ನಿವೇಶನ ನೀಡಬೇಕೆಂಬ ನಿಯಮಾವಳಿ ರೂಪಿಸಲಾಗಿತ್ತು, ಅದರಂತೆಯೇ ಈಗಲೂ ಸಹ ಅದೇ ಮಾನದಂಡ ಅನುಸರಿಸಿ ಆಯಾ ಗ್ರಾಮದ ರೈತರಿಗೆ ಅದೇ ಗ್ರಾಮದಲ್ಲಿ ನಿವೇಶನ ನೀಡಬೇಕು ಎಂಬ ಮಾತಿಗೆ ಬದ್ಧನಾಗಿದ್ದು, ಇದರ ಜಾರಿಗಾಗಿ ಗ್ರಾಮಸ್ಥರು, ರೈತರು, ನಿವಾಸಿಗಳ ಒಟ್ಟಿಗಿದ್ದು, ಶೀಘ್ರ ಜಾರಿಗೆ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಿ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿಯೂ ಸಹ ಬಿಡಿಎ ಮಾನದಂಡದಂತೆ ಸೌಲಭ್ಯಗಳನ್ನು ನೀಡಬೇಕು ಎಂಬುದು ನಮ್ಮ ಆಶಯವಾಗಿದ್ದು, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಬಡಾವಣೆ ವ್ಯಾಪ್ತಿಯ ಗ್ರಾಮಸ್ಥರು ಮತ್ತು ನಿವಾಸಿಗಳ ಜೊತಗಿದ್ದು, ಪರಿಹರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮಸ್ಥರು, ರೈತ ಮುಖಂಡರಾದ ರಾಮಗೊಂಡನಹಳ್ಳಿ ರಮೇಶ್, ಗಂಟೆಗಾನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮುನಿರಾಜು, ಬಸವರಾಜ ಪಾದಯಾತ್ರಿ, ಎಚ್.ಸುರೇಶ್(ಟೆಂಟ್ ಹೌಸ್), ಪ್ರಭಾಕರ್, ಆರ್.ರಾಜೇಶ್, ಗ್ರಾ.ಪಂ.ಸದಸ್ಯರಾದ ನಾಗರಾಜ್, ಅಕ್ಕಯ್ಯಮ್ಮ, ಆಂಜಿನಮ್ಮ, ನಾರಾಯಣಪ್ಪ, ಪ್ರಕಾಶ್, ಕೆಂಪಣ್ಣ, ನಂಜಪ್ಪ, ವೆಂಕಟರಾಮು ಸೇರಿದಂತೆ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಗ್ರಾಮಗಳ ನಿವಾಸಿಗಳಿದ್ದರು.