ಡಾ.ರಾಜ್‍ಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕರು : ಡಾ.ಎಲ್.ಹನುಮಂತಯ್ಯ
ಡಾ.ಮಂಜುನಾಥ ಅದ್ದೆ ಅವರ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’ ಬಿಡುಗಡೆ :
ಯಲಹಂಕ : ಡಾ.ರಾಜ್‍ಕುಮಾರ್ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದು, ಸಮಾಜದಲ್ಲಿನ ನಿಮ್ನ ವರ್ಗದ ಜನತೆಗೆ ತಮ್ಮ ವಿಭಿನ್ನ ಪಾತ್ರಗಳು, ಸಂದೇಶಯುಕ್ತವಾದ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಸಾಮಾಜಿಕ ಪರಿವರ್ತನೆಗೆ ಅವರು ಅನುಪಮ‌ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ, ಮಾಜಿ ರಾಜ್ಯ ಸಭಾ ಸದಸ್ಯ ಎಲ್.ಹನುಮಂತಯ್ಯ ಅಭಿಪ್ರಾಯಪಟ್ಡರು.
ಯಲಹಂಕ ಕ್ಷೇತ್ರದ ಕಾಕೋಳು ಗ್ರಾಮದ ಖಾಸಗಿ ರೆಸಾರ್ಟ್ ನಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಮಂಜುನಾಥ ಅದ್ದೆ ಅವರು‌ ಡಿ.ಲಿಟ್. ಪದವಿಗಾಗಿ ರಚಿಸಿದ್ದ ಸಂಶೋಧನಾ ಲೇಖನ ‘ಬಡವರ ರಾಜಕುಮಾರ’ ಕೃತಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು ‘ರಾಜಕುಮಾರ್ ಅವರು ಹೆಚ್ಚು ಓದದಿದ್ದರೂ ಅನುಭವದ ಆಧಾರದ ಮೇಲೆ ಸಮಾಜದ ಓರೆಕೋರೆಗಳು, ವರ್ಗ, ಜಾತಿ ಸಂಘರ್ಷದಂತಹ ಗಹನ ವಿಷಯಗಳನ್ನು ಆಳವಾಗಿ ಅರಿತಿದ್ದರು.‌ ಅವರು ತಮ್ಮ ಬಹುತೇಕ ಚಿತ್ರಗಳಲ್ಲಿ ಅಸಮಾನತೆ, ಅನಾದರತೆ, ಅಸಹಜತೆಗಳ ವಿರುದ್ಧ ಸಿಡಿದೇಳುವ ಪಾತ್ರಗಳನ್ನು ನಿರ್ವಹಿಸುವ ಮೂಲಕ ಧ್ವನಿಯಿಲ್ಲದ ಅಸಂಖ್ಯಾತ ಬಡವರಿಗೆ ನಾಯಕ ಎನಿಸಿದ್ದರು. ಕೇವಲ ಪಾತ್ರಗಳಲ್ಲದೆ ನಿಜ ಜೀವನದಲ್ಲಿಯೂ ಸಹ ಸಮಾಜಕ್ಕೆ ಕಿಂಚಿತ್ತೂ ಕೆಡುಕಾಗದಂತೆ ಅತ್ಯಂತ ಕಾಳಜಿಯ ಬದುಕು ನಡೆಸುವ ಮೂಲಕ ಸಮಾಜಕ್ಕೆ ನಾಯಕ ಹೇಗಿರಬೇಕು ಎಂಬುದನ್ನು ನಿರೂಪಿಸಿ ರಾಜ್ಯದ ಅಸಂಖ್ಯಾತ ಅಭಿಮಾನಿಗಳಿಗೆ ಆದರ್ಶಪ್ರಾಯ ನಾಯಕ ಎನಿಸಿದ್ದಾರೆ. ಅವರು ಅಭಿನಯಿಸಿರುವ ಭಕ್ತ ಕುಂಬಾರ, ಭಕ್ತಕನಕದಾಸ, ಗಿರಿಕನ್ಯೆ ಸೇರಿದಂತೆ ಹಲವು ಚಿತ್ರಗಳು ತಳಸಮುದಾಯದ ನಾಯಕತ್ವವನ್ನು ಪ್ರತಿನಿಧಿಸಿವೆ. ಚಿತ್ರನಟನ ಹೊರತಾಗಿ ರಾಜ್ ಕುಮಾರ್ ಅವರು ಪ್ರಜಾತಂತ್ರದ ಸವಾಲುಗಳು, ಗೋಕಾಕ್ ಚಳವಳಿಯಂತಹ ಕನ್ನಡ ಭಾಷಾ ಚಳವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಪ್ರತಿಮ ಚಳವಳಿಗಾರನಾಗಿ ಸಹ ತಮ್ಮನ್ನು ಅಭಿವ್ಯಕ್ತಗೊಳಿಸಿದ್ದಾರೆ. ಅವರ ‘ಬಂಗಾರದ ಮನುಷ್ಯ’ ಚಲನಚಿತ್ರ ರಾಜ್ಯದಲ್ಲಿ ಅಸಂಖ್ಯಾತ ಜನರನ್ನು ಮಾದರಿ ಕೃಷಿಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ. ಅವರು ಜೀವಮಾನದಲ್ಲಿ ಅಭಿನಯಿಸಿದ ಪ್ರತಿ ಚಿತ್ರಗಳಲ್ಲೂ ಸಮಾಜಕ್ಕೆ ಸತ್ ಸಂದೇಶ ನೀಡಿದ್ದಾರೆ.
ಡಾ.ರಾಜ್‍ಕುಮಾರ್ ಅವರನ್ನು ಕುರಿತು ರಾಜ್ಯದಲ್ಲಿ ಹಲವು ಪುಸ್ತಕಗಳನ್ನು ರಚಿಸಲಾಗಿದೆ, ಆದರೆ ಡಾ.ಮಂಜುನಾಥ ಅದ್ದೆ ಅವರ ‘ಬಡವರ ರಾಜಕುಮಾರ’ ಸಂಶೋಧನಾ ಕೃತಿ ರಾಜಕುಮಾರ್ ಅವರ ಬದುಕಿಗಿಂತ ಅತ್ಯುತ್ತಮ ವಿಷಯ ವಸ್ತುವನ್ನು ಒಳಗೊಂಡ ಚಿತ್ರಗಳ ಮೂಲಕ ಸಮಾಜಿಕ ಪರಿವರ್ತನೆಗೆ ಅವರು ನೀಡಿರುವ ಕೊಡುಗೆ, ಜನಮಾನಸದಲ್ಲಿ‌ ಅವರು ಹರಡಿಕೊಂಡಿರುವ ವಿಸ್ತಾರತೆ, ಅಭಿನಯದ ಮೂಲಕವೇ ಬಡವರಿಗೆ ಅವರು ತುಂಬಿರುವ ಆತ್ಮಸ್ಥೈರ್ಯ, ಹೋರಾಟದ ಕಿಚ್ಚು ಮುಂತಾದ ವಿಭಿನ್ನ ವಸ್ತುವಿಷಯಗಳನ್ನು ಜತನದಿಂದ ಹೆಕ್ಕಿತಂದು ರಚಿಸಿರುವ‌ ಮೌಲ್ಯಯುತವಾದ ಕೃತಿಯಾಗಿದ್ದು, ಎಲ್ಲರೂ ಓದಬಹುದಾದ ಕೃತಿಯಾಗಿದೆ. ರಾಜಕುಮಾರ್‌‌ ಅವರನ್ನು ಕುರಿತು‌‌ ಇದುವರೆಗೂ ಹೊರತಂದಿರುವ ಯಾವ ಪುಸ್ತಕಗಳಲ್ಲಿಯೂ ಇಂತಹ ವಿಭಿನ್ನ ವಿಷಯಗಳಿಲ್ಲ ಎಲ್ಲರೂ ಕೊಂಡು ಓದಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೃತಿಯ ಸಂಶೋಧನಾ ಮಾರ್ಗದರ್ಶಕರಾದ ಡಾ.ಕೆ.ವೈ.ನಾರಾಯಣಸ್ವಾಮಿ ಅವರು ‘ಬಡವರ ರಾಜಕುಮಾರ’ ಸಂಶೋಧನಾ ಕೃತಿ‌ ಒಳಗೊಂಡಿರುವ ವಸ್ತುವಿಷಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಬೆಂ. ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ವಾಜಿದ್, ಕೃತಿಯ ಲೇಖಕ ಡಾ.ಮಂಜುನಾಥ ಅದ್ದೆ, ಪ್ರಕಾಶಕಿ ಡಾ.ಮಮತಾ ಕೆ.ಎನ್., ಲೇಖಕ ಡಾ.ಹುಲಿಕುಂಟೆ ಮೂರ್ತಿ ಸೇರಿದಂತೆ ಹಲವು ಗಣ್ಯರಿದ್ದರು.

Leave a Reply

Your email address will not be published. Required fields are marked *