ವಿಜೃಂಭಣೆಯಿಂದ ನೆರವೇರಿದ ಕೋಡಗಲಹಟ್ಟಿ ‘ಶ್ರೀ ಓಂ ಶಕ್ತಿ’ ದೇವಾಲಯದ 4ನೇ ವಾರ್ಷಿಕೋತ್ಸವ :
ಬ್ಯಾಟರಾಯನಪುರ : ಕ್ಷೇತ್ರದ ಹುಣಸಮಾರನಹಳ್ಳಿ ಪುರಸಭಾ ವ್ಯಾಪ್ತಿಯ ಕೋಡಗಲಹಟ್ಟಿ ಗ್ರಾಮದೇವತೆ ಶ್ರೀ ಓಂ ಶಕ್ತಿ ದೇವಾಲಯದ 4ನೇ ವಾರ್ಷಿಕೋತ್ಸವವು ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಮಹತ್ವದ ಈ ಕಾರ್ಯಕ್ರಮಕ್ಕೆ ಕಂದಾಯ ಸಚಿವರು, ಬ್ಯಾಟರಾಯನಪುರ ಶಾಸಕರಾದ ಕೃಷ್ಣಬೈರೇಗೌಡರು, ಶ್ರೀಮತಿ ಮೀನಾಕ್ಷಿ ಬೈರೇಗೌಡ ಅವರು ಪಾಲ್ಗೊಂಡು, ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮ ಉದ್ದೇಶಿಸಿ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರು, ಓಂ ಶಕ್ತಿ ದೇವಾಲಯದ ವಾರ್ಷಿಕೋತ್ಸವದ ಪ್ರಧಾನ ಆಯೋಜಕರಾದ ಜೆ.ಶ್ರೀನಿವಾಸ ಅವರು ಮಾತನಾಡಿ ‘ನಾಲ್ಕು ವರ್ಷಗಳ ಹಿಂದೆ ಗ್ರಾಮದ ಮಹಿಳೆಯರ ಮನವಿಯ ಮೇರೆಗೆ ಓಂ ಶಕ್ತಿ ದೇವಾಲಯವನ್ನು ನಿರ್ಮಿಸಿ, ದೇವಾಲಯದ ನಿರ್ವಹಣೆಗೆ ಅಗತ್ಯವಿರುವ ಸಕಲ ಸೌಕರ್ಯಗಳನ್ನು ನೀಡಿ ದೇವಾಲಯ ಲೋಕಾರ್ಪಣೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಾ ಬರಲಾಗುತ್ತಿದೆ. ವರ್ಷ ಕಳೆದಂತೆ ಓಂ ಶಕ್ತಿಯ ಸಾಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆ ಮೂಲಕ ವಾರ್ಷಿಕೋತ್ಸವವು ವಿಜೃಂಭಣೆಯ ಪರಾಕಾಷ್ಠೆ ತಲುಪುತ್ತಿರುವುದು ಸಂತೋಷದ ಸಂಗತಿ.
ಈ ಬಾರಿಯ 4ನೇ ವಾರ್ಷಿಕೋತ್ಸವದ ಬೆಳಗಿನ ಪೂಜೆಯಲ್ಲಿ ಬ್ಯಾಟರಾಯನಪುರ ಶಾಸಕರು, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಮತ್ತು ಅವರ ಶ್ರೀಮತಿಯವರಾದ ಮೀನಾಕ್ಷಿ ಕೃಷ್ಣಬೈರೇಗೌಡ ಅವರು ಪಾಲ್ಗೊಂಡಿರುವುದು ವಾರ್ಷಿಕೋತ್ಸವಕ್ಕೆ ಮೆರಗು ನೀಡಿದಂತಾಗಿದೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ಮಹಾ ಅಭಿಷೇಕ, ವಿಶೇಷ ಅಲಂಕಾರ ಸೇವೆ, 10 40ಕ್ಕೆ ಮಹಾಮಂಗಳಾರತಿ, ಶಾತ್ತುಮೊರೈ, ರಾಷ್ಟ್ರಾಶೀರ್ವಾದ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ, ಮಧ್ಯಾಹ್ನ ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಶ್ರೀ ವೀರಾಂಜನೇಯ ಸ್ವಾಮಿ ಮತ್ತು ಶ್ರೀ ಓಂ ಶಕ್ತಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ಮತ್ತು ಕೋಡಗಲಟ್ಟಿ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನೆರವೇರಿಸಲಾಗಿದೆ. ಸಂಜೆ 7 ಗಂಟೆಗೆ ಪ್ರಖ್ಯಾತ ಕಲಾವಿದರು, ಸಂಗೀತ ನಿರ್ದೇಶಕರಿಂದ ಭವ್ಯವಾದ ರಂಗಸಜ್ಜಿಕೆಯಲ್ಲಿ ‘ಕುರುಕ್ಷೇತ್ರ’ ಅಥವಾ ‘ಶ್ರೀ ಕೃಷ್ಣ ಸಂಧಾನ’ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ದಿನವಿಡೀ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ನಿರೀಕ್ಷೆಗೂ ಮೀರಿದ ಅತ್ಯದ್ಭುತವಾದ ರೀತಿಯಲ್ಲಿ ಮೂಡಿ ಬಂದಿರುವುದು ವಾರ್ಷಿಕೋತ್ಸವದ ಆಯೋಜಕರು ಹಾಗೂ ಗ್ರಾಮಸ್ಥರಲ್ಲಿ ಸಾರ್ಥಕತೆಯ ಭಾವ ಉಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾ‌.ಪಂ.ಮಾಜಿ ಸದಸ್ಯೆ ಸುಜಾತ ಶ್ರೀನಿವಾಸ್, ಮುಖಂಡರಾದ ಮುನಿಸ್ವಾಮಿಗೌಡ, ಪ್ರಶಾಂತ್, ಬಂಡೆ ಶ್ರೀನಿವಾಸ್, ಸುದರ್ಶನ್, ಮುನಿರಾಜು, ಕೃಷ್ಣಪ್ಪ, ಮಂಜಪ್ಪ, ರಾಮಾಂಜಿನಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ದೇವಿಯ ಅಪಾರ ಸಂಖ್ಯೆಯ ಭಕ್ತರಿದ್ದರು.

Leave a Reply

Your email address will not be published. Required fields are marked *