ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಶಾಸಕರಿಗೆ ಹೆಚ್ಚಿನ ಹೊರೆ : ಶಾಸಕ ಎಸ್ ಆರ್ ವಿಶ್ವನಾಥ್ 
ಯಲಹಂಕ : ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚುನಾಯಿತ ಪ್ರತಿನಿಧಿ ಗಳಿಲ್ಲದ ಕಾರಣ ಅಭಿವೃದ್ಧಿ ಮತ್ತು ನಿರ್ವಹಣೆ ಸೇರಿದಂತೆ ಜವಾಬ್ದಾರಿಯ ಎಲ್ಲಾ ಹೊರೆ ಶಾಸಕರ ಮೇಲೆ ಬೀಳುತ್ತಿದೆ ಆದರೆ ಸರ್ಕಾರದಿಂದ ಅಗತ್ಯ ಅನುದಾನ ಸಿಗದಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ, ರಾಜಾನುಕುಂಟೆ, ಸೊಣ್ಣೇನಹಳ್ಳಿ ಮತ್ತು ಅರಕೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ, ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣ ಕಾಮಗಾರಿ ಸೇರಿದಂತೆ ಸುಮಾರು 7 ಕೋಟಿ  ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ‘ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಯಲಹಂಕ ಕ್ಷೇತ್ರದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಾ ಬರಲಾಗುತ್ತಿದೆ, ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ 25 ಕೋಟಿ ರು  ಮತ್ತು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಅನುದಾನ ನೀಡಲಾಗಿತ್ತು, ಈ ಅನುದಾನ ಕ್ಷೇತ್ರದ ಅಭಿವೃದ್ಧಿ ಸಾಕಾಗದ ಹಿನ್ನೆಲೆಯಲ್ಲಿ  ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಚಿವರಿಗೆ ಮನವಿ ಮಾಡಿ ಅಗತ್ಯ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಕೊಡುಗೆ ನಗಣ್ಯವಾಗಿದೆ, ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹೊಸ ಸಚಿವರ ಆಗಮನ ವಾಗಿದೆ, ಶೀಘ್ರದಲ್ಲೇ  ಅವರನ್ನು ಭೇಟಿ ಮಾಡಿ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗುವುದು, ಸರ್ಕಾರ ಸಹ ಕ್ಷೇತ್ರಾಭಿವೃದ್ಧಿಗೆ ಅಗತ್ಯ ಅನುದಾನ‌ ನೀಡುವ ಮೂಲಕ ಸಹಕಾರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್ ಎನ್ ರಾಜಣ್ಣ, ವಿಶ್ವನಾಥಪುರ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಅದ್ದಿಗಾನಹಳ್ಳಿ ವೀರಣ್ಣ, ಪಟೇಲ್ ಸತೀಶ್ ಗೌಡ, ಎಸ್ ಜಿ ನರಸಿಂಹಮೂರ್ತಿ, ಎಸ್ ಆರ್ ಜನಾರ್ಧನ್, ಎಸ್ ಜಿ ಪ್ರಶಾಂತ್ ರೆಡ್ಡಿ, ಅವಲಹಳ್ಳಿ ಕೇಶವಮೂರ್ತಿ, ಜಿ ಸಿ ಮಂಜುನಾಥ್, ಕಿರಣ್ ಕುಮಾರ್, ನಂಜೇಗೌಡ, ಡೊಮಿನೊಸ್ ರಾಜಣ್ಣ, ಶ್ರೇಯಸ್ ಆರ್ ಕೆ,, ನಾಗದಾಸನಹಳ್ಳಿ ಜಗದೀಶ್  ಹನುಮೇಗೌಡ, ಕಾಕೋಳು ಮುನೇಶ್, ಸಾದೇನಹಳ್ಳಿ ಚಿಕ್ಕಣ್ಣ, ಪ್ರಕಾಶ್ ಗೌಡ ಸೇರಿದಂತೆ ಇನ್ನಿತರದಿದ್ದರು.
ನೀರಿನ‌ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತು :
ಬೆಂಗಳೂರು ಮತ್ತು ರಾಜ್ಯದ ವಿವಿಧಡೆ ಬರದ ಛಾಯೆ ಗೋಚರವಾಗುತ್ತಿದ್ದು, ಈ ವರ್ಷ ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ನದಿಗಳು, ಕೆರೆಗಳು ಬತ್ತುತ್ತಿದ್ದು, ನೀರಿನ ಅಭಾವ ಎದುರಾಗುವ ಎಲ್ಲಾ ಲಕ್ಷಣಗಳಿವೆ, ಯಲಹಂಕ ಕ್ಷೇತ್ರದಲ್ಲಿ ಬರಗಾಲವನ್ನು ಸಮರ್ಥ ರೀತಿಯಲ್ಲಿ ಎದುರಿಸುವ ದಿಸೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಈಗಾಗಲೇ ಪಿಡಿಒ ಗಳ ಸಭೆ ಕರೆದು, ವರ್ಗ 1ರ ಹಣವನ್ನು ಬೋರ್ ವೆಲ್ ಕೊರೆಸಲು ಮತ್ತು ನೀರಿನ ಸಮಸ್ಯೆ ಪರಿಹರಿಸಲು ಮೀಸಲಿಡುವಂತೆ ಸೂಚಿಸಲಾಗಿದೆ, ಜೊತೆಗೆ ಶಾಸಕರ ವಿಶೇಷ ಅನುದಾನ ದಲ್ಲೂ ಸಹ ನೀರಿನ ಸಮಸ್ಯೆ ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

Leave a Reply

Your email address will not be published. Required fields are marked *