ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ ಉದ್ಘಾಟನೆ :
ಸಾಲುಮರದ ತಿಮ್ಮಕ್ಕ ಅವರ 114ನೇ ಜನ್ಮದಿನೋತ್ಸವ :
ಯಲಹಂಕ : ದ.ಸಂ.ಸ. ಸಮತಾವಾದ ರಾಜ್ಯಾಧ್ಯಕ್ಷರಾದ ಹೆಚ್.ಮಾರಪ್ಪ ಅವರ ನೇತೃತ್ವದಲ್ಲಿ ನೋಂದಣಿಯಾಗಿ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆ'(ನೋ)ಯನ್ನು ಮಂಗಳವಾರ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 114ನೇ ಜನ್ಮದಿನಾಚರಣೆ ಮೂಲಕ ಉದ್ಘಾಟಿಸಲಾಯಿತು.
ಸಾಲುಮರದ ತಿಮ್ಮಕ್ಕ ಅವರ 114ನೇ ಜನ್ಮದಿನಾಚರಣೆ ಮತ್ತು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆಯ ಉದ್ಘಾಟನೆಯ ಪ್ರಯುಕ್ತ ಯಲಹಂಕದ ಎಲ್ ಬಿ ಎಸ್ ನಗರ ಮತ್ತು ಹೆಸರುಘಟ್ಟ ಹೋಬಳಿಯ ಅದ್ದಿಗನಹಳ್ಳಿ ಯಲ್ಲಿ ಗಿಡ ನೆಡುವ ಕಾರ್ಯಕ್ರಮ, ನಾಮಫಲಕ ಉದ್ಘಾಟನೆ, ಯಲಹಂಕ ಉಪನಗರದ ಮದರ್ ಡೈರಿ ವೃತ್ತದಿಂದ ಯಲಹಂಕ ನ್ಯೂ ಟೌನ್ ಕ್ಲಬ್ ವರೆಗೆ ವಿವಿಧ ಜಾನಪದ ಕಲಾ ತಂಡಗಳ ಕಲಾಪ್ರದರ್ಶನದೊಂದಿಗೆ ಬೆಳ್ಳಿ ರಥದಲ್ಲಿ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರದ ಮೆರವಣಿಗೆ, ಪರಿಸರವಾದಿಗಳಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆಯ ರಾಜ್ಯಾಧ್ಯಕ್ಷ ಎಚ್ ಮಾರಪ್ಪ ಮಾತನಾಡಿ ‘ಪರಿಸರ ಸಂರಕ್ಷಣೆ, ಕೆರೆಗಳ ಸುತ್ತ ಮತ್ತು ಖಾಲಿ ಜಾಗಗಳಲ್ಲಿ ಸಸಿ ನೆಡುವುದು, ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸು ವುದು, ಅನಾಥಾಶ್ರಮಗಳ ಸ್ಥಾಪನೆ ಮತ್ತು ವೃದ್ಧಾಶ್ರಮಗಳ ಸ್ಥಾಪನೆ ಯಂತಹ ದ್ಯೇಯೋದ್ದೇಶಗಳೊಂದಿಗೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ವೇದಿಕೆಯನ್ನು ಸ್ಥಾಪನೆ ಮಾಡಲಾಗಿದ್ದು, ಈ ವೇದಿಕೆಯಲ್ಲಿ ಪರಿಸರ ಪ್ರೇಮಿಗಳು, ಸಾಮಾಜಿಕ ಕಳಕಳಿಯುಳ್ಳ ಹಲವು ಮುತ್ಸದ್ದಿ ಮುಖಂಡರಿದ್ದು, ಪರಿಸರ ಮತ್ತು ಸಮಾಜದ ಒಳಿತಿಗಾಗಿ ಏನಾದರೂ ಒಂದು ಅಳಿಲು ಸೇವೆ ಮಾಡಬೇಕು ಎಂಬ ಘನ ಉದ್ದೇಶವನ್ನು ಹೊಂದಿ ವೇದಿಕೆಯಲ್ಲಿ ಪದಾಧಿಕಾರಿ ಗಳಾಗಿ, ಸದಸ್ಯರಾಗಿ ಒಗ್ಗೂಡಿ ಸೇರಿದ್ದೇವೆ. ಈ ವೇದಿಕೆಯನ್ನು ಯಾವುದೇ ಒಂದು ನಿಶ್ಚಿತ ಪ್ರದೇಶಕ್ಕೆ ಸೀಮಿತಗೊಳಿಸದೆ, ರಾಜ್ಯದ ಮೂಲೆ ಮೂಲೆಗೆ ಕೊಂಡೊಯ್ಯಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಮಾತನಾಡಿ ‘ಜಾಗತಿಕ ತಾಪಮಾನ ಹೆಚ್ಚಿ ಜೀವ ಸಂಕುಲ ವಿನಾಶದ ಕಡೆಗೆ ಸಾಗುತ್ತಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಪರಿಸರ ಜಾಗೃತಿ, ಪರಿಸರ ಸಂರಕ್ಷಣೆ ಅನಿವಾರ್ಯ ವಾಗಿದೆ. ಇಂದು ಉದ್ಘಾಟನೆ ಆಗಿರುವ ನಮ್ಮ ವೇದಿಕೆಯ ಮೂಲಕ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಾಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ಕೇಶವ ರಾಜಣ್ಣ, ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ, ಬಿಜೆಪಿ ಮುಖಂಡರಾದ ಮಧುಸೂದನ್, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವೇದಿಕೆಯ ಗೌರವಾಧ್ಯಕ್ಷ ಮುನಿರಾಜು, ಉಪಾಧ್ಯಕ್ಷರಾದ ಜಗದೀಶ್ ಗೌಡ, ಮಂಜುನಾಥ್ ಪಿ., ಖಜಾಂಚಿ ಸಂದೀಪ್ ಬಿ., ಜಂಟಿ ಕಾರ್ಯದರ್ಶಿ ಸಂದೀಪ್, ಯಲಹಂಕ ನ್ಯೂ ಟೌನ್ ಕ್ಲಬ್ ನ ಮಾಜಿ ಅಧ್ಯಕ್ಷ ಆಂಜನೇಯಲು ಸೇರಿದಂತೆ ಹಲವು ಗಣ್ಯರಿದ್ದರು.

Leave a Reply

Your email address will not be published. Required fields are marked *