


















ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಅಭಿಮತ
ಬ್ಯಾಟರಾಯನಪುರ : ಕಾಂಗ್ರೆಸ್ ಪಕ್ಷ ಅಖಂಡವಾದ ಪಕ್ಷವಲ್ಲ ಅದೊಂದು ತುಂಡು ಪಕ್ಷ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಆಂಧ್ರದಲ್ಲಿ ವೈ.ಎಸ್.ಆರ್. ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಎನ್ ಸಿ ಪಿ ಹೀಗೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಲವು ತುಂಡುಗಳಾಗಿ ಒಡೆದು ಹೋಗಿದ್ದು, ಇಂತಹ ತುಂಡು ಕಾಂಗ್ರೆಸ್ ಗಳಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್ ಸಿ) ಕೂಡ ಒಂದು ಅಷ್ಟೇ ಹೊರತು ಕಾಂಗ್ರೆಸ್ ನಲ್ಲಿ ಅಖಂಡತ್ವ ಉಳಿದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ಕುರಿತು ವ್ಯಂಗ್ಯವಾಡಿದರು.
ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ವತಿಯಿಂದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್ ಸಿ ತಮೇಶ್ ಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ‘ವಿಜಯ ಸಂಕಲ್ಪ’ ಬಿಜೆಪಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ರಾಜ್ಯದಲ್ಲಿ ಕಳೆದ ತಿಂಗಳು ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಳಿತ ಎನ್.ಡಿ.ಎ ಒಕ್ಕೂಟ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು, ರಾಜ್ಯ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯ ಕಾಂಗ್ರೆಸ್ ಮುಖಂಡರು ಎನ್ ಡಿ ಎ ಒಕ್ಕೂಟದ ಈ ಗೆಲುವಿನಿಂದ ಕಂಗೆಟ್ಟಿಧ್ದು, ದಿಕ್ಕು ದೆಸೆ ಇಲ್ಲದೆ ಮತ್ತಿ ಭ್ರಮಣರಂತೆ ಮಾತನಾಡುತ್ತಿದ್ದಾರೆ.
ವಿಧಾನ ಪರಿಷತ್ ಚುನಾವಣಾ ಫಲಿತಾಂಶ ದೇಶಕ್ಕೆ ಹೊಸದೊಂದು ಸಂದೇಶ ಸಾರಿದ್ದು 2028ರ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ರಾಜ್ಯದಲ್ಲಿ ಅನಾಯಾಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಅದೇ ರೀತಿ ಬ್ಯಾಟರಾಯನಪುರ ಕ್ಷೇತ್ರದಲ್ಲಿಯೂ ಸಹ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿ, ಗೆಲುವನ್ನು ನಮ್ಮದಾಗಿಸಿ ಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್ ಸಿ ತಮೇಶ್ ಗೌಡ ಮಾತನಾಡಿ,’ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಶೂನ್ಯತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದುರಾಡಳಿತ ದಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ. ಬೆಂಗಳೂರು ನಗರದ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ. ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಈ ಮಟ್ಟಿಗಿನ ಗುಂಡಿಗಳಿವೆ, ಅಧಿಕ ಮಳೆಯಾಗಿದ್ದರೆ ಬೆಂಗಳೂರನ್ನು ಆ ದೇವರು ಕೂಡ ಕಾಪಾಡಲಾರ ಎನ್ನುವಷ್ಟು ಊಹಿಸಿಕೊಳ್ಳ ಲಾಗದ ಸ್ಥಿತಿಯಲ್ಲಿ ಇರುತ್ತಿತ್ತು. ಕಾಂಗ್ರೆಸ್ ನ ಆಡಳಿತದಲ್ಲಿ ಕೇವಲ ಮಾತಿನ ಅಭಿವೃದ್ಧಿ ಯಾಗುತ್ತಿದೆ ಹೊರತು, ಜನಪರ ಕೆಲಸಗಳ ಅಭಿವೃದ್ಧಿ ಆಗುತ್ತಿಲ್ಲ. ಇದೆಲ್ಲವನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ, ಅಂತೆಯೇ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಗೆಲುವಿನ ಮೂಲಕ ಹೊಸದೊಂದು ಇತಿಹಾಸ ನಿರ್ಮಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಶಿಕ್ಷಣ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯ ಎ.ಪಿ. ರಂಗನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪಿ.ಕೆ. ರಾಜಗೋಪಾಲ್, ನಗರ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ, ಮುನಿಹನುಮಯ್ಯ, ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಗೌಡ, ಬೇಗೂರು ಮಹೇಶ್, ಶಕ್ತಿ ಕೇಂದ್ರಗಳ ನೂತನ ಅಧ್ಯಕ್ಷರಾದ ಬಿ.ಎಸ್.ಅನಿಲ್ ಕುಮಾರ್, ಮರಳುಕುಂಟೆ ನಾರಾಯಣಸ್ವಾಮಿ, ಮೈಲನಹಳ್ಳಿ ಜನಾರ್ಧನ್, ಮಯೂರಪ್ಪ, ಬಾಗಲೂರು ನವೀನ್, ಮಂಜುನಾಥ್, ಸುನಿಲ್, ಕೊತ್ತನೂರು ತಮ್ಮಣ್ಣ, ರಾಘವೇಂದ್ರ, ಮುನಿಸ್ವಾಮಿ ಒಡೆಯರ್(ಆನಂದ್ ಮಾಸ್ಟರ್), ವಿಲ್ಸನ್ ರೆಡ್ಡಿ, ಪ್ರತಾಪ್ ಗೌಡ ಸೇರಿದಂತೆ ಹಲವು ಗಣ್ಯರಿದ್ದರು.
