ಬಳ್ಳಾರಿ,ಜೂ.28: ಯುವ ಸಮುದಾಯವು ಮಾದಕ ವಸ್ತುಗಳ ಬಗ್ಗೆ ಅರಿವು ಹೊಂದಬೇಕು ಹಾಗೂ ಅವುಗಳಿಂದ ದೂರವಿರಬೇಕು. ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರಾಗೃಹ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ‘ಜನತೆ ಕಳಂಕ ಮತ್ತು ತಾರತಮ್ಯ ಮೊದಲು ನಿಲ್ಲಿಸಿ ತಡೆಗಟ್ಟುವಿಕೆಯನ್ನು ಬಲಪಡಿಸಿ’ ಎಂಬ ಘೋಷವಾಕ್ಯದೊಂದಿಗೆ ನಗರದ ಕೌಲ್‍ಬಜಾರ್‍ನ ಜವಾಹರ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ವ್ಯಸನವು ಅತೀ ಹೆಚ್ಚಾಗುತ್ತಿದ್ದು, ಅದರಲ್ಲಿ ಯುವ ಜನತೆ ಇದಕ್ಕೆ ದಾಸರಾಗುತ್ತಿರುವುದು ಅತೀ ದುಃಖದ ವಿಷಯವಾಗಿದೆ. ಹಾಗಾಗಿ ಯುವಕರು ಜಾಗೃತರಾಗಿ ಕುಟುಂಬ ಸದಸ್ಯರ ನೆರವಿನಿಂದ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಬಹುದು ಅಥವಾ ವಾಸಿಯಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞೆ ಡಾ.ಭುವನೇಶ್ವರಿ ದೇವಿ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡಿದರೆ ವ್ಯಕ್ತಿಯಲ್ಲಿ ವರ್ತನೆಯಲ್ಲಿ ಬದಲಾವಣೆಗಳಾಗುವುದಲ್ಲದೇ ಮಾನಸಿಕ ಖಿನ್ನತೆಗೆ ಒಳಗಾಗುವ ಸಾದ್ಯತೆ ಇದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿರುತ್ತದೆ ಎಂದು ತಿಳಿಸಿದರು.
ಮಾತ್ರೆ ಮತ್ತು ಚುಚ್ಚು ಮದ್ದು ರೂಪದಲ್ಲಿ ಔಷಧಿ ಲಭ್ಯವಿದ್ದು, ಚಟಕ್ಕೆ ದಾಸರಾದ ವ್ಯಕ್ತಿಗಳು ಔಷದೋಪಚಾರ ಪ್ರಾರಂಭಿಸಿದರೆ ವ್ಯಸನವು ಬೇಗ ಹತೋಟಿಗೆ ಬರುತ್ತದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಮನೋಚೈತನ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ಮಂಗಳವಾರ ಎಲ್ಲ ತಾಲೂಕು ಕೇಂದ್ರಗಳಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣೆ ಏರ್ಪಡಿಸಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಂಡು ವ್ಯಸನದಿಂದ ಮುಕ್ತಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಜವಾಹರ್ ಆಂಗ್ಲ ಮಾಧ್ಯಮ ಫ್ರೌಡಶಾಲೆಯ ಮುಖ್ಯ ಗುರುಗಳಾದ ಇಬ್ರಾಹಿಮ್ ಖಲೀಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ.ಎಸ್ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿಯಾಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಬ್ರೂಸ್‍ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸುರೇಖಾ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪವಿತ್ರ ಆಲೂರು, ಪೊಲೀಸ್ ಇನ್ಸ್‍ಪೆಕ್ಟರ್ ನಾಗಭೂಷಣ್, ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ ಸುರೇಶ್.ಡಬ್ಲೂ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ್ ದಾಸಪ್ಪನವರ್, ಮೈತ್ರಿ ವ್ಯಸನ ಮುಕ್ತಿ ಕೇಂದ್ರದ ಕುಮಾರ್ ಸ್ವಾಮಿ ಡಾ.ಪ್ರಕಾಶ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ಶಾಂತಕುಮಾರ್.ಹೆಚ್, ರಂಜಿತ.ಜಿ, ಕಾವ್ಯ, ನಿರಂಜನ, ರಮೇಶ್ ಬಾಬು, ಬ್ರೂಸ್‍ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರು ಹಾಗೂ ಆಶಾ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ನಂತರದಲ್ಲಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಹಾಗೂ ಚಿಗುರು ಕಲಾ ತಂಡದಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಯಾಸ್ವಿನ್ ಸಾಬ್ ಕಾಲೋನಿಯಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

Leave a Reply

Your email address will not be published. Required fields are marked *