ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರ ಉತ್ತಮ ಸ್ಥಾನಕ್ಕೆ ಹೋಗಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದನ್ನು ಅರಿತು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ಇನಮಿಂಚೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ ವಿತರಿಸಿ ಬಳಿಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಬಹಳಷ್ಟು ಜನರು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಓದುವುದು ಕೂಡ ಒಂದು ಹೆಮ್ಮೆ ಎಂದರು.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆ ಇಲ್ಲ. ಉನ್ನತ ಸ್ಥಾನಕ್ಕೆ ಹೋಗುವ ಎಲ್ಲ ಅರ್ಹತೆ ತಮಗಿದೆ. ಹಾಗಾಗಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಕೇಂದ್ರಿಕರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ, ಉತ್ತಮ ಶೈಕ್ಷಣಿಕ ಸೌಲಭ್ಯಗಳು ಇವೆ. ಇವುಗಳನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೋಷಕರು ಸಹ ಮಕ್ಕಳ ವ್ಯಾಸಂಗದ ಮೇಲೆ ಗಮನವಿಟ್ಟಿರಬೇಕು. ಅವರ ತಪ್ಪುಗಳನ್ನು ಮನವರಿಕೆ ಮಾಡಿಕೊಡಬೇಕು. ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಮತ್ತು ದಾನಿಗಳು ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ನೀವು ಓದಿ ಉತ್ತಮ ಸ್ಥಾನ ಪಡೆದರೆ ನಿಮ್ಮ ಕುಟುಂಬ ಸಮಾಜದಲ್ಲಿ ಬೆಳವಣಿಗೆ ಕಂಡಂತೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವವರು ಮುಂದಾಗಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಯಿಂದ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ನುಡಿದರು.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್‍ನಿಂದ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಪೋಶೆಟ್ಟಿಹಳ್ಳಿ ಪ್ರೌಢಶಾಲೆಯನ್ನು ದತ್ತು ಪಡೆದು ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತು ಅಲ್ಲಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಟ್ರಸ್ಟ್‍ನಿಂದ ನೆರವು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ರೇಣುಮಾಕನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಅವರು ಭೇಟಿ ನೀಡಿ, ಶಾಲೆಯಲ್ಲಿ ನೀರಿನ ಸಮಸ್ಯೆ ಅರಿತು ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *