







ಹಸಿರೇ ಉಸಿರು ಟ್ರಸ್ಟ್ ವತಿಯಿಂದ ವನ ಮಹೋತ್ಸವ, ಹಲವು ಸಾಧಕರಿಗೆ ಸನ್ಮಾನ :
ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದಲ್ಲಿ ಹಸಿರೇ ಉಸಿರು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಮತ್ತು ಖ್ಯಾತ ವೈದ್ಯ ಡಾ.ಆಂಜಿನಪ್ಪ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಹಸಿರೇ ಉಸಿರು ಟ್ರಸ್ಟ್ ನ ಸಂಸ್ಥಾಪಕ ಬಿ.ಎಂ.ಶ್ರೀನಿವಾಸಮೂರ್ತಿ ಮಾತನಾಡಿ ‘ಪರಿಸರ ಮನುಷ್ಯನ ಬದುಕನ್ನು ಎಲ್ಲಾ ರೀತಿಯಲ್ಲೂ ಹಸನು ಮಾಡಿದೆಯೇ ಹೊರತು ಅವನ ಬದುಕಿಗೆ ಯಾವ ಹಾನಿಯನ್ನು ಉಂಟು ಮಾಡಿಲ್ಲ. ಕೋವಿಡ್ ವೇಳೆಯಲ್ಲಿ ಆಕ್ಸಿಜನ್ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಓಡಾಡಿದ ಪರಿಸ್ಥಿತಿಯನ್ನು ಎದುರಿಸಿದ್ದೇವೆ, ಆದರೂ ಜನರಲ್ಲಿ ಪರಿಸರ ಕಾಳಜಿಯ ಬಗೆಗಿನ ಜಾಗೃತಿ ಮೂಡದಿರುವುದು ವಿಷಾದದ ಸಂಗತಿ. ಪರಿಸರ ಸಂರಕ್ಷಣೆಯ ಬಗ್ಗೆ ಮನುಷ್ಯನ ನಿರ್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರೆದರೆ ಭವಿಷ್ಯ ದಿನಗಳು ಭಯಾನಕವಾಗಿರಲಿವೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ತಾ.ಪಂ.ಮಾಜಿ ಸದಸ್ಯರಾದ ಬಿ.ನಾಗರಾಜ್ ಬಾಬು ಮಾತನಾಡಿ ‘ಹಸಿರೇ ಉಸಿರು ಟ್ರಸ್ಟ್’ ಮೂಲಕ ಶ್ರೀನಿವಾಸಮೂರ್ತಿ ಅವರು ಕಳೆದ ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆ, ಅಗತ್ಯವಿರುವ ಜಾಗಗಳಲ್ಲಿ ಸಸಿಗಳನ್ನು ನೆಡುವುದು, ಅವುಗಳ ಪೋಷಣೆ, ದಾನಿಗಳ ನೆರವಿನಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಸಮವಸ್ತ್ರ, ಶೂ, ಲೇಖನ ಪರಿಕರಗಳ ವಿತರಣೆ, ಸಮಾಜಕ್ಕೆ ಅನುಪಮ ಕೊಡುಗೆ ನೀಡಿರುವ ಗಣ್ಯಮಾನ್ಯರನ್ನು ಗುರುತಿಸಿ ಸನ್ಮಾನಿಸುವಂತಹ ಶ್ಲಾಘನೀಯ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಬೆಟ್ಟಹಲಸೂರು ಗ್ರಾಮಕ್ಕೆ ಕೀರ್ತಿ ತಂದುಕೊಡುವ ಕೆಲಸ ಮಾಡುತ್ತಿದ್ದಾರೆ ಅವರ ಪರಿಸರ ಸಂರಕ್ಷಣೆಯ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು, ಅಗತ್ಯ ಸಹಕಾರ, ಬೆಂಬಲ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ.ಆಂಜಿನಪ್ಪ, ಡಾ.ಚಿ.ನಾ.ರಾಮು, ಗಾಯಕ ಶಶಿಧರ ಕೋಟೆ, ಕದಂಬ ಸೇನೆಯ ರಾಜ್ಯಾಧ್ಯಕ್ಷ ಮಂಡ್ಯದ ಬೇಕರಿ ರಮೇಶ್ ಸೇರಿದಂತೆ ಹಲವು ಗಣ್ಯರನ್ನು ಅವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸಲಾಯಿತು.
ವನಮಹೋತ್ಸದ ಅಂಗವಾಗಿ ಸಾವಿರಕ್ಕೂ ಹೆಚ್ಚು ವಿವಿಧ ಮಾದರಿಯ ಸಸಿಗಳ ವಿತರಣೆ, ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಮುಖಂಡರಾದ ಬಿ.ನಾರಾಯಣ, ಎಸ್.ಎಮ್.ಎಲ್.ಪಿ. ಉಮೇಶ್, ಗ್ರಾ.ಪಂ.ಸದಸ್ಯರಾದ ಬಿ.ಆರ್. ರಾಮಾಂಜಿನಿ, ಮಮತಾ ಪ್ರಶಾಂತ್, ಸಾವಿತ್ರಮ್ಮ ಮುನಿರಾಜು, ತುಳಸಮ್ಮ ವೆಂಕಟರಮಣಪ್ಪ, ಸಮಾಜ ಸೇವಕರಾದ ಬಿ.ಎಸ್. ಶಿವಕುಮಾರ್ ಸೇರಿದಂತೆ ಇನ್ನಿತರರಿದ್ದರು.