ಹೆಚ್ಚಿನ ಹಾಲು ಉತ್ಪಾದನೆಯ ಜೊತೆಗೆ ಹಾಲಿನ ಗುಣಮಟ್ಟಕ್ಕೂ ಆಧ್ಯತೆ ನೀಡಿ : ಸತೀಶ್ ಕಡತನಮಲೆ ಸಲಹೆ

ಮಾದಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಾರ್ಷಿಕ ಸಾಮಾನ್ಯ ಸಭೆ :

ಯಲಹಂಕ : ಹಾಲು ಉತ್ಪಾದಕರು ಹೆಚ್ಚಿನ ಹಾಲು ಉತ್ಪಾದನೆಯ ಜೊತೆಗೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕೆಂದು ಬೆಂಗಳೂರು ಹಾಲು ಒಕ್ಕೂಟ(ಬಮೂಲ್)ದ ಬೆಂ.ಉತ್ತರ ಕ್ಷೇತ್ರದ ನಿರ್ದೇಶಕ ಸತೀಶ್ ಕಡತನಮಲೆ ತಿಳಿಸಿದ್ದಾರೆ.

ಯಲಹಂಕ ಕ್ಷೇತ್ರದ ಮಾದಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಬೆಂಗಳೂರು ಹಾಲು‌ ಒಕ್ಕೂಟಕ್ಕೆ ಪ್ರತಿದಿನ 25 ಲಕ್ಷ ಲೀಟರ್ ಹಾಲಿನ‌ ಅವಶ್ಯಕತೆ ಇದ್ದು, ಪ್ರಸ್ತುತವಾಗಿ 18.5 ಲಕ್ಷ ಲೀಟರ್ ಹಾಲು ಮಾತ್ರ ಸಂಗ್ರವಾಗುತ್ತಿದೆ. ಈ‌ ಹಿನ್ನೆಲೆಯಲ್ಲಿ, ಹೆಚ್ಚುವರಿ 6.5 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ದಿಸೆಯಲ್ಲಿ ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಹಾಲು ಉತ್ಪಾದಿಸಲು ಬೃಹತ್ ಅಭಿಯಾನದ ಮೂಲಕ ಕರೆ ನೀಡಲಾಗಿದೆ. ಆದರೆ ಹೆಚ್ಚಿನ ಹಾಲು ಉತ್ಪಾದನೆಯ ಗುರಿಯ ಜೊತೆಗೆ ಗುಣಮಟ್ಟದ ಹಾಲು ಉತ್ಪಾದನೆಗೂ ಆದ್ಯತೆ ನೀಡಬೇಕು, ಇದರಿಂದ ನಿಮ್ಮ ಆದಾಯ ಇನ್ನೂ ಹೆಚ್ಚುತ್ತದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿರುವ ಮಾದಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರತಿದಿನ ಸುಮಾರು 500 ಲೀಟರ್ ಹಾಲು ಉತ್ಪಾದನೆ ಆಗುತ್ತಿರುವುದು ಸಮಾಧಾನಕರ ಸಂಗತಿ, ಮುಂದಿನ ದಿನಗಳಲ್ಲಿ 1 ಸಾವಿರ ಲೀಟರ್ ಹಾಲು ಉತ್ಪಾದನೆಯ ಗುರಿ ಸಾಧನೆಯ ಕಡೆಗೆ ಹಾಲು ಉತ್ಪಾದಕರು ಸಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಾದಪ್ಪನಹಳ್ಳಿ ಗ್ರಾಮದ ಹಲವು ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ವಿತರಿಸಲಾಯಿತು. ಇದೇ ವೇಳೆ ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ‌‌ ಮಾದಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಬೆಂಗಳೂರು ಡೈರಿ ಮಾಜಿ ನಿರ್ದೇಶಕರಾದ ವಿಜಯಕುಮಾರ್, ಸಹಕಾರ ಸಂಘದ ಉಪಾಧ್ಯಕ್ಷ ಸಂಜೀವಪ್ಪ, ನಿರ್ದೇಶಕರಾದ ಎನ್.ಪಟಾಲಪ್ಪ, ಎಂ.ಚಂದ್ರಪ್ಪ, ಎ.ಪಿಳ್ಳರಾಜು, ಪಿ.ಲಕ್ಷ್ಮಯ್ಯ, ಪಿ.ಅನಿಲ್ ಕುಮಾರ್, ಕೆ.ಆನಂದ್, ಎಚ್.ಕೃಷ್ಣಪ್ಪ, ಎಂ.ಜೆ.ನರಸಿಂಹಯ್ಯ, ಕೆ.ಪ್ರೇಮ, ವಿಜಯಲಕ್ಷ್ಮಿ, ರಾಜಾನುಕುಂಟೆ ಶಿಬಿರದ ಉಪ ವ್ಯವಸ್ಥಾಪಕ ವಿ.ಪಿ.ಪ್ರಸನ್ನ, ವಿಸ್ತರಣಾಧಿಕಾರಿ ನಾಗರಾಜಪ್ಪ, ಹೆಸರಘಟ್ಟ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ, ಇಟಗಲ್ ಪುರ ಹಾ.ಉ.ಸಹಕಾರ ಸಂಘದ ಅಧ್ಯಕ್ಷ ಮೋಹನ್, ಸ್ಥಳೀಯ ಮುಖಂಡ ಎ.ಕೆಂಪೇಗೌಡ, ಹಾ.ಉ.ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಟಿ.ಮುನಿರಾಜು ಸೇರಿದಂತೆ ಗ್ರಾಮದ ಹಾಲು ಉತ್ಪಾದಕರಿದ್ದರು.

Leave a Reply

Your email address will not be published. Required fields are marked *