


ಮಳೆಯ ಅಭಾವ, ತೇವಾಂಶದ ಕೊರತೆ : ಮೊಳಕೆಯೊಡೆಯದ ಬಿತ್ತನೆಯಾಗಿರುವ ರಾಗಿ ಬೆಳೆ
ಬ್ಯಾಟರಾಯನಪುರ : ಮಳೆಯ ಅಭಾವ ಮತ್ತು ತೇವಾಂಶದ ಕೊರತೆಯಿಂದಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬಿತ್ತನೆಯಾಗಿರುವ ರಾಗಿ ಮೊಳಕೆಯೊಡೆಯದೆ ಇರುವುದು ರೈತರನ್ನು ಕಂಗಾಲಾಗುವಂತೆ ಮಾಡಿದ್ದು, ಮುಂದಿನ ಎರಡು, ಮೂರು ದಿನಗಳಲ್ಲಿ ಮಳೆಯಾಗದೆ ಹೋದರೆ ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ರಾಗಿ ಮತ್ತು ಇತರೆ ಬೆಳೆಗಳು ನಾಶವಾಗುವ ಸಂಭವವಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಪರಿಹಾರ ಘೋಷಿಸಲು ಮುಂದಾಗಬೇಕಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ ಸರ್ಕಾರವನ್ನು ಮುನ್ನೆಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿರುವ ಬೆಟ್ಟಹಲಸೂರು ನಂಜುಂಡಪ್ಪ ‘ಈ ಭಾಗದ ಹಲವು ರೈತರಿಗೆ ಮಳೆಯ ಆಶ್ರಯದ ರಾಗಿ ಬೆಳೆಯೇ ಪ್ರಮುಖ ಬೆಳೆಯಗಿದ್ದು, ಸಣ್ಣಪುಟ್ಟ ರೈತರು ರಾಗಿಯನ್ನು ಬಿತ್ತನೆ ಮಾಡಿದ್ದಾರೆ. ಆದರೆ ಕಳೆದ ಹದಿನೈದು ದಿನಗಳಿಂದ ಮಳೆ ಕಣ್ಣಾ ಮುಚ್ಚಾಲೆಯಾಡುತ್ತಿದ್ದು, ಬಿತ್ತನೆ ಆಗಿರುವ ರಾಗಿ ಮೊಳಕೆ ಯೊಡೆಯದ ಕಾರಣದಿಂದಾಗಿ ರೈತರು ಕಂಗಲಾಗಿದ್ದಾರೆ. ಭೂಮಿ ಮತ್ತು ಮಳೆಯನ್ನೇ ನಂಬಿ ಬಿತ್ತನೆ ಮಾಡಿರುವ ರಾಗಿ, ಹಾಕಿದ ಗೊಬ್ಬರ ರೈತರಿಗೆ ಬಂಡವಾಳ ನಷ್ಟ ಉಂಟು ಮಾಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಒಂದೊಮ್ಮೆ ಮಳೆ ಮುಂದಿನ ಮೂರು ದಿನಗಳಲ್ಲಿ ಬಾರದೇ ಹೋದರೆ ಬಿತ್ತನೆಯಾಗಿರುವ ರಾಗಿ ಮತ್ತು ಇತರೆ ಬೆಳೆಗಳು ನಾಶವಾಗಲಿವೆ, ಈ ದಿಸೆಯಲ್ಲಿ ಸರ್ಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ಘೋಷಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಸರ್ಕಾರಕ್ಕೆ ಮುನ್ನೆಚ್ಚರಿಕೆಯ ಸಲಹೆ ನೀಡಿದ್ದಾರೆ.
