ದೇಶದಲ್ಲಿನ ಆಂತರಿಕ ಶತೃಗಳ ಬಗ್ಗೆ ನಾವು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ : ಎಸ್ ಆರ್ ವಿಶ್ವನಾಥ್
ಯಲಹಂಕ ತಾಲ್ಲೂಕು ಆಡಳಿತದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ :
ಯಲಹಂಕ : ದೇಶವಾಸಿಗಳಾದ ನಾವು ಬಾಹ್ಯ ಶತೃಗಳಿಗಿಂತ ದೇಶದೊಳಗೇ ಇದ್ದು, ದೇಶದ ವಿರುದ್ಧ ಪಿತೂರಿ, ಷಡ್ಯಂತ್ರ ನಡೆಸುವ ಆಂತರಿಕ ಶತೃಗಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಜಾಗೃತಿ ವಹಿಸಬೇಕಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ತಾಲ್ಲೂಕು ಆಡಳಿತದ ವತಿಯಿಂದ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ‘ಬಾಹ್ಯ ಶತೃಗಳನ್ನು ಬಗ್ಗು ಬಡಿಯಲು ನಮ್ಮ ಸೇನೆ ಸಮರ್ಥವಾಗಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ನಮ್ಮ ಸೇನೆಯ ಸಾಮರ್ಥ್ಯ ಮತ್ತು ನಮ್ಮ ದೇಶದ ಮಿಲಿಟರಿ‌ ತಂತ್ರಜ್ಞಾನದ ಶಕ್ತಿ ಏನು ಎಂಬುದರ ಕೈಗನ್ನಡಿಯಾಗಿದೆ. ಬಾಹ್ಯ ಶತೃಗಳಿಗಿಂತ ನಮ್ಮ ದೇಶದಲ್ಲೇ ನೆಲೆಸಿ ನಮ್ಮ ದೇಶದ ವಿರುದ್ಧವೇ ಪಿತೂರಿ, ಷಡ್ಯಂತ್ರ ನಡೆಸುವ, ದೇಶವನ್ನು ಅಭದ್ರಗೊಳಿಸುವ, ನಮ್ಮ ದೇಶದ ಮಾನಬಿಂಧುಗಳು ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಆಕ್ರಮಣ ಮಾಡುವ ಆಂತರಿಕ ಶತೃಗಳು ಬಾಹ್ಯ ಶತೃಗಳಿಗಿಂತ ಅಪಾಯಕಾರಿ ಎಂಬುದನ್ನು ನಾವು ಮನಗಂಡು ಅಂತಹ‌ ದುಷ್ಟಶಕ್ತಿಗಳನ್ಮು ಮಟ್ಟ ಹಾಕಲು ನಾವು ಒಗ್ಗಟ್ಟಾಗಬೇಕು. ಯಲಹಂಕ ತಾಲ್ಲೂಕು ಆಡಳಿತದ ವತಿಯಿಂದ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು‌ ಆಚರಿಸಲಾಗುತ್ತಿದ್ದು, ‘ಆಪರೇಷನ್ ಸಿಂಧೂರ’ದ ಯಶಸ್ಸಿನ ವಿಜಯೋತ್ಸವದ ಸ್ಮರಣೆಗಾಗಿ ಕಳೆದ ವರ್ಷಕ್ಕಿಂತ ತುಸು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ವೀರ ಸೈನಿಕರಿಗೆ ಗೌರವ ಸಲ್ಲಿಸಲು ಸಮರ್ಪಿಸಿದ್ದೇವೆ. ಸ್ವಾತಂತ್ರ್ಯ ನಮ್ಮ ದೇಶದ ಸಹಸ್ರಾರು ದೇಶಭಕ್ತರು ತಮ್ಮ ತ್ಯಾಗ, ಬಲಿದಾನದ ಮೂಲಕ ನಮಗೆ ನೀಡಿರುವ ಬಿಕ್ಷೆ ಎಂದು ವಿಶ್ಲೇಷಿಸಲು ಇಚ್ಛಿಸುತ್ತೇನೆ. ಸ್ವಾತಂತ್ರ್ಯ ಚಳುವಳಿಯಲ್ಲಿ ನಮಗೆ ಕೆಲವು ದೇಶಭಕ್ತ ಮಹನೀಯರ ಹೆಸರುಗಳು ಮಾತ್ರ ತಿಳಿದಿವೆ, ಸಹಸ್ರಾರು ದೇಶಭಕ್ತರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ ಆದರೆ ಅವರ ಹೆಸರುಗಳು ನಮ್ಮ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿಲ್ಲ,  79ನೇ ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಪ್ರತಿಯೊಬ್ಬ ದೇಶಭಕ್ತ ಮಹನೀಯರಿಗೂ ಸಹ ಗೌರವ ನಮನ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪೌರ ಕಾರ್ಮಿಕರು, ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಮಾಜದ ಹಿತಕ್ಕಾಗಿ ಅಮೂಲ್ಯ ಕೊಡುಗೆ ನೀಡಿರುವ ಹಲವು ಗಣ್ಯರಿಗೆ ಸ್ಮರಣ ಫಲಕ ನೀಡಿ ಗೌರವಿಸಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅತ್ಯುತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಯಲಹಂಕ ತಾಲ್ಲೂಕು ವ್ಯಾಪ್ತಿಯ ಹಲವು ಶಾಲೆಗಳ ಮಕ್ಕಳಿಂದ ದೇಶಭಕ್ತಿ ಸಾರುವ ಗೀತೆಗಳಿಗೆ ನೃತ್ಯ ಪ್ರದರ್ಶನ, ಪೊಲೀಸ್ ಇಲಾಖೆ ಮತ್ತು ಎನ್.ಸಿ.ಸಿ. ವಿದ್ಯಾರ್ಥಿ ಗಳಿಂದ ಆಕರ್ಷಕ ಪಂಥ ಸಂಚಲನ, ಧ್ವಜವಂದನೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಗಳು ಪ್ರದರ್ಶನಗೊಂಡವು. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳ ತಂಡವೊಂದು ಪ್ರದರ್ಶಿಸಿದ ‘ಆಪರೇಷನ್ ಸಿಂಧೂರ’ದ ನೃತ್ಯ ರೂಪಕ ಮೆಚ್ಚುಗೆಗೆ ಪಾತ್ರವಾಯಿತು.
79ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕಾರ್ಯಕ್ರಮದಲ್ಲಿ ಯಲಹಂಕ ತಹಶಿಲ್ದಾರ್ ಶ್ರೇಯಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶೈಲಾ ಆರ್.ಎಸ್., ತಾ.ಪಂ.ಕಾರ್ಯ ನಿರ್ವಾಹಣಾ ಅಧಿಕಾರಿಗಳಾದ ಮಧು ಎಲ್., ಜೋಸೆಫ್, ಉಪ ತಹಶಿಲ್ದಾರ್ ಬಿ.ಎ.ಶ್ರೀನಿವಾಸ್, ಬಿ.ಆರ್.ಸಿ. ಪ್ರಕಾಶ್, ರಾಜಸ್ವ ನಿರೀಕ್ಷಕರಾದ ಉಷಾ ಎಲ್. ಸೇರಿದಂತೆ ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *