ದೊಡ್ಡತುಮಕೂರು, ಗೌಡಹಳ್ಳಿ, ಬೈರಸಂದ್ರ ಹಾ.ಉ.ಸಹಕಾರ ಸಂಘದ ಪ್ರಸಕ್ತ ಸಾಲಿನ ವಾರ್ಷಿಕ ಸಾಮಾನ್ಯ ಸಭೆ :

ಬೆಂಗಳೂರು : ‘ಬಮೂಲ್’ ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ದೊಡ್ಡತುಮಕೂರು, ಗೌಡಹಳ್ಳಿ ಮತ್ತು ಬೈರಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಬಮೂಲ್ ಮತ್ತು ನಂದಿನಿ ಸಂಸ್ಥೆಗಳು ಹಾಲು ಒಕ್ಕೂಟದ ಸಂಸ್ಥೆಗಳು ಎನ್ನುವುದಕ್ಕಿಂತ ರೈತರ ಸಂಸ್ಥೆಗಳು ಎನ್ನಬಹುದು. ಹಾಲು ಉತ್ಪಾದಕ ರೈತರು ಪರಿಶ್ರಮಪಟ್ಟು ಸಾಕಿರುವ ಹಸುಗಳ ಹಾಲನ್ನು ಸಂಗ್ರಹಿಸಿ, ಸಮರ್ಪಕ ರೀತಿಯಲ್ಲಿ ಮಾರಾಟ ಮತ್ತು ನಿರ್ವಹಣೆ ಮಾಡಿ, ಗಳಿಸಿದ ಹಣದಿಂದ ಬಮೂಲ್ ಮತ್ತು ನಂದಿನಿ ಸಂಸ್ಥೆಗಳು ಈ ಮಟ್ಟದ ದೊಡ್ಡ ಸಂಸ್ಥೆಗಳಾಗಿ ಬೆಳೆದಿವೆ.

ಹಾಲು ಉತ್ಪಾದಕರು ಹಾಲನ್ನು ಸಂಗ್ರಹಿಸಿ ತಂದು ಸಹಕಾರ ಸಂಘಗಳಿಗೆ ನೀಡುವ ಮೂಲಕ ಬಮೂಲ್ ಮತ್ತು ನಂದಿನಿ ಸಂಸ್ಥೆಗಳ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ರೈತರು ಹಾಲನ್ನೇ ಉತ್ಪಾದಿಸದಿಧ್ದರೆ ಈ ಸಂಸ್ಥೆಗಳ ಬೆಳವಣಿಗೆ, ಏಳಿಗೆ ಅಸಾಧ್ಯ, ಈ ದಿಸೆಯಲ್ಲಿ ಹಾಲು ಉತ್ಪಾದಕರ ಕೊಡುಗೆಯನ್ನು ಸ್ಮರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ವತಿಯಿಂದ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ, ಉತ್ತಮ ಗುಣಮಟ್ಟದ ಹಾಲಿನ ಶೆಖರಣೆ, ಸಂಘಗಳಲ್ಲಿ ಲೆಕ್ಕ ಪುಸ್ತಕಗಳ ಸಮರ್ಪಕ ನಿರ್ವಹಣೆ, ರಾಸುಗಳ ತಳಿ ಅಭಿವೃದ್ಧಿ, ಸದಸ್ಯರುಗಳಿಗೆ ಬಮೂಲ್ ನಿಂದ ಸಿಗುವ ಅನುದಾನದ ಮತ್ತು ಸೌಲಭ್ಯಗಳ ಸದ್ಬಳಕೆ ಕುರಿತು ಸಹಕಾರ ಸಂಘದ ಅಧ್ಯಕ್ಷರು,‌ ಕಾರ್ಯಕಾರಿ ಮಂಡಳಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹರು ಮತ್ತು ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಸಂಘದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭಗಳು ಇದ್ದಲ್ಲಿ ನಂದಿನಿ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ಮಾಡಲು ಅಗತ್ಯ ಜಾಗೃತಿ ಮೂಡಿಸುವ ಕುರಿತು ಚರ್ಚಿಸಲಾಯಿತು.

Leave a Reply

Your email address will not be published. Required fields are marked *