





ಪ್ರತಿ ಮನೆಯಲ್ಲೂ ನಂದಿನಿ ಉತ್ಪನ್ನಗಳನ್ನು ಬಳಸಿ ಹಾಲು ಉತ್ಪಾದಕರನ್ನು ಉಳಿಸಿ : ಡಿ.ಕೆ.ಸುರೇಶ್
ಬೆಂಗಳೂರು : ಪ್ರತಿ ಮನೆಯಲ್ಲೂ ನಂದಿನಿ ಉತ್ಪನ್ನಗಳನ್ನು ಬಳಸುವ ಮೂಲಕ ಹಾಲು ಉತ್ಪಾದಕರನ್ನು ಉಳಿಸಿ ಬೆಳೆಸಬೇಕು ಜೊತೆಗೆ ನಂದಿನಿ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ಅಧ್ಯಕ್ಷ ಡಿ.ಕೆ.ಸುರೇಶ್ ರಾಜ್ಯದ ಜನತೆಗೆ ಮನವಿ ಮಾಡಿದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತದ ವತಿಯಿಂದ ನಗರದ ಸುಮನಹಳ್ಳಿ ವೃತ್ತದ ಬಳಿಯ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ನಂದಿನಿ ರೈತರ, ಗ್ರಾಹಕರ, ಕಾರ್ಮಿಕರ ಸಂಸ್ಥೆ ರೈತರು ಶ್ರಮದಿಂದ ಕಟ್ಟಿರುವ ಈ ಸಂಸ್ಥೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರ ಸಹಕಾರ ಅವಶ್ಯಕ. ನಿಮ್ಮ ಊರಲ್ಲಿ, ನಿಮ್ಮ ಮನೆಗಳಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ನಂದಿನಿ ಉತ್ಪನ್ನಗಳನ್ನು ಬಳಸಿ, ನಂದಿನಿಯನ್ನು ಪ್ರೋತ್ಸಾಹಿಸಿ, ರೈತರನ್ನು ಉಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. 100ಕ್ಕೂ ಅಧಿಕ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ನಂದಿನಿ ಉತ್ಪನ್ನಗಳನ್ನು ಬಳಸುವ ಮೂಲಕ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ರೈತರಿಗೆ ಕೊಟ್ಟಮಾತು ಉಳಿಸಿಕೊಂಡಿದ್ದೇನೆ ಸತೀಶ್ ಕಡತನಮಲೆ :
ಸಾಮಾನ್ಯ ಸಭೆ ಉದ್ದೇಶಿಸಿ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ ‘ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕನಾಗಿ ಆಯ್ಕೆಯಾದ ವೇಳೆಯಲ್ಲಿ ಡೈರಿ ಉದ್ಯೋಗಗಳಲ್ಲಿ ಹಾಲು ಉತ್ಪಾದಕ ರೈತರ ಮಕ್ಕಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಾತು ನೀಡಿದ್ದೆ, ಅದರ ಈಡೇರಿಕೆಗಾಗಿ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರಿಗೆ ಮತ್ತು ಎಲ್ಲಾ ನಿರ್ದೇಶಕರಿಗೆ ಹಾಲು ಉತ್ಪಾದಕ ರೈತರ ಮಕ್ಕಳಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಮನವಿ ಮಾಡಿಕೊಂಡಿದ್ದೆ, ನನ್ನ ಮನವಿಯನ್ನು ಪರಿಶೀಲಿಸಿ ಪುರಸ್ಕರಿಸಿರುವ ಅಧ್ಯಕ್ಷರು ಮತ್ತು ಎಲ್ಲಾ ನಿರ್ದೇಶಕರು ಇಂದಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಶೇ.30% ಉದ್ಯೋಗ ಮೀಸಲಾತಿ, ಡೈರಿ ಸೆಕ್ರೆಟರಿ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಶೇ.10% ಉದ್ಯೋಗ ಮೀಸಲಾತಿ, ಡೈರಿ ಶಾಶ್ವತ ಉದ್ಯೋಗಿಗಳ ಮಕ್ಕಳಿಗೆ ಶೇ.5% ಉದ್ಯೋಗ ಮೀಸಲಾತಿ ಮತ್ತು ವಿತರಕರ ಮಕ್ಕಳಿಗೆ ಶೇ.5% ಉದ್ಯೋಗ ಮೀಸಲಾತಿ ನೀಡುವ ಮೂಲಕ ಒಟ್ಟು ಶೇಕಡಾ 50% ಉದ್ಯೋಗ ಮೀಸಲಾತಿಯನ್ನು ನೀಡಿರುವುದು ಸಂತೋಷದ ಸಂಗತಿ. ಇದಕ್ಕಾಗಿ ಅಧ್ಯಕ್ಷರು ಮತ್ತು ಎಲ್ಲಾ ನಿರ್ದೇಶಕರಿಗೂ ಅನಂತ ಧನ್ಯವಾದಗಳು, ಈ ಮೂಲಕ ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡಿರುವ ಆತ್ಮತೃಪ್ತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದಲ್ಲಿ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ, ಅತ್ಯುತ್ತಮ ಸಹಕಾರ ಸಂಘ ಮತ್ತು ಅತ್ಯುತ್ತಮ ಮುಖ್ಯ ಕಾರ್ಯನಿರ್ವಾಹಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ಬೆಂ. ಸಹಕಾರ ಹಾಲು ಒಕ್ಕೂಟದ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಬಿ.ಸಿ.ಆನಂದ್ ಕುಮಾರ್, ಬೈರೇಗೌಡ, ಪಿ.ನಾಗರಾಜ್, ಎಚ್.ಎಸ್.ಹರೀಶ್ ಕುಮಾರ್, ಆರ್.ಕೆ.ರಮೇಶ್, ಲಿಂಗೇಶ್ ಕುಮಾರ್, ಎಂ.ಮಂಜುನಾಥ್, ಸತೀಶ್ ಗೌಡ, ಮುನಿರಾಜು, ಅಶೋಕ್, ಕೃಷ್ಣಯ್ಯ, ಸುನಿಲ್, ರಘುನಂದನ್, ಡಾ.ನಾಗರಾಜ್, ಮಂಜುನಾಥ್ ಎ., ಅಶ್ವಥ್ ನಾರಾಯಣ್, ಡಾ.ಸುರೇಶ್ ಎಸ್.ಟಿ. ಸೇರಿದಂತೆ ಬಮೂಲ್ ಉದ್ಯೋಗಿಗಳಿದ್ದರು.