






3.5 ಕೋಟಿ ರು.ವೆಚ್ಚದ ಕಾಮಗಾರಿಗೆ ಎಸ್ ಆರ್ ವಿಶ್ವನಾಥ್ ರಿಂದ ಭೂಮಿಪೂಜೆ :
ಯಲಹಂಕ : ಕ್ಷೇತ್ರದ ಯಲಹಂಕ ಉಪನಗರ ವಾರ್ಡ್ 4ರ ವ್ಯಾಪ್ತಿಯ ನ್ಯಾಯಾಂಗ ಬಡಾವಣೆಯಲ್ಲಿ ಸುಮಾರು 3.5 ಕೋಟಿ ರು.ಅಂದಾಜು ವೆಚ್ಚದ ಕಾವೇರಿ ಕುಡಿಯುವ ನೀರಿನ ಪೈಪ್ ಲೈನ್ ಅಳವವಡಿಕೆ ಕಾಮಗಾರಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ‘ನ್ಯಾಯಾಂಗ ಬಡಾವಣೆಯಲ್ಲಿ ಇಂದು ಸುಮಾರು 3.5 ಕೋಟಿ ರು.ಅಂದಾಜು ವೆಚ್ಚದ ಕಾವೇರಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಯನ್ನು ಬಿ.ಡಬ್ಲ್ಯು.ಎಸ್.ಎಸ್.ಬಿ. ವತಿಯಿಂದ ನೆರವೇರಿಸಲಾಗುತ್ತಿದೆ.
ಸುಮಾರು 35 ವರ್ಷಗಳ ಹಿಂದೆ ಬಡಾವಣೆಯವರಿಂದ ಇಲ್ಲಿ ನೀರಿನ ಪೈಪ್ ಲೈನ್ ಅಳವಡಿಸಲಾಗಿತ್ತು. ಇದೀಗ ಹಳೆಯ ಪೈಪ್ ಲೈನ್ ತುಕ್ಕು ಹಿಡಿದಿರುವ ಕಾರಣದಿಂದಾಗಿ ನೀರು ಸಮರ್ಪಕ ರೀತಿಯಲ್ಲಿ ಸರಬರಾಜಾಗುತ್ತಿರಲಿಲ್ಲ, ಇದನ್ನು ಮನಗಂಡು ಸ್ಥಳೀಯ ನಾಗರೀಕರು ಪೈಪ್ ಲೈನ್ ಬದಲಾಯಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದರು, ನಾಗರೀಕರ ಮನವಿಯ ಮೇರೆಗೆ ಹೊಸ ಪೈಪ್ ಲೈನ್ ಅಳವಡಿಸಲು ಇಂದು ಚಾಲನೆ ನೀಡಲಾಗಿದೆ. ಕಾವೇರಿ 5ನೇ ಹಂತದ ನೀರು ಈ ಭಾಗಕ್ಕೆ ಸಾಕಷ್ಟು ಲಭ್ಯವಿರುವುದರಿಂದ ಎಲ್ಲಾ ಮನೆಗಳಿಗೆ ಸರಬರಾಜು ಮಾಡಲು ಹೊಸ ಪೈಪ್ ಲೈನ್ ಅಳವಡಿಕೆಯಿಂದ ಹೆಚ್ಚು ಸಹಕಾರಿಯಾಗಲಿದೆ, ಜೊತೆಗೆ ಸ್ಯಾನಿಠರಿ ಪೈಪ್ ಲೈನ್ ನ್ನು ಸಹ ಬದಲಾವಣೆ ಮಾಡಲಾಗುವುದು.
ನಾಗರೀಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇದರೊಟ್ಟಿಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಒಂದಷ್ಟು ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದು ಮುಂದಿನ 26ನೇ ತಾರೀಖಿನಂದು ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು.
ನ್ಯಾಯಾಂಗ ಬಡಾವಣೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದ್ದು, ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಹಲವು ಪ್ರತಿಷ್ಟಿತ ನ್ಯಾಯಾಧೀಶರು ನೆಲೆಸಿದ್ದಾರೆ. ಬಡಾವಣೆಯ ಅಂದವನ್ನು ಹೆಚ್ಚಿಸುವ ದಿಸೆಯಲ್ಲಿ ಉದ್ಯಾನವನ, ದೇವಾಲಯ, ಆಟದ ಮೈದಾನವನ್ನು ಸಹ ನಿರ್ಮಿಸಿ ಕೊಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ನ್ಯಾಯಾಂಗ ಬಡಾವಣೆ ಅತ್ಯುತ್ತಮ ಬಡಾವಣೆ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ನಾಗರೀಕರು ಸಹ ಅತ್ಯಂತ ಸುಶಿಕ್ಷಿತರಾಗಿರುವುದು ಬಡಾವಣೆಯ ಘನತೆಯನ್ನು ಎತ್ತಿ ಹಿಡಿದಿದೆ. ಕಾವೇರಿ ನೀರಿನ ಹೊಸ ಪೈಪ್ ಲೈನ್ ಅಂಡವಡಿಕೆಯ ಈ ಕಾಮಗಾರಿಯಿಂದ ಇಲ್ಲಿನ ಸುಮಾರು ಆರು ಸಾವಿರಕ್ಕೂ ಹೆಚ್ಚು ನಾಗರೀಕರಿಗೆ ಪ್ರಯೋಜನವಾಗ ಲಿದೆ ಎಂದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಎಂ.ಮುನಿರಾಜು, ಮಾಜಿ ಅಧ್ಯಕ್ಷ ಮಧುಸೂದನ್, ಬಿಜೆಪಿ ಮುಖಂಡರಾದ ರಮೇಶ್, ವೈ.ಜಿ.ವಸಂತ್, ರಾಮಮೂರ್ತಿ, ಚಂದ್ರೇಗೌಡ, ಅರವಿಂದ್, ಯಲಹಂಕ ಜಯಣ್ಣ, ಗಿರೀಶ್, ನಾಗಯ್ಯ ಸೇರಿದಂತೆ ನ್ಯಾಯಾಂಗ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿದ್ದರು.
