










ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ :
ಯಲಹಂಕ : ಹಣಕಾಸು ವ್ಯವಹಾರ ಕ್ಷೇತ್ರದಲ್ಲಿ ಇರುವವರು ಶುದ್ಧಹಸ್ತ ಎನಿಸಿಕೊಳ್ಖವುದು ಬಹಳ ಕಷ್ಟ, ಎಷ್ಟೇ ಪ್ರಾಮಾಣಿಕವಾಗಿದ್ದರೂ ಮಾತನಾಡಿಕೊಳ್ಳುವ ಜನ ಇದ್ದೇ ಇರುತ್ತಾರೆ, ಅಂತಹ ಮಾತುಗಳಿಗೆ ಕಿವಿಗೊಡದೆ, ಆತ್ಮಸಾಕ್ಷಿ ಒಪ್ಪುವಂತೆ ಕೆಲಸ ಮಾಡಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸಹಕಾರ ಸಂಘಗಳಲ್ಲಿ ಆರೋಗ್ಯ ಪೂರ್ಣ ಚರ್ಚೆಗಳಾಗಬೇಕು, ಅಗತ್ಯ ಮತ್ತು ಅಮೂಲ್ಯವಾದ ಸಲಹೆಗಳಿಗೆ ಎಲ್ಲರ ಬೆಂಬಲ ಇದ್ದೇ ಇರುತ್ತದೆ. ಆದರೆ ಸಹಕಾರ ಸಂಘಗಳ ವಿಚಾರದಲ್ಲಿ ಅಪ್ರಸ್ತುತವಾದ ಚರ್ಚೆ ಮತ್ತು ದುರುದ್ದೇಶಪೂರ್ವಕವಾದ ಪ್ರಶ್ನೆಗಳನ್ನು ಕೇಳುವಂತಹ ವ್ಯರ್ಥ ಪ್ರಯತ್ನಗಳಾಗಬಾರದು. ಕುಟುಂಬ ಗಳಲ್ಲಿ ಇರುವಂತೆಯೇ ಸಹಜವಾಗಿ ಸಹಕಾರಿ ಸಂಘಗಗಳಲ್ಲೂ ಸಣ್ಣ ಪುಟ್ಟ ಲೋಪಗಳು ಕಂಡು ಬರುತ್ತವೆ, ಅಂತಹ ವೇಳೆಯಲ್ಲಿ ಅವುಗಳನ್ನೇ ದೊಡ್ಡದು ಮಾಡಿ ಅಪಪ್ರಚಾರ ಮಾಡುವುದಕ್ಕಿಂತ ಸಹಯೋಗದಲ್ಲಿ ಕುಳಿತು ಸರಿಪಡಿಸಿಕೊಳ್ಳುವ ಆಶಾದಾಯಕ ಬೆಳವಣಿಗೆಗಳು ಆದಾಗ ಸಹಕಾರಿ ಸಂಘದ ಘನತೆ ಇನ್ನೂ ಎತ್ತರಕ್ಕೆ ತಲುಪುತ್ತದೆ. ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘ ಕಳೆದ ಹದಿನೈದು ವರ್ಷಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯಿಂದಾಗಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿ ಮುನ್ನಡೆಯುತ್ತಿದೆ, ಈ ಬಗ್ಗೆ ಪ್ರತಿಯೊಬ್ಬ ಸದಸ್ಯರು ಹೆಮ್ಮೆ ಪಡಬೇಕು ಎಂದು ಸಹಕಾರಿ ಸಂಘದ ಕಾರ್ಯ ವೈಖರಿ ಕುರಿತು ಶ್ಲಾಘಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ ಮಾತನಾಡಿ ‘ಸದಸ್ಯರ ಸಹಕಾರ, ನಿರ್ದೇಶಕರ ಬೆಂಬಲ ಮತ್ತು ಸಮಯೋಚಿತ ಸಲಹೆ, ಸಿಬ್ಬಂದಿಗಳ ಪ್ರಾಮಾಣಿಕ ಕಾರ್ಯವೈಖರಿಯಿಂದಾಗಿ ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಸಹಕಾರಿ ಸಂಘದಲ್ಲಿ ಸುಮಾರು 6 ಸಾವಿರ ಸದಸ್ಯರಿದ್ದು, 2025ರ ವರ್ಷಾಂತ್ಯಕ್ಕೆ 3.96 ಕೋಟಿ ರು.ಗಳ ಷೇರು ಸಂಗ್ರಹಣೆ ಹೊಂದಿದೆ. 118 ಕೋಟಿ 51 ಲಕ್ಷ ರು.ಗಳ ಠೇವಣಿ ಸಂಗ್ರಹವಿದ್ದು, ಸಹಕಾರಿ ಸಂಘದಲ್ಲಿ ಒಟ್ಟು 149 ಕೋಟಿ 85 ಲಕ್ಷ ರು.ಗಳಷ್ಟು ದುಡಿಯುವ ಬಂಡವಾಳವಿದೆ. 90.42 ಕೋಟಿ ರು.ಗಳಷ್ಟು ಸಾಲ ನೀಡಲಾಗಿದ್ದು, ಸೂಕ್ತ ಭದ್ರತಾ ಕ್ಷೇತ್ರಗಳಲ್ಲಿ 52.59 ಕೋಟಿ ರು.ಗಳಷ್ಟು ಹೂಡಿಕೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಹಕಾರ ಸಂಘಕ್ಕೆ ಸುಮಾರು 2.91 ಕೋಟಿ ರು.ಗಳಷ್ಟು ಲಾಭಾಂಶ ಬಂದಿದ್ದು, 2025ರ ವರ್ಷಾಂತ್ಯದ ವೇಳೆಗೆ ಸಹಕಾರಿ ಸಂಘವು ಸಮಾರು 387.75 ಕೋಟಿ ರು.ಗಳಷ್ಟು ವ್ಯವಹಾರ ಮಾಡಿದೆ ಎಂದು ಸಹಕಾರಿ ಸಂಘದ ಆರ್ಥಿಕ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್ ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ.75%ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ, ಮರಣ ಹೊಂದಿರುವ ಸದಸ್ಯರ ಕುಟುಂಬಸ್ತರಿಗೆ 5 ಸಾವಿರ ರು.ಗಳ ಸಹಾಯಧನ ವಿತರಣೆ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಎಸ್.ಎನ್.ಸಂಪತ್ ಕುಮಾರ್, ನಿರ್ದೇಶಕರಾದ ಇಟಗಲ್ ಪುರ ಎಂ.ಮೋಹನ್ ಕುಮಾರ್,ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ), ಹೆಚ್.ರಾಜಣ್ಣ, ಬಿ.ಕೆ.ರಾಜಾರೆಡ್ಡಿ, ಅರುಣಾ ಪ್ರಕಾಶ್, ಬಿ.ಎಂ.ಗೀತಾ, ಟಿ.ಎನ್.ಶ್ರೀನಿವಾಸ್, ಕೆ.ಜಿ.ರಾಮಕೃಷ್ಣಯ್ಯ, ಜಿ.ನರಸಿಂಹಮೂರ್ತಿ, ಸಿ.ಶ್ರೀನಿವಾಸ್, ಅಶ್ವಥ್ ನಾರಾಯಣರೆಡ್ಡಿ ವಿ., ಕೆ.ವಿ.ಸತೀಶ್, ಸಿ.ಆರ್. ಜಯಪ್ಪರೆಡ್ಡಿ, ಮುಖ್ಯ ಕಾರ್ಯ ನಿರ್ವಾಹಕ ನಾಗೇಶ್ ಸೇರಿದಂತೆ ಸಹಕಾರಿ ಸಂಘದ ಅಸಂಖ್ಯಾತ ಸದಸ್ಯರಿದ್ದರು.
