








ಯಲಹಂಕ ನಗರ ವ್ಯಾಪ್ತಿಯ ಕೆಂಪೇಗೌಡ ವಾರ್ಡ್, ಚೌಡೇಶ್ವರಿ ವಾರ್ಡ್ ಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ :
ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಕೆಂಪೇಗೌಡ ವಾರ್ಡ್ ಮತ್ತು ಚೌಡೇಶ್ವರಿ ವಾರ್ಡ್ ಗಳಲ್ಲಿ ರಸ್ತೆ ಅಭಿವೃದ್ಧಿ, ಕಾವೇರಿ ನೀರು ಸರಬರಾಜಿಗೆ ಚಾಲನೆ, ನೂತನವಾಗಿ ನಿರ್ಮಿಸಿದ್ದ ಸ್ವೀಟ್ ವೆಂಡಿಂಗ್ ಜೋನ್ ಉದ್ಘಾಟನೆ ಸೇರಿದಂತೆ ಸುಮಾರು 12 ಕೋಟಿ ರು.ಅಂದಾಜು ವೆಚ್ಚದ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಅವರು ಮಾತನಾಡಿ ‘ಯಲಹಂಕ ನಗರದ ಚೌಡೇಶ್ವರಿ ವಾರ್ಡ್ 2ರ ವ್ಯಾಪ್ತಿಯ ಹಾರೋಹಳ್ಳಿ, ಪುಟ್ಟೇನಹಳ್ಳಿ ಕಾಲೋನಿ, ನೇಹ ಪ್ರಕಾಶ್ ಆಸ್ಪತ್ರೆ,ಯಲಹಂಕ ಉಪನಗರದ 4ನೇ ಹಂತ ಮತ್ತು 5ನೇ ಹಂತ, ಯಲಹಂಕ ಕೆರೆ ಕೋಡಿ, ಕಾಮಾಕ್ಷಮ್ಮ ಬಡಾವಣೆ, ಕೊಂಡಪ್ಪ ಬಡಾವಣೆ ಗಳಲ್ಲಿ ಅಡ್ಡರಸ್ತೆ ಮತ್ತು ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿ ಹಾಗೂ ಯಲಹಂಕ ಉಪನಗರದ 4ನೇ ಹಂತ, ನೂತನವಾಗಿ ನಿರ್ಮಿಸಿದ್ದ ಸ್ವೀಟ್ ವೆಂಡಿಂಗ್ ಜೋನ್ ಉದ್ಘಾಟನೆ ಮತ್ತು ಕೆಂಪೇಗೌಡ ವಾರ್ಡ್ 1ರ ವ್ಯಾಪ್ತಿಯ ಗಾಂಧಿನಗರ, ಮಾರುತಿನಗರ, ಎಂ.ಬಿ.ಬೇಕರಿ ಪ್ರದೇಶ, ಪಾಪಣ್ಣ ಬಡಾವಣೆ, ಮುನಿತಿಮ್ಮಯ್ಯ ಬಡಾವಣೆ, ಕೂರ್ಲಪ್ಪ ಬಡಾವಣೆ, ಭದ್ರಪ್ಪ ಬಡಾವಣೆ, ಕೆ.ಎಚ್.ಬಿ. ಕಾಲೋನಿ, ಶಿನನಹಳ್ಳಿ, ಸುರಭಿ ಬಡಾವಣೆಗಳಲ್ಲಿ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿ, ಜಯಮುನಿ ಬಡಾವಣೆಯಲ್ಲಿ ಕಾವೇರಿ ನೀರು ಸರಬರಾಜಿಗೆ ಚಾಲನೆ ಸೇರಿದಂತೆ ಸುಮಾರು 12 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ರಾಜ್ಯ ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಯಲಹಂಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಟಿತವಾಗದಂತೆ ನೋಡಿಕೊಳ್ಳಲಾಗಿದೆ. ವಿಶೇಷವಾಗಿ ಕೆರೆಗಳ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಮತ್ತು ಅನಾದರದ ಬಗ್ಗೆ ಬೇಸರವಿದೆ. ಇದುವರೆಗೂ ನಿರಂತರವಾಗಿ ಅಭಿವೃದ್ಧಿ ಪಡಿಸಿಕೊಂಡು ಬರಲಾಗುತ್ತಿದ್ದ ಕಾಮಗಾರಿಗಳ ಯಥಾ ನಿರ್ವಹಣೆ ಸಹ ಅನುದಾನದ ಕೊರತೆಯಿಂದ ಕಷ್ಟಸಾಧ್ಯವಾಗಿದೆ. ಇತ್ತೀಚೆಗೆ ಕಾಂಗ್ರೆಸ್ ನವರು ಮೋದಿಯವರು ಯುವ ಜನತೆಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನೆ ಮಾಡಿದ್ದನ್ನು ಗಮನಿಸಿದೆ, ವಿಷಾದವೆಂದರೆ ಬೆಂಗಳೂರು ನಗರದಲ್ಲಿ ರಸ್ತೆ, ಮೂಲ ಸೌಕರ್ಯದ ಕೊರತೆಯಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರು ತೊರೆದು ಬೇರೆ ನಗರಗಳ ಕಡೆಗೆ ತೆರಳಲು ಮುಖ ಮಾಡಿ ನಿಂತಿವೆ, ಇದರಿಂದ ನಗರದಲ್ಲಿ ಉಂಟಾಗುವ ನಿರುದ್ಯೋಗ ಸಮಸ್ಯೆಗೆ ರಾಜ್ಯ ಸರ್ಕಾರ ಮೊದಲು ಕಡಿವಾಣ ಹಾಕಬೇಕಿದೆ. ಬೆಂಗಳೂರು ನಗರದಲ್ಲಿ ರಸ್ತೆ ಮತ್ತು ಮೂಲಸೌಕರ್ಯಗಳ ಕೊರತೆ ತಾಂಡವಾಡುತ್ತಿದೆ, ಇದು ಹೀಗೆಯೇ ಮುಂದುವರಿದರೆ ಹಲವು ಬಹುರಾಷ್ಟ್ರೀಯ ಕಂಪನಿಗಳು ನಗರವನ್ನು ತೊರೆಯುವುದು ನಿಶ್ಚಿತ, ಈ ದಿಸೆಯಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಂಡು ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಕೆಂಪೇಗೌಡ, ಚಂದ್ರಮ್ಮ ಕೆಂಪೇಗೌಡ, ಬಿಜೆಪಿ ಮುಖಂಡರಾದ ಮುರಾರಿರಾಮು, ಈಶ್ವರ್, ವಿ.ಪವನ್ ಕುಮಾರ್, ವಿ.ವಿ.ರಾಮಮೂರ್ತಿ, ಎ.ಎಸ್.ರಾಜ, ಈಶ್ವರಪ್ಪ, ನರಸಿಂಹಮೂರ್ತಿ, ಎಚ್.ಎಸ್.ಕಿರಣ್, ಯಲಹಂಕ ಜಯಣ್ಣ, ಗಿರೀಶ್, ಧನಂಜಯ(ಧನು), ಮುನಿಯಪ್ಪ (ಕೂರ್ಲಪ್ಪ), ನಾಗರಾಜ್, ವೆಂಕಟಾಲ ಮುನಿರಾಜು ಸೇರಿದಂತೆ ಇನ್ನಿತರರಿದ್ದರು.
ಕೊಟ್ಟ ಮಾತು ಉಳಿಸಿಕೊಂಡ ನರೇಂದ್ರ ಮೋದಿ :
ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ದಸರಾ, ದೀಪಾವಳಿಗೆ ದೊಡ್ಡ ಉಡುಗೊರೆ ನೀಡುವ ಭರವಸೆ ನೀಡಿದ್ದರು. ಇದೀಗ ಜಿ.ಎಸ್.ಟಿ.ಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಮಾಡಿ ಜನಸಾಮಾನ್ಯರ ಜೀವನ ನಿರ್ವಹಣೆಯನ್ನು ಸರಳಗೊಳಿಸುವ ಮೂಲಕ ಕೊಟ್ಟ ಮಾತು ಉಳಿಕೊಂಡಿದ್ದಾರೆ, ಈ ಸತ್ಕಾರ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜನತೆಯ ಪರವಾಗಿ ಅಭಿನಂದಿಸುವುದಾಗಿ ಎಸ್.ಆರ್.ವಿಶ್ವನಾಥ್ ತಿಳಿಸಿದರು. ಇದೇ ವೇಳೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನರೇಂದ್ರ ಮೋದಿಯವರು ಮತ್ತು ನಿರ್ಮಲಾ ಸೀತಾರಾಮನ್ ಅವರ ಪರ ಘೋಷಣೆ ಕೂಗಿ ಸಂಭ್ರಮ ಆಚರಿಸಿದರು.
