




ಯಲಹಂಕ : ಶೇಷಾದ್ರಿಪುರಂ ಶಿಕ್ಷಣದತ್ತಿ, ನೆಟ್ ಕ್ರಾಫ್ಟ್ಸ್ ಎಜುಟೆಕ್, ವಿಶ್ ಟು ಸ್ಕಿಲ್ ಸಹಯೋಗದಲ್ಲಿ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಮತ್ತು ನಗರದ ವಿವಿಧ ಕಾಲೇಜುಗಳಲ್ಲಿ ಪದವಿ ಪಡೆದಿರುವ 2 ಸಾವಿರಕ್ಕೂ ಹೆಚ್ಚು ಪದವೀಧರರು ಪಾಲ್ಗೊಂಡು, ಉದ್ಯೋಗ ಮೇಳದ ಸದುಪಯೋಗ ಪಡೆದುಕೊಂಡರು.
ಉದ್ಯೋಗ ಮೇಳದಲ್ಲಿ ಅಕ್ಸೆಂಚರ್, ಬಜಾಜ್, ಐಸಿಐಸಿಐ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು, ತಮ್ಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕೌಶಲ್ಯ ಹೊಂದಿರುವ ಪದವೀಧರರನ್ನು ಸಂದರ್ಶನದ ಮೂಲಕ ಅನ್ವೇಷಣೆ ಮಾಡಿದರು.
ಉದ್ಯೋಗ ಮೇಳ ಕುರಿತು ನೆಟ್ ಕ್ರಾಫ್ಟ್ಸ್ ಎಜುಟೆಕ್ ಸಂಸ್ಥೆಯ ಸಿಇಒ ಸುದೀಪ್ ದೀಕ್ಷಿತ್ ಮಾತನಾಡಿ ‘ಶೇಷಾದ್ರಿಪುರಂ ಶಿಕ್ಷಣ ದತ್ತಿ ಮತ್ತು ನೆಟ್ ಕ್ರಾಫ್ಟ್ಸ್ ಎಜುಟೆಕ್ ಸಹಯೋದಲ್ಲಿ ಇಂದು ಉದ್ಯೋಗ ಆಯೋಜಿಸಿದ್ದು, ಇದೊಂದು ಹೊಸ ಉಪಕ್ರಮವಾಗಿದೆ. ಈ ಮೂಲಕ ಶಿಕ್ಷಣದ ಜೊತೆಗೆ ಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶವನ್ನು ಸಹ ಕಲ್ಪಿಸಿಕೊಡುವ ದಿಸೆಯಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಹೊಸ ಹೆಜ್ಜೆ ಇಟ್ಟಿದೆ. ಈ ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ಪಾಲ್ಗೊಂಡಿದ್ದು, ತಮ್ಮ ಸಂಸ್ಥೆಯಲ್ಲಿರುವ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲ್ಯವುಳ್ಳ ಪದವೀಧರರ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಉದ್ಯೋಗ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಪದವೀಧರರು ಪಾಲ್ಗೊಂಡಿದ್ದು, ಇವರಲ್ಲಿ ಕನಿಷ್ಟಪಕ್ಷ ಒಂದು ಸಾವಿರ ಮಂದಿ ಪದವೀಧರರಿಗೆ ಉದ್ಯೋಗಾವಕಾಶ ದೊರೆಯುವ ಮೂಲಕ ನಮ್ಮ ಪ್ರಯತ್ನ ಸಫಲವಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಂಗಸಂಸ್ಥೆ ‘ಶೇಷಾದ್ರಿಪುರಂ ಅಕಾಡೆಮಿ ಫಾರ್ ಗ್ಲೋಬಲ್ ಎಕ್ಸೆಲೆನ್ಸಿ’ ಸಂಸ್ಥೆಯ ನಿರ್ದೇಶಕಿ ಡಾ.ವತ್ಸಲಾ ಜಿ. ಮತ್ತು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ಎನ್.ವೆಂಕಟೇಶ್ ಅವರು ಮಾತನಾಡಿ ಶಿಕ್ಷಣ ದತ್ತಿಯ ಹೊಸ ಉಪಕ್ರಮ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿಶ್ 2 ಸ್ಕಿಲ್ ಸಂಸ್ಥೆಯ ನಿರ್ದೇಶಕ ವಿಶಾಲ್ ಪೆಟ್ಕರ್, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ವಿವೇಕಾನಂದ ಸೇರಿದಂತೆ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793. 8050671579
7349337989
