




ಕ್ಯಾನ್ಸರ್ ದುಷ್ಪರಿಣಾಮ ಕುರಿತು ಜನ ಜಾಗೃತಿ ಜಾಥಾ :
ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವುಮೆನ್ ಪವರ್ ಆರ್ಗನೈಸೇಶನ್ ಸಹಯೋಗ :
ಯಲಹಂಕ : ವುಮೆನ್ ಪವರ್ ಆರ್ಗನೈಸೇಶನ್, ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ರಾಜಾನುಕುಂಟೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಜನಜಾಗೃತಿ ಜಾಥಾದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜನಜಾಗೃತಿ ಮೂಡಿಸಿದರು.
ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಿಂದ ಹೊರಟ ಕ್ಯಾನ್ಸರ್ ಜಾಗೃತಿ ಜಾಥಾ ಕಾಕೋಳು ರಸ್ತೆಯ ಮೂಲಕ ರಾಜಾನುಕುಂಟೆ ಪೊಲೀಸ್ ಠಾಣೆಯ ವರೆಗೆ ಸಾಗಿ, ಪುನಃ ಸಾಯಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಳಿ ತೆರಳಿ ಜಾಥಾ ಅಂತ್ಯಗೊಂಡಿತು. ಈ ವೇಳೆ ವಿದ್ಯಾರ್ಥಿಗಳು ಕ್ಯಾನ್ಸರ್ ದುಷ್ಪರಿಣಾಮಗಳ ಕುರಿತ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.
ಜಾಥಾ ಉದ್ದೇಶಿಸಿ ವುಮೆನ್ ಪವರ್ ಆರ್ಗನೈಸೇಶನ್ ನ ಅಧ್ಯಕ್ಷೆ ಕವಿತಾ ಆರ್. ಮಾತನಾಡಿ ‘ಕ್ಯಾನ್ಸರ್ ಒಂದು ಮಾರಕ ರೋಗವಾಗಿದ್ದು, ಬೇಗ ಅರಿವಿಗೆ ಬರುವುದಿಲ್ಲ, ಅರಿವಿಗೆ ಬರುವ ವೇಳೆಗೆ ಅಂತಿಮ ಹಂತ ತಲುಪಿರುತ್ತದೆ. ವಿಶೇಷವಾಗಿ ಇತ್ತೀಚೆಗೆ ಮಹಿಳೆಯರಲ್ಲಿ ಹಲವು ವಿಧದ ಕ್ಯಾನ್ಸರ್ ರೋಗ ಕಾಣಿಕೊಳ್ಳತ್ತಿರುವುದು ಆಘಾತಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಕುರಿತು ಜನಜಾಗೃತಿ ಮೂಡಿಸಬೇಕೆಂಬ ಆಶಯದೊಂದಿಗೆ ಇಂದು ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳೊಟ್ಟಿಗೆ ಕ್ಯಾನ್ಸರ್ ಕುರಿತು ಜನಜಾಗೃತಿ ಮೂಡಿಸಲಾಗಿದೆ ಎಂದರು.
ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ.ಮಂಜುನಾಥ್ ಟಿ.ಎನ್.ಮಾತನಾಡಿ ‘ಕ್ಯಾನ್ಸರ್ ರೋಗದ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಅದನ್ನು ತಡೆಗಟ್ಟಲು ಶ್ರಮಿಸಬೇಕಾದುದು ವಿದ್ಯಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಾಮಾಜಿಕ ಹೊಣೆಗಾರಿಕೆ ಯಾಗಿದ್ದು, ಈ ದಿಸೆಯಲ್ಲಿ ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ವುಮೆನ್ ಪವರ್ ಆರ್ಗನೈಸೇಶನ್ ಸಹಯೋಗ ದೊಂದಿಗೆ ಜಾಗೃತಿ ಜಾಥಾ ಆಯೋಜಿಸಿರುವುದು ಅತ್ಯುತ್ತಮ ಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಹಲವು ಕಾರ್ಯಕ್ರಮಗಳನ್ನು ವುಮೆನ್ ಪವರ್ ಆರ್ಗನೈಸೇಶನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಜಾಗೃತಿ ಜಾಥಾದಲ್ಲಿ ವುಮೆನ್ ಪವರ್ ಆರ್ಗನೈಸೇಶನ್ ನ ಉಪಾಧ್ಯಕ್ಷೆ ಡಾ.ಅಂಬಿಕಾ, ಕಾರ್ಯದರ್ಶಿ ಜಾನಕಿ, ಖಜಾಂಚಿ ಪ್ರೇಮ, ಟ್ರಸ್ಟಿ ಉಮಾ, ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯ ಪ್ರಾಧ್ಯಾಪಕರಾದ ಡಾ.ವೃಂದಾ, ಡಾ.ರಾಧಾ ಸೇರಿದಂತೆ ಕಾಲೇಜಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
