



ಉತ್ಪಾದನಾ ಪ್ರಕ್ರಿಯೆಯಲ್ಲಿ ಪರಿಸರ ಸ್ನೇಹಿ ಸಾಮಗ್ರಿ ಬಳಸುವಂತೆ ವಿಧೇಯಕ ಹೊರಡಿಸಲಿ : ಡಾ.ಅನಿಂದ್ಯ ದೇಬ್
ಯಲಹಂಕ : ಉತ್ಪಾದಕರು ತಮ್ಮ ಉತ್ಪಾದನಾ ಪ್ರಕ್ರಿಯೆಯಲ್ಲಿ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸುವಂತೆ ಸರ್ಕಾರ ವಿಧೇಯಕ ಹೊರಡಿಸಬೇಕು ಆಗ ಮಾತ್ರ ಭೂಮಿಯ ತಾಪಮಾನ ಏರಿಕೆಯಾಗದಂತೆ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ವಿನ್ಯಾಸ ಮತ್ತು ಉತ್ಪಾದನಾ ವಿಭಾಗದ ಪ್ರಾಧ್ಯಾಪಕ ಡಾ.ಅನಿಂದ್ಯದೇಬ್ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಸುಧಾರಿತ ಸಾಮಗ್ರಿಗಳು ಹಾಗೂ ಸುಸ್ಥಿರ ತಂತ್ರಜ್ಞಾನ’ ಕುರಿತ 2 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಸರ್ಕಾರ ವಿಧೇಯಕ ಮಂಡಿಸಿದರೆ ಸಾಲದು, ವಿಧಾಯಕ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಆದೇಶಿಸಬೇಕು ಮತ್ತು ಗಮನ ಹರಿಸಬೇಕು. ಪರಿಸರ ಸ್ನೇಹಿಯಾದ ವಿಧೇಯಕಗಳನ್ನು ಸರ್ಕಾರ ಮಂಡಿಸದಿದ್ದರೆ ಮುಂದಿನ ದಿನಗಳಲ್ಲಿ ಜಾಗತಿಕ ತಾಪಮಾನದ ನಿರಂತರ ಏರಿಕೆಯಿಂದಾಗಿ ನಾವು ಕ್ರಮೇಣ ನಮ್ಮ ಮೂಲ ನೆಲೆಯಾದ ಭೂಮಿಯನ್ನೇ ಕಳೆದುಕೊಳ್ಳಬೇಕಾದ ದುರ್ಗತಿಗೆ ತಲುಪುತ್ತೇವೆ. ಉದ್ಯಮ ಸಂಸ್ಥೆಗಳು, ಕೈಗಾರಿಕೆಗಳು ಸದಾ ಪರಿಸರ ಸ್ನೇಹಿ, ಲಘು ತೂಕದ, ಪುನರ್ಬಳಕೆಗೆ ಯೋಗ್ಯವಾದ, ದೀರ್ಘಕಾಲ ಬಾಳಿಕೆಗೆ ಬರುವ ಮತ್ತು ವಿಷ ಅನಿಲ ಹೊರಸೋಸದಂತಹ ಸುರಕ್ಷಿತ ಅನ್ವೇಷಣೆಗಳನ್ನು ಮಾಡಬೇಕು. ಇದರಿಂದ ಜಗತ್ತಿನ ಸುಸ್ಥಿರತೆಯ ಜೊತೆಗೆ ಸಂಸ್ಥೆಗಳಿಗೂ ಸಹಕಾರಿಯಾಗುತ್ತದೆ ಎಂದರು.
ನಿಟ್ಟೆ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಸುಧೀರ್ ರೆಡ್ಡಿ ಮಾತನಾಡಿ ‘ಸಂಯುಕ್ತ ರಾಷ್ಟ್ರ ಸಂಸ್ಥೆ’ಯ 193 ಸದಸ್ಯ ರಾಷ್ಟ್ರಗಳ ಪೈಕಿ ಸುಸ್ಥಿರತೆಯನ್ನು ಸಾಧಿಸಿರುವ ದೇಶಗಳ ಪಟ್ಟಿಯಲ್ಲಿ ಭಾರತ 99ನೇ ಸ್ಥಾನದಲ್ಲಿದೆ. ಇದು ನಿರಾಶಾದಾಯಕ, ನಾವು ನಮ್ಮ ಸ್ಥಾನವನ್ನು ಸುಧಾರಿಸಿಕೊಂಡು ಪಟ್ಟಿಯಲ್ಲಿ ಗಣನೀಯ ಸ್ಥಾನ ಪಡೆದುಕೊಳ್ಳಲು ಶ್ರಮಿಸಬೇಕು. ಇದಕ್ಕೆ 2030ನೇ ಇಸವಿ ಗಡುವಾಗಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು.
ಸಮ್ಮೇಳನದಲ್ಲಿ ದೇಶ ವಿದೇಶಗಳ ವಿವಿಧೆಡೆಗಳಿಂದ 130 ಸಂಶೋಧನಾ ಪ್ರಬಂಧಗಳನ್ನು ಸ್ವೀಕರಿಸಲಾಯಿತು.
ಸಮ್ಮೇಳನದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಸಿ.ನಾಗರಾಜ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಬಾಬು ಎನ್., ಸಹ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಜಿ.ಎಲ್., ಸಂಶೋಧನಾ ವಿಭಾಗದ ಡೀನ್ ಡಾ.ಕಿರಣ್ ಐತಾಳ್ ಎಸ್. ಸೇರಿದಂತೆ 500ಕ್ಕೂ ಅಧಿಕ ಸಂಖ್ಯೆಯ ಸಂಶೋಧನಾಸಕ್ತರು, ತಜ್ಞರು, ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳಿದ್ದರು.
