











ಯಲಹಂಕ : ಯಲಹಂಕ ತಾಲ್ಲೂಕಿನ ರಾಜಾನುಕುಂಟೆ- ಬೆಟ್ಟಹಲಸೂರು ನಡುವೆ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜಾನುಕುಂಟೆ, ಹೊನ್ನೇನಹಳ್ಳಿ,ನಾಗದಾಸನಹಳ್ಳಿ ತಿಮ್ಮಸಂದ್ರ ಮತ್ತು ಬೆಟ್ಟಹಲಸೂರು ಗ್ರಾಮಗಳ ರೈತರು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಬಿ.ಜಿ.ನಂಜುಂಡಪ್ಪ ಬೆಟ್ಟಹಲಸೂರು ಅವರ ನೇತೃತ್ವದಲ್ಲಿ ಭಾನುವಾರ ತಿಮ್ಮಸಂದ್ರ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ರೈತಸಂಘದ ರಾಜ್ಯ ಕಾರ್ಯದರ್ಶಿ ಬಿ.ಜಿ.ನಂಜುಂಡಪ್ಪ ಬೆಟ್ಟಹಲಸೂರು ಅವರು ಮಾತನಾಡಿ ‘ಸದರಿ ರೈಲ್ವೆ ಲೈನ್ ಯೋಜನೆಯು ಅವೈಜ್ಞಾನಿಕ ಯೋಜನೆಯಾಗಿದ್ದು, ಇದರಿಂದ ಸಾಕಷ್ಟು ರೈತರು ಮತ್ತು ಅವರ ಕುಟುಂಬಗಳು ತಮ್ಮ ಜೀವನಾಧಾರವಾಗಿರುವ ಅಮೂಲ್ಯವಾದ ಕೃಷಿ ಭೂಮಿಯನ್ನು ಕಳೆದುಕೊಂಡು ಬೀದಿಪಾಲಾಗಬೇಕಾಗುತ್ತದೆ. ಈ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ರೈತರು ಅತಿ ಸಣ್ಣ ಇಡುವಳಿದಾರರಾಗಿದ್ದು, ತುಂಡು ಭೂಮಿಯನ್ನು ನೆಚ್ಚಿಕೊಂಡು, ಅದರಲ್ಲೇ ಕೃಷಿ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ಇಲ್ಲಿನ ಭೂಮಿ ಫಲವತ್ತಾಗಿದ್ದು, ಕೃಷಿಗೆ ಹೇಳಿ ಮಾಡಿಸಿದಂತಿದೆ. ಇಂತಹ ಕಸುವಾಗಿರುವ ಕೃಷಿ ಭೂಮಿಯನ್ನು ರೈಲ್ವೆ ಲೈನ್ ಯೋಜನೆಗೆ ಬಿಟ್ಟುಕೊಟ್ಟರೆ ನಮ್ಮ ಬದುಕು ಬೀದಿಗೆ ಬರುತ್ತದೆ ಎಂಬ ಆತಂಕದಲ್ಲಿ ಇಲ್ಲಿನ ರೈತರಿದ್ದಾರೆ. ಇಂತಹ ವಿಷಮ ಸ್ಥಿತಿಯಲ್ಲಿ ಅಭಿವೃದ್ಧಿಯ ನೆಪದಲ್ಲಿ ರೈತರನ್ನು ಬೀದಿಪಾಲು ಮಾಡಲು ಹೊರಟಿರುವ ಸರ್ಕಾರ ಕ್ರಮ ಸಮಂಜಸವಾದುದಲ್ಲ, ಸರ್ಕಾರ ಕೂಡಲೇ ಈ ರೈಲ್ವೆ ಲೈನ್ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಬೆಂಕಿ ನಾರಾಯಣ ಅವರು ಮಾತನಾಡಿ ‘ಈಗಾಗಲೇ ಇದೇ ಭಾಗದಲ್ಲಿ ಗೌರಿಬಿದನೂರು- ಚಿಕ್ಕಬಳ್ಳಾಪುರದ ನಡುವೆ ಮತ್ತು ದೊಡ್ಡಬಳ್ಳಾಪುರ-ದೇವನಹಳ್ಳಿ ನಡುವೆ ಸರ್ಕ್ಯುಲರ್ ರೈಲ್ವೆ ಲೈನ್ ಹಾಕಲು ಉದ್ದೇಶಿಸಿದ್ದು, ಸದರಿ ರಾಜಾನುಕುಂಟೆ-ಬೆಟ್ಟಹಲಸೂರು ರೈಲ್ವೆ ಲೈನ್ ಅನವಶ್ಯಕವಾಗಿದ್ದು, ಇದೊಂದು ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆಯಲು ಕೈಗೊಂಡಿರುವ ಯೋಜನೆಯಾಗಿದೆ, ಇದನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಿಮ್ಮಸಂದ್ರದ ರೈತ ಮುಖಂಡ ಅಂಬರೀಶ್ ಗೌಡ ಮಾತನಾಡಿ ‘ಈ ಭೂಮಿಯಲ್ಲಿ ನಾವು ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆದು ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಸದರಿ ರೈಲ್ವೆ ಲೈನ್ ಹಾದು ಹೋಗುವ ಜಾಗದಲ್ಲಿ ದಾಳಿಂಬೆ, ಸೀಬೆ, ದ್ರಾಕ್ಷಿ, ಪಪ್ಪಾಯಿ, ತೆಂಗು, ಅಡಿಕೆ ಇನ್ನಿತರ ತೋಟಗಾರಿಕಾ ಬೆಳೆಗಳಿವೆ. ರೈಲ್ವೆ ಲೈನ್ ಯೋಜನೆ ಜಾರಿಗೆ ಬರುವುದಾದರೆ ನಮ್ಮ ಬದುಕು ಬರಡಾಗುತ್ತದೆ ಈ ದಿಸೆಯಲ್ಲಿ ರೈಲ್ವೆ ಇಲಾಖೆ, ರಾಜ್ಯ ಸರ್ಕಾರ ಸದರಿ ಯೋಜನೆ ಕೈಬಿಡಬೇಕು ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆಯಲ್ಲಿ ಬೆಟ್ಟಹಲಸೂರು ಗ್ರಾಮದ ರೈತ ಮುಖಂಡರಾದ ಜೀರಿಗೆ ಬಾಬು, ಮೋಹನ್ ಕುಮಾರ್, ಅಪ್ಪಾಜಿ ಆರ್., ಲೋಕೇಶ್ ಶರ್ಮ ರಾಜಾನುಕುಂಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿದ್ದರು.
