





ನೈಸರ್ಗಿಕ ಕೃಷಿ ಭಾರತೀಯ ಕೃಷಿ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ : ಡಾ.ಪಿ.ಎಸ್.ಮಹೇಶ್
ಐಸಿಎಆರ್-ನಿವೇದಿ ಸಂಸ್ಥೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ :
ಯಲಹಂಕ : ನೈಸರ್ಗಿಕ ಕೃಷಿ ಅಮೇರಿಕಾದಂತಹ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಇತ್ತೀಚೆಗೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿಧೆ ಆದರೆ ನೈಸರ್ಗಿಕ ಕೃಷಿ ಭಾರತೀಯ ಕೃಷಿ ಪರಂಪರೆಯಲ್ಲಿ ಹಾಸುಹೊಕ್ಕಾಗಿದ್ದು, ನಮ್ಮ ಪೂರ್ವಜರು ಯಾವುದೇ ರಸಗೊಬ್ಬರ, ಕೀಟನಾಶಕಗಳನ್ನು ಬಳಸದೆ ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಿದ್ದರು, ಅದನ್ನೇ ಈಗ ವಿಶ್ವದ ಬಲಾಡ್ಯ ರಾಷ್ಟ್ರಗಳು ನಕಲು ಮಾಡುತ್ತಿವೆ ಎಂದು ಪಶುಪಾಲನಾ ಶ್ರೇಷ್ಠತಾ ಕೇಂದ್ರ(ಸಿ.ಇ.ಎ.ಎಚ್.)ದ ಜಂಟಿ ಆಯುಕ್ತರು ಮತ್ತು ನಿರ್ದೇಶಕರಾದ ಡಾ.ಪಿ.ಎಸ್.ಮಹೇಶ್ ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಸಮೀಪ ವಿರುವ ‘ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ(ಐಸಿಎಆರ್- ನಿವೇದಿ)ಯಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ರೈತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು ‘ಭಾರತೀಯ ಕೃಷಿ ಮತ್ತು ಪಶುಸಂಗೋಪನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಭಾರತೀಯ ಕೃಷಿ ಪದ್ದತಿಯಲ್ಲಿ ಕೃಷಿಗೆ ಅಗತ್ಯವಿರುವ ಗೊಬ್ಬರದ ಬಹುತೇಕ ಉತ್ಪಾದನೆ ದನಕರುಗಳು, ಕುರಿ,ಮೇಕೆ,ಕೋಳಿ ಸಾಕಾಣಿಕೆಯಿಂದಲೇ ಆಗುತ್ತದೆ. ಪಶು ಆಧಾರಿತ ಗೊಬ್ಬರಕ್ಕೆ ಯಾವ ರಸಗೊಬ್ಬರವೂ ಸರಿಸಾಟಿಯಾಗ ಲಾರದು, ಈ ದಿಸೆಯಲ್ಲಿ ಪಶುಸಂಗೋಪನೆ ನಮ್ಮ ರೈತರಿಗೆ ಗೊಬ್ಬರ ಉತ್ಪಾದನೆಯ ಜೊತೆಗೆ ಆದಾಯದ ಮೂಲವೂ ಆಗಿದೆ. ಪಶುಸಂಗೋಪನೆ ಕೈಗೊಳ್ಳುವ ರೈತರು ವೈಯಕ್ತಿಕ ಆರೋಗ್ಯ, ಪರಿಶುದ್ಧತೆಯ ಜೊತೆಗೆ ಪಶುಗಳ ಆರೋಗ್ಯ ಮತ್ತು ಪರಿಶುದ್ಧತೆಗೂ ಮಹತ್ವ ನೀಡಬೇಕು. ಇದರಿಂದ ಪಶುಸಂಗೋಪನೆಯ ಉತ್ಪನ್ನಗಳಾದ ಹಾಲು, ಮಾಂಸದ ಉತ್ಪಾದನೆ ವೃದ್ಧಿಯಾಗುವ ಮೂಲಕ ರೈತರ ಆದಾಯ ದ್ವಿಗುಣವಾಗುತ್ತದೆ ಎಂದರು.
ಐಸಿಎಆರ್ ನಿವೇದಿ ಸಂಸ್ಥೆಯ ನಿರ್ದೇಶಕ ಡಾ.ಬಲದೇವ್ ಆರ್.ಗುಲಾಟಿ ಮಾತನಾಡಿ ‘ಭಾರತ ಸರ್ಕಾರ ಕೃಷಿಕರು ಮತ್ತು ಪಶುಸಾಂಗೋಪನೆ ಬೆಂಬಲ ನೀಡುವ ದಿಸೆಯಲ್ಲಿ ಹಲವು ವಿನೂತನ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದಿದ್ದು, ನಮ್ಮ ರೈತರು ಮತ್ತು ಪಶುಪಾಲಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರಧಾನಿ ಮೋದಿಯವರು ಶೀಘ್ರದಲ್ಲೇ ಜಾರಿಗೊಳಿಸಲಿರುವ ಜಿ.ರಾಮ್ ಜಿ.ಮಸೂದೆಯಿಂದ ದೇಶದ ಅಸಂಖ್ಯಾತ ಕೃಷಿಕರು ಮತ್ತು ಕೃಷಿ ಕಾರ್ಮಿಕರಿಗೆ ವರ್ಷದ 125 ದಿನಗಳು ಉದ್ಯೋಗ ಒದಗಿಸಲಿದ್ದು, ಕೃಷಿಕರನ್ನು ಸಶಕ್ತಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ. ನಮ್ಮ ರೈತರು ಕೃಷಿಯ ಜೊತೆಗೆ ಹಸು, ಕುರಿ, ಕೋಳಿ, ಮೇಕೆ, ಹಂದಿ ಸಾಕಾಣೆಯಂಥ ವಿವಿಧ ರೀತಿಯ ಪಶುಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಐಸಿಎಆರ್-ನಿವೇದಿ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜೇಶ್ವರಿ ಶೋಮ್ ಅವರು ರೈತ ದಿನಾಚರಣೆಯ ಮಹತ್ವ ಕುರಿತು ವಿವರಿಸಿದರು.
ರೈತ ದಿನಾಚರಣೆ ಪ್ರಯುಕ್ತ ಹಲವು ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಕಾವೇರಿ ಹೆಸರಿನ ಹೊಸತಳಿಯ ಕೋಳಿಮರಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಐಸಿಎಆರ್-ಸಿ.ಐ.ಆರ್.ಬಿ.ಸಂಸ್ಥೆಯ ನಿವೃತ್ತ ಮುಖ್ಯ ವಿಜ್ಞಾನಿ ಡಾ.ಸಂದೀಪ್ ಖುರಾನಾ, ಐಸಿಎಆರ್-ನಿವೇದಿ ಸಂಸ್ಥೆಯ ಮುಖ್ಯ ವಿಜ್ಞಾನಿಗಳಾದ ಡಾ.ಜಗದೀಶ್ ಹಿರೇಮಠ್,ಡಾ.ಎಸ್.ಎಸ್.ಪಾಟೀಲ್, ಹಿರಿಯ ವಿಜ್ಞಾನಿಗಳಾದ ಡಾ.ನಾರಾಯಣನ್ ಜಿ., ಡಾ.ಚೇತನ್ ಕುಮಾರ್ ಎಚ್.ಪಿ. ಸಿ.ಪಿ.ಡಿ.ಓ. ಡಾ.ಕೃಷ್ಣನ್ ಸೇರಿದಂತೆ ನೂರಾರು ರೈತರು ಹಾಗೂ ರೈತಮಹಿಳೆಯರಿದ್ದರು.
