













ರಂಗೋಲಿ ಬಿಡಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿದ ಐನೂರಕ್ಕೂ ಹೆಚ್ಚು ಮಹಿಳೆಯರು :
ಯಲಹಂಕ : ಸುಮಾರು ಒಂದು ಕಿ.ಮೀ.ಗೂ ಹೆಚ್ಚು ಉದ್ದನೆಯ ರಸ್ತೆಯುದ್ದಕ್ಕೂ ರಂಗು ರಂಗಿನ ರಂಗೋಲಿ ಹಿಡಿದು ಉತ್ಸುಕತೆಯಿಂದ ರಂಗೋಲಿ ಬಿಡಿಸುತ್ತಿದ್ದ ನೂರಾರು ಮಹಿಳೆಯರು, ಅವರ ಮುಖದಲ್ಲಿ ಮಂದಹಾಸ, ಸ್ಪರ್ಧೆಯಲ್ಲಿ ಗೆಲ್ಲಲೇಬೇಕೆಂಬ ಹೆಬ್ಬಯಕೆ, ಶ್ರದ್ಧೆಯಿಂದ ರಂಗೋಲಿ ಬಿಡಿಸುತ್ತಾ ತಮ್ಮ ಪ್ರತಿಭೆ ಅನಾವರಣಗೊಳಿ ಸುತ್ತಿದ್ದ ಮಹಿಳೆಯರು, ಕಣ್ಣಾಯಿಸಿದಷ್ಟೂ ದೂರ ಕಾಣಿಸುತ್ತಿದ್ದ ಚಿತ್ತಾರದ ರಂಗೋಲಿ, ಈ ಕರ್ಣಮನೋಹರ ದೃಶ್ಯ ಕಂಡು ಬಂದಿದ್ದು ಯಲಹಂಕ ನಗರ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್ ನಲ್ಲಿ. ಮಹಿಳಾ ಮಣಿಗಳು ಬಿಡಿಸುತ್ತಿದ್ದ ಚಿತ್ತಾರದ ರಂಗೋಲಿ ಕಣ್ಮನ ಸೂರೆಗೊಳ್ಳುವಂತಿತ್ತು. ವಿವಿಧ ಬಣ್ಣಗಳ ರಂಗೋಲಿ ಚೆಲ್ಲಿ ಬಿಡಿಸಿದ್ಧ ಅಪ್ಪಟ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವಿಭಿನ್ನ ಮಾದರಿಯ ರಂಗೋಲಿ ಚಿತ್ರಗಳು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದವು.
ಯಲಹಂಕ ನಗರ ಮಂಡಲ ಬಿಜೆಪಿ ಆಶ್ರಯದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಮಾರ್ಗದರ್ಶನ ದಲ್ಲಿ ನಡೆದ ಸಂಕ್ರಾಂತಿ ರಂಗೋಲಿ ಸ್ಪರ್ಧೆಯ ನೇತೃತ್ವವನ್ನು ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ ಅವರು ವಹಿಸಿದ್ದರು. ಸಂಕ್ರಾಂತಿ ರಂಗೋಲಿ ಸ್ಪರ್ಧೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಮಹಿಳೆಯರಿಗೆ ಶಾಸಕ ಎಸ್ ಆರ್ ವಿಶ್ವನಾಥ್, ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್ ಅವರು ಬಹುಮಾನ ವಿತರಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪ್ರತಿ ಮಹಿಳೆಯರಿಗೂ ಬಿಜೆಪಿ ಮುಖಂಡ ವಿ.ವಿ.ರಾಮಮೂರ್ತಿ ಅವರ ವತಿಯಿಂದ ಸಮಾಧಾನಕರ ಬಹುಮಾನವಾಗಿ ಇಡ್ಲಿ ಕುಕ್ಕರ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಆರ್ ವಿಶ್ವನಾಥ್ ಅವರು ಮಾತನಾಡಿ ‘ಸಂಕ್ರಾಂತಿಯ ಹಬ್ಬದ ಪ್ರಯುಕ್ತ ಈ ರಂಗೋಲಿ ಸ್ಪರ್ಧೆಯನ್ನು ಆಯೋಜಿಸ ಲಾಗಿದ್ದು, ರಂಗೋಲಿ ನಮ್ಮ ಸಂಸ್ಕೃತಿ, ಪರಂಪರೆಯ ಮೂಲಸತ್ವವಾಗಿದ್ದು, ಮುಂಜಾನೆ ಎದ್ದು, ಮನೆಯ ಮುಂದೆ ಸರಣಿಯಿಂದ ಸಾರಿಸಿ ರಂಗೋಲಿ ಬಿಡಿಸುವುದನ್ನು ಅನಾದಿಕಾಲ ದಿಂದಲೂ ನಮ್ಮ ಮಹಿಳೆಯರು, ತಾಯಂದಿರು ಅವ್ಯಾಹತವಾಗಿ ಮುಂದುವರಿಸಿಕೊಂಡು ಬಂದಿದ್ದು, ಇಂತಹ ಸತ್ ಸಂಸ್ಕೃತಿ, ಪರಂಪರೆ ಯನ್ನು ಮುಂದುವರೆಸಿಕೊಂಡು ಹೋಗುವಂತಾಗಬೇಕು.
ಸಂಕ್ರಾಂತಿ ಹಬ್ಬವು ಕ್ಯಾಲೆಂಡರ್ ವರ್ಷದ ಭಾರತೀಯ ಪರಂಪರೆಯ ಪ್ರಥಮ ಹಬ್ಬವಾಗಿದ್ದು, ರೈತರು ಸುಗ್ಗಿಯ ಸಂಭ್ರಮವನ್ನು ಆಚರಿಸುವ ವಿಶೇಷ ಹಬ್ಬವಾಗಿದೆ. ಎತ್ತುಗಳನ್ನು ಸಿಂಗಾರ ಮಾಡಿ ಕಿಚ್ಚು ಹಾಯಿಸುವ, ಪರಸ್ಪರ ಎಳ್ಳು ಬೆಲ್ಲ ವಿತರಿಸಿ ಸಂಭ್ರಮಿಸುವ ಸಂಕ್ರಾಂತಿ ಹಬ್ಬದ ಆಚರಣೆಯೇ ಒಂದು ಆನಂದಮಯವಾದ ಅನುಭವ ನೀಡುತ್ತದೆ.
ಎಳ್ಳು ಜ್ಞಾನದ ಸಂಕೇತ, ಬೆಲ್ಲ ಪ್ರೀತಿಯ ಸಂಕೇತ, ಜ್ಞಾನ ಮತ್ತು ಪ್ರೀತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬದುಕಿನಲ್ಲಿ ಮುನ್ನಡೆಯುವ ಸಂದೇಶವನ್ನು ಸಂಕ್ರಾಂತಿ ಸಾರುತ್ತದೆ. ಸಂಕ್ರಾಂತಿ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸ ಪರ್ವಕಾಲವಾಗಿದ್ದು, ರಾತ್ರಿ ಕಡಿಮೆಯಾಗಿ ಹಗಲು ಹೆಚ್ಚಾಗುತ್ತದೆ. ಉತ್ತರಾಯಣ ಪುಣ್ಯಕಾಲ ಎಂದೇ ಕರೆಯುವ ಈ ಸಮಯದಲ್ಲಿ ಮರಣ ಹೊಂದುವವರಿಗೆ ನೇರವಾಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. ನಮ್ಮ ಭಾರತೀಯ ಪರಂಪರೆಯ ಪ್ರತಿ ಹಬ್ಬಕ್ಕೂ ವೈಜ್ಞಾನಿಕ ಹಿನ್ನೆಲೆಯಿದೆ, ನಮ್ಮ ಯಾವ ಹಬ್ಬಗಳೂ ಅವೈಜ್ಞಾನಿಕವಾದ ಶುಷ್ಕ ಆಚರಣೆಗಳಲ್ಲ ಪ್ರತಿ ಹಬ್ಬಕ್ಕೂ ವೈಜ್ಞಾನಿಕ ಹಿನ್ನೆಲೆಯಿದೆ. ಇಂತಹ ಅವಿಚ್ಛಿನ್ನ ಪರಂಪರೆ ಯನ್ನು ನಾವು ಕಾಪಾಡಿಕೊಂಡು ಮುಂದೆ ಸಾಗಬೇಕು ಎಂದರು.
ಸಂಕ್ರಾಂತಿ ರಂಗೋಲಿ ಸ್ಪರ್ಧೆಯ ಈ ಕಾರ್ಯಕ್ರಮದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿಗಳಾದ ವಿ.ಎಂ. ಈಶ್ವರ್, ವಿ.ಪವನ್ ಕುಮಾರ್, ಎಸ್ಸಿ ಮೋರ್ಚಾ ಅಧ್ಯಕ್ಷ ಕೆ.ಎಂ. ಮುರಳಿ, ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾ ವೀರೇಶ್, ಉಪಾಧ್ಯಕ್ಷೆ ರಮಾಮುನಿರಾಜು, ಬಿಜೆಪಿ ಮುಖಂಡರಾದ ವೈ.ವಿ. ಮುನಿರಾಜು, ಪುಟ್ಟೆನಹಳ್ಳಿ ಮುನಿರಾಜು, ದಾಮೋದರ್, ಧನಂಜಯ, ಗಿರೀಶ್, ಸಿ.ಆರ್.ಜನಾರ್ಧನ ಸೇರಿದಂತೆ ಇನ್ನಿತರರಿದ್ದರು.
