




ಬಿಎಂಎಸ್ಐಟಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ-ಸಮ್ಮಿಲನ ಕಾರ್ಯಕ್ರಮ :
ಯಲಹಂಕ : ಯಲಹಂಕದ ಬಿ.ಎಂ.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹ-ಸಮ್ಮಿಲನ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದ ಸುಮಾರು 450 ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ವ್ಯಾಸಂಗದ ದಿನಗಳ ಸಹಿಕ್ಷಣಗಳನ್ನು ಮೆಲುಕು ಹಾಕಿದರು. ವಿಶೇಷ ಅಥಿತಿಗಳಾಗಿ
ಕಾಲೇಜಿನ ಹಳೆಯ ವಿದ್ಯಾರ್ಥಿ ಎಐ/ಎಂಎಲ್ ಆಪ್ಟಮ್ ಸಂಸ್ಥೆಯ ನಿರ್ದೇಶಕರಾದ ಇಂದಿರಾ ಕೃಷ್ಣಮೂರ್ತಿ, ಎಎಂಡಿ ಸಂಸ್ಥೆಯ ಫೀಲ್ಡ್ ಅಪ್ಲಿಕೇಶನ್ ವ್ಯವಸ್ಥಾಪಕರಾದ ಆದಿತ್ಯ ಶಿವಜ್ಞಾನಮ್ ಆಗಮಿಸಿದ್ದುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಇಂದಿರಾ ಕೃಷ್ಣಮೂರ್ತಿ ಅವರು ಮಾತನಾಡಿ ‘ಬಿ.ಎಂ.ಎಸ್.ಐ.ಟಿ. ಕಾಲೇಜಿನಲ್ಲಿ ತಾವು ಪಡೆದ ಶಿಕ್ಷಕರ ಮಾರ್ಗದರ್ಶನ, ಶಿಸ್ತು ನಮ್ಮನ್ನು ಯಶಸ್ಸಿನತ್ತ ಸಾಗಲು ಬಹಳ ಸಹಕಾರಿಯಾಯಿತು. ಕಾಲೇಜಿನ ಏಳಿಗೆಗೆ ತಮ್ಮ ಸಹಕಾರ ಸದಾ ಇರುತ್ತದೆ, ಅಲ್ಲದೆ ಕ್ಯಾಂಪಸ್ ಸೆಲೆಕ್ಷನ್ ಮತ್ತು ಇಂಟರ್ನ್ ಶಿಪ್ ಗೆ ಸಂಬಂಧಿಸಿದಂತೆ ಸಹಕರಿಸುವುದಾಗಿ ತಿಳಿಸಿದರು.
ಮತ್ತೋರ್ವ ಹಳೆಯ ಯಶಸ್ವೀ ವಿದ್ಯಾರ್ಥಿ ಆದಿತ್ಯ ಶಿವಜ್ಞಾನಮ್ ಮಾತನಾಡಿ ‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಕೊಡುಗೆ ಅಪಾರ, ಸರಿಯಾದ ವಿದ್ಯೆ ಮತ್ತು ಮಾರ್ಗದರ್ಶನ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಎಂಬೆಡ್ಡೆಡ್ ಡಿಸೈನ್ ವಿಷಯಕ್ಕೆ ಸಂಬಂಧಿಸಿದಂತೆ ಬಿಎಂಎಸ್ ಸಂಸ್ಥೆಗೆ ಯಾವುದೇ ರೀತಿಯಲ್ಲಿ ಸಹಕರಿಸಲು ಸಿದ್ಧರಿರುವುದಾಗಿ ತಿಳಿಸಿದರು.
ಪ್ರಾಂಶುಪಾಲರಾದ ಡಾ.ಸಂಜಯ್ ಹೆಚ್.ಎ. ಮಾತನಾಡಿ ‘ಹಳೆಯ ವಿದ್ಯಾರ್ಥಿಗಳನ್ನು ಕರೆದು ಅವರ ಸಲಹೆ ಮತ್ತು ಅಭಿಪ್ರಾಯ ಸಂಗ್ರಹಿಸಿ ಅವರ ಸಹಕಾರದಿಂದ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಎಂಎಸ್ ವಿದ್ಯಾರ್ಥಿಗಳು ವಿಶ್ವದಾದ್ಯಂತ ಇದ್ದು, ಈ ರೀತಿಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅಮೇರಿಕಾದಲ್ಲಿ ಆಯೋಜಿಸಲು ಚಿಂತಿಸಲಾಗಿದ್ದು, ನಮ್ಮ ಹಳೆಯ ವಿದ್ಯಾರ್ಥಿಗಳ ಸಹಕಾರ ಇರುವಂತಾಬೇಕು, ಅಲ್ಲದೆ ಕಾಲೇಜಿನಲ್ಲಿ ಲಭ್ಯವಿರುವ ಇ-ಸ್ಟುಡಿಯೋ, ಎನ್.ಎ.ಬಿ.ಎಲ್. ಲೇಬರೇಟರಿ, ಇಂಕ್ಯುಬೇಷನ್ ಸೆಂಟರ್, ರಿಸರ್ಚ್ ಲೇಬರೇಟರಿ ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದು ಎಂದು ಹಳೆಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಮದಲ್ಲಿ ವಿವಿಧ ವಿಭಾಗಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
