ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ : ಹಾಲು ಉತ್ಪಾದಕರಿಗೆ ಸತೀಶ್ ಕಡತನಮಲೆ ಸಲಹೆ :

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕುರ್ಚಿ ವಿತರಣೆ :

ಯಲಹಂಕ : ಮನುಷ್ಯ ಬದುಕಿನ ಹಾದಿಯಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಪ್ರಯತ್ನ ನಿರತರಾಗಬೇಕು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರಿಗೆ ಸಲಹೆ ನೀಡಿದರು.

ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡಲಾಗಿರುವ ಒಂದು ಸಾವಿರ ಕುರ್ಚಿಗಳನ್ನು ಭಾನುವಾರ ವಿತರಣೆ ಮಾಡಿ ಮಾತನಾಡಿದ ಅವರು ‘ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಕರು ಪರಸ್ಪರ ಸಮನ್ವಯತೆ, ಸಲಹೆ, ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾ ಕಾರ್ಯನಿರ್ವಹಿಸಿದರೆ ಸಹಕಾರ ಸಂಘಗಳ ಪ್ರಗತಿಗೆ ಇಂಬು ನೀಡಿದಂತಾಗುತ್ತದೆ. ಬೆಂಗಳೂರು ಹಾಲು ಒಕ್ಕೂಟ ಕಳೆದ 80 ವರ್ಷಗಳ ಇತಿಹಾಸದಲ್ಲಿ ಲಾಭ ದಲ್ಲಿ ನಡೆದ ಉದಾಹರಣೆ ಗಳಿರಲಿಲ್ಲ ಆದರೆ ಈಗ ಇರುವ ಆಡಳಿತ ಮಂಡಳಿ ಸಮರ್ಥ ರೀತಿಯ ಆಡಳಿತ ವೈಖರಿ, ಅನವಶ್ಯಕ ವೆಚ್ಚಕ್ಕೆ ಕಡಿವಾಣ, ಬದ್ಧತೆಯ ಕಾರ್ಯನಿರ್ವಹಣೆ ಮುಂತಾದ ಸಕಾರಾತ್ಮಕ ಮನೋಭಾವದಿಂದಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು, ಉತ್ಪಾದನೆ ಮತ್ತು ಮಾರಾಟ ಎರಡರಲ್ಲೂ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಲಾಭಾಂಶವನ್ನು ಹಾಲು ಉತ್ಪಾದಕ ರೈತರಿಗೆ ಹಂಚುವುದು, ಹೈನು ಉತ್ಪಾದನೆಗೆ ಅಗತ್ಯವಿರುವ ಹೆಚ್ಚಿನ ಸೌಲಭ್ಯ, ಸವಲತ್ತುಗಳನ್ನು ನೀಡುವ ಮೂಲಕ ಹಾಲು ಉತ್ಪಾದಕರ ಪ್ರಗತಿಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ, ಹಾಲು ಉತ್ಪಾದಕರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಸದುಪಯೋಗ ಪಡೆಯುವ ಮೂಲಕ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಉತ್ತರ ವಿಭಾಗಕ್ಕೆ ಸೇರಿದ ಸುಮಾರು 50 ಸಹಕಾರ ಸಂಘಗಳಿಗೆ ತಲಾ 20ರಂತೆ ಒಂದು ಸಾವಿರ ಕುರ್ಚಿಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಅರಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಆರ್ ತಿಮ್ಮೇಗೌಡ ಶಿಬಿರ ಕಚೇರಿ ಅಧಿಕಾರಿ ಪ್ರಸನ್ನ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *