





















ನರೇಂದ್ರ ಮೋದಿ ಭಾರತದ ಪಾಲಿನ ಧುರಂಧರ್ : ಛಲವಾದಿ ನಾರಾಯಣಸ್ವಾಮಿ
ಬ್ಯಾಟರಾಯನಪುರದಲ್ಲಿ ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ :
ಬ್ಯಾಟರಾಯನಪುರ : ದೇಶದ ಅಭಿವೃದ್ಧಿ, ಆಡಳಿತ ವೖಖರಿ, ವಿದೇಶಾಂಗ ನೀತಿ ಹೀಗೆ ಎಲ್ಲಾ ಆಯಾಮಗಳಲ್ಲೂ ಮೋದಿಯವರು ದೇಶದ ಪಾಲಿನ ಧುರಂಧರ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ನವರ ಮೋದಿ ಸರಂಡರ್ ಟೀಕೆಗೆ ಟಾಂಗ್ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು ಮುಖ್ಯರಸ್ತೆಯ ಖಾಸಗಿ ಕನ್ವೆನ್ಷನ್ ಹಾಲ್ ನಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್ ಸಿ ತಮ್ಮೇಶ್ ಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆದ ‘ವಿಜಯ ಸಂಕಲ್ಪ ಕಾರ್ಯಕರ್ತರ ಸಭೆ’ ಹಾಗೂ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ ಅಮೇರಿಕಾ-ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳು ಇಂಧನ ಕೊರತೆ ಎದುರಿಸುತ್ತಿವೆ, ಇಂತಹ ವಿಕ್ಷಿಪ್ತ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇರಾನ್ ನೊಂದಿಗೆ ಅತ್ಯಂತ ಬುದ್ಧಿವಂತಿಕೆಯಿಂದ ಮಾತುಕತೆ ನಡೆಸಿ ದೇಶದಲ್ಲಿ ಇಂಧನ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಇದು ನರೇಂದ್ರ ಮೋದಿಯವರ ತಾಕತ್ತು ಮತ್ತು ದೇಶದ ಜನತೆಯ ಭವಿಷ್ಯದ ಬಗ್ಗೆ ಅವರಿಗಿರುವ ಅಪರಿಮಿತ ಕಾಳಜಿಯ ಧ್ಯೋತಕವಾಗಿದೆ. 60 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ದೇಶವನ್ನು ಅಭಿವೃದ್ಧಿ ಶೂನ್ಯತೆ, ಜಾಗತಿಕ ಮಟ್ಟದಲ್ಲಿ ನಗಣ್ಯತೆಯ ಶೂಲದಲ್ಲಿರಿಸಿದ್ದ ಕಾಂಗ್ರೆಸ್ ನವರ ನರೇಂದ್ರ ಮೋದಿ ಅವರು ಅಮೆರಿಕಾದ ಮುಂದೆ ಸರಂಡರ್ ಆಗಿದ್ದಾರೆ ಎಂಬ ಹೇಳಿಕೆ ಶುದ್ಧ ಹಾಸ್ಯಾಸ್ಪದ ಸಂಗತಿ, ಮೋದಿಯವರು ದೇಶದ ಆಡಳಿತ, ವಿದೇಶಾಂಗ ನೀತಿ, ಅಭಿವೃದ್ಧಿ, ಭವಿಷ್ಯ ಪ್ರಜ್ಞೆ ಹೀಗೆ ಎಲ್ಲಾ ಆಯಾಮಗಳಲ್ಲೂ ದೇಶದ ಜವಾಬ್ದಾರಿ ಹೊತ್ತಿರುವ ಧುರಂಧರ್ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆ ಕುಲಗೆಟ್ಟಿದ್ದು, ರಾಜ್ಯದ ಜನತೆ ಈ ಸರ್ಕಾರ ಯಾವಾಗ ತೊಲಗುತ್ತದೆಯೋ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲಲಿದ್ದು ರಾಜ್ಯದಲ್ಲಿ ಕಮಲ ಅರಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ ಎನ್ನುವುದಕ್ಕಿಂತ ಬಿಜೆಪಿಯವರ ಒಳ ಜಗಳದಿಂದಾಗಿ ಗೆಲ್ಲುತ್ತಿದೆ ಎಂಬುದು ವಾಸ್ತವಿಕ ಸಂಗತಿಯಾಗಿದೆ. ಮುಂದೆ ಈ ರೀತಿಯ ಬೆಳವಣಿಗೆಗಳಿಗೆ ಕಡಿವಾಣ ಹಾಕಿ, ಒಗ್ಗಟ್ಟು ಪ್ರದರ್ಶಿಸಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಕಾರ್ಯಕರ್ತರಿಗೆ ಈ ಮಾತು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಹೆಚ್ ಸಿ ತಮ್ಮೇಗೌಡ ಮಾತನಾಡಿ ‘ ರಾಜ್ಯ ಕಾಂಗ್ರೆಸ್ ಸರ್ಕಾರ ದುರಾಡಳಿತ, ಅಭಿವೃದ್ಧಿ ಶೂನ್ಯತೆ, ಜನವಿರೋಧಿ ನೀತಿ, ವರ್ಗಾವಣೆ ದಂದೆ ಯಂತಹ ವಿಲೋಮ ಗಳಿಂದಾಗಿ ಆಡಳಿತ ವೈಫಲ್ಯತೆ ಎದುರಿಸುತ್ತಿದ್ದು, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಸಮಯ ಕಾಯುತ್ತಿದ್ದಾರೆ. ವಿಶೇಷವಾಗಿ ಕಂದಾಯ ಇಲಾಖೆಯಲ್ಲಿ ಬಾಯಿ ಮಾತಿನ ಸುಧಾರಣೆಗಳು ಆಗುತ್ತಿವೆ ಹೊರತು ಇನ್ಯಾವ ವಿಶೇಷತೆಗಳು ಇಲ್ಲ. ಭ್ರಷ್ಟಾಚಾರ ಇಲಾಖೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ತಾಂಡವಾಡುತ್ತಿದೆ. ವರ್ಗಾವಣೆ ದಂಧೆ ಪರಿಮಿತಿ ಇಲ್ಲದೆ ನಡೆಯುತ್ತದೆ ಎಂದು ಆರೋಪಿಸಿದರು.
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ನಾನು ಬಿಜೆಪಿ ನಾನು ಮೋದಿ ಎಂಬ ಅಭಿಯಾನದ ಅಡಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ದೂರಾಡಳಿತ, ವೈಫಲ್ಯತೆಗಳ ಕುರಿತು ಜನ ಜಾಗೃತಿ ಮೂಡಿಸುವ ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸುವ ಬೃಹತ್ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಯುವ ಮುಖಂಡ ಪುನೀತ್ ಸೇರಿದಂತೆ ಅಮೃತಹಳ್ಳಿ, ಕೋಗಿಲು ಮತ್ತು ಕೆಂಪಾಪುರ ವಾರ್ಡ್ ಗಳ ನೂರಾರು ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣಮೂರ್ತಿ, ರಾಜಗೋಪಾಲ್, ದೀಪಕ್ ಕುಮಾರ್ , ವೆಂಕಟೇಶ್, ವಿಲ್ಸನ್ ರೆಡ್ಡಿ, ರಮೇಶ್, ಲೋಹಿತ್ ಗೌಡ, ಮುನಿಸ್ವಾಮಿ ಒಡೆಯರ್ (ಆನಂದ್ ಮಾಸ್ಟರ್), ಪೂರ್ಣಿಮಾ, ಆನಂದ ರೆಡ್ಡಿ ನರಸಿಂಹಮೂರ್ತಿ, ಶ್ರೀನಿವಾಸ ಜಯರಾಮ್, ಡಾ.ಯೋಗೀಶ್, ಉಮೇಶ್ ಸೇರಿದಂತೆ ವಿವಿಧ ವಾರ್ಡ್ ಗಳ ಅಧ್ಯಕ್ಷರು ಪದಾಧಿಕಾರಿಗಳಿದ್ದರು.
