ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ :

ಯಲಹಂಕ : ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ತಿಮ್ಮಬೋವಿಪಾಳ್ಯ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬೆಂಗಳೂರು ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ ಅವರು ಸೋಮವಾರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ ತಿಮ್ಮಬೋವಿಪಾಳ್ಯ ಗ್ರಾಮದಲ್ಲಿ ಇಂದು ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟಿಸಲಾಗಿದ್ದು, ಸದ್ಯಕ್ಕೆ ಸಹಕಾರ ಸಂಘ ಕಾರ್ಯ ನಿರ್ವಹಿಸಲು ಬಾಡಿಗೆ ಕಟ್ಟಡದ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಹಾಲಿನ ಉತ್ಪಾದನೆ, ಕಾರ್ಯಚಟುವಟಿಕೆಯನ್ನು ಗಮನಿಸಿ, ಸ್ವಂತ ಕಟ್ಟಡ ನಿರ್ಮಿಸುವ ದಿಸೆಯಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಹಕಾರ ಸಂಘದ ವ್ಯಾಪ್ತಿಯ ಹಾಲು ಉತ್ಪಾದಕರು ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಸಹಕಾರ ಸಂಘದ ಪ್ರಗತಿಗಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದ ಅವರು ಹೈನು ಉತ್ಪಾದಕರಿಗಾಗಿ ಕೇಂದ್ರ ಸರ್ಕಾರದಿಂದ ಇರುವ ಅನುದಾನ ಮತ್ತು ಸೌಲಭ್ಯಗಳು, ಅವುಗಳನ್ನು ಪಡೆಯುವ ವಿಧಾನ ಕುರಿತು ಮಾಹಿತಿ ನೀಡಿದರು.

ತಿಮ್ಮಬೋವಿಪಾಳ್ಯದಲ್ಲಿ ಹಲವು ವರ್ಷಗಳಿಂದ ಹಾಲಿನ ಡೇರಿ ಪ್ರಾರಂಭಿಸಲು ಅಡೆತಡೆಗಳಿದ್ದವು, ಒಕ್ಕೂಟದ ನಿರ್ದೇಶಕರ ಗಮನಕ್ಕೆ ತಂದ ಕೆಲವೇ ದಿನಗಳಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಗ್ರಾಮದ ಹಾಲು ಉತ್ಪಾದಕರು ಕೃತಜ್ಞತಾ ಪೂರ್ವಕ ಧನ್ಯವಾದ ತಿಳಿಸಿ, ಸನ್ಮಾನಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ತಿಮ್ಮಬೋವಿಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಸೇರಿದಂತೆ ದಾಸನಪುರ ಗ್ರಾ.ಪಂ. ಸದಸ್ಯರು, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *