








ಯಲಹಂಕದ ಮಾಂಡೋವಿ ಮೋಟಾರ್ಸ್ ಶೋ ರೂಮ್ ಗೆ ಗಿಲ್ಲಿ ನಟ ಭೇಟಿ :
ಬಿಗ್ ಬಾಸ್ ವಿಜೇತನಿಗೆ ವಿಕ್ಟೋರಿಸ್ ಕಾರು ಹಸ್ತಾಂತರ :
ಯಲಹಂಕ : ಬಿಗ್ ಬಾಸ್ ಸೀಸನ್-12ರ ವಿಜೇತ ಗಿಲ್ಲಿ ನಟ ಸೋಮವಾರ ಯಲಹಂಕದ ಮದರ್ ಡೈರಿ ಸಮೀಪವಿರುವ ಮಾಂಡೋವಿ ಮೋಟರ್ಸ್ ಶೋರೂಮ್ ಗೆ ಭೇಟಿ ನೀಡಿ, ಬಿಗ್ ಬಾಸ್ ಸೀಸನ್ 12ರ ವಿಜೇತರಿಗೆ ನೀಡಲಾಗಿದ್ದ ವಿಕ್ಟೋರಿಸ್ ಕಾರ್ ಅನ್ನು ಪಡೆದುಕೊಂಡರು.
ಮದ್ಯಾಹ್ನ 12 ಗಂಟೆಗೆ ಶೋ ರೂಮ್ ಗೆ ಭೇಟಿ ನೀಡಿದ ಗಿಲ್ಲಿ ನಟ ನನ್ನು ಮಾಂಡೋವಿ ಮೋಟಾರ್ಸ್‌ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ವಿವೇಕ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ನಡೆದ ಕಾರು ಹಸ್ತಾಂತರ ವಿಶೇಷ ಸಮಾರಂಭದಲ್ಲಿ ಉಪಾಧ್ಯಕ್ಷ ವಿವೇಕ್ ಅವರು ಬಿಗ್ ಬಾಸ್ ಸೀಸನ್-12ರ ವಿಜೇತರಿಗೆ ನೀಡಲು ಮೀಸಲಿರಿಸಿದ್ದ ವಿಕ್ಟೋರಿಸ್ ಕಾರನ್ನು ಗಿಲ್ಲಿ ನಟ ನಿಗೆ ಹಸ್ತಾಂತರ ಮಾಡಿದರು. ಗಿಲ್ಲಿ ನಟನ ಆಗಮನದ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕಿಕ್ಕಿರಿದು ನೆರೆದು ತಮ್ಮ ನೆಚ್ಚಿನ ನಟನಿಗೆ ಅಭಿಮಾನದ ಜೈಕಾರ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
ಇದೇ ವೇಳೆ ಮಾಂಡೋವಿ ಮೋಟರ್ಸ್ ನ ಉಪಾಧ್ಯಕ್ಷ ವಿವೇಕ್ ಅವರು ಮಾತನಾಡಿ ‘ಗಿಲ್ಲಿ ನಟ ಅವರನ್ನು ಸ್ವಾಗತಿಸಿದ್ದು ಸಂತೋಷ ಉಂಟು ಮಾಡಿದೆ. ಬಿಗ್ ಬಾಸ್ ವಿಜೇತರಾಗುವ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಗಿಲ್ಲಿ ನಟ ಅವರಿಗೆ ನಮ್ಮ ಸಂಸ್ಥೆಯ ಯಲಹಂಕದ ಶೋ ರೂಮ್ ನಲ್ಲಿ ಕಾರು ಹಸ್ತಾಂತರ ಮಾಡುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದರು.
ಇದೇ ವೇಳೆ ಗಿಲ್ಲಿ ನಟ ಅವರು ಮಾತನಾಡಿ ‘ಕಾರು ಸ್ವೀಕರಿಸಿರುವ ಈ ಕ್ಷಣ ಅಪೂರ್ವ ಕ್ಷಣವಾಗಿದೆ. ಬಿಗ್ ಬಾಸ್ ವಿಜೇತನಾದ ಅಂದಿನ ದಿನದ ಸಂತೋಷ ಮತ್ತು ಹರ್ಷವನ್ನು ಇನ್ನೊಮ್ಮೆ ಸ್ಮರಿಸಿಕೊಳ್ಳುವಂತೆ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಂಡೋವಿ ಮೋಟಾರ್ಸ್ ನ ಯಲಹಂಕ ಶೋರೂಮ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದರು.
