






ಯಲಹಂಕ : ಹಾಲು ಉತ್ಪಾದಕ ರೈತರು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್) ದಿಂದ ಸಿಗುವ ಸವಲತ್ತುಗಳು ಮತ್ತು ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಹಾಲು ಉತ್ಪಾದಕ ರೈತರಿಗೆ ಸಲಹೆ ನೀಡಿದರು.
ಯಲಹಂಕ ಕ್ಷೇತ್ರದ ಕಡತನಮಲೆ ಗ್ರಾಮದಲ್ಲಿ ಬಮೂಲ್ ನಿಂದ ನೀಡಲಾದ 14 ಲಕ್ಷ ವೆಚ್ಚದ ರಸಮೇವು ತಯಾರಿಕಾ ಯಂತ್ರ(ಸೈಲಿಂಗ್ ಮಷೀನ್)ವನ್ನು ಹಾಲು ಉತ್ಪಾದಕರಿಗೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ‘ಯುರೋಪ್ ದೇಶಗಳಲ್ಲಿ ಅಧಿಕ ಹಾಲು ಉತ್ಪಾದನೆ ಮತ್ತು ಹಾಲಿನ ಗುಣಮಟ್ಟ ಹೆಚ್ಚಾಗಿರಲು ಅವರು ರಾಸುಗಳಿಗೆ ನೀಡುವ ರಸಮೇವು ಪ್ರಮುಖ ಕಾರಣವಾಗಿದೆ. ಇದು ದುಬಾರಿ ವೆಚ್ಚ ಆಗಿರುವುದರಿಂದ ಹಾಲು ಉತ್ಪಾದಕರು ವೈಯಕ್ತಿಕವಾಗಿ ಖರೀದಿಸಲು ಕಷ್ಟ ಸಾಧ್ಯವಾಗುತ್ತದೆ ಇದನ್ನು ಮನಗಂಡು ನಮ್ಮ ರೈತರೂ ಸಹ ರಾಸುಗಳಿಗೆ ರಸಮೇವು ನೀಡುವ ಮೂಲಕ ಅಧಿಕ ಹಾಲು ಉತ್ಪಾದನೆ ಮತ್ತು ಹಾಲಿನ ಗುಣಮಟ್ಟ ಸುಧಾರಿಸಿಕೊಳ್ಳಲು ನೆರವಾಗಬೇಕು ಎಂಬ ದಿಸೆಯಲ್ಲಿ ಬಮೂಲ್ ನಿಂದ 14 ಲಕ್ಷ ರು. ವೆಚ್ಚದ ಹೊಸ ಸೈಲಿಂಗ್ ಮಷೀನ್ ಅನ್ನು ನೀಡಲಾಗಿದೆ. ಇದು ಹಾಲು ಉತ್ಪಾದಕರ ಬಹು ದಿನಗಳ ಬೇಡಿಕೆಯು ಸಹ ಆಗಿತ್ತು, ಇಂದು ಸೈಲಿಂಗ್ ಮಷೀನ್ ನೀಡುವ ಮೂಲಕ ರೈತರ ಬೇಡಿಕೆಯನ್ನು ಪೂರೈಸಲಾಗಿದೆ, ಹಾಲು ಉತ್ಪಾದಕ ರೈತರು ಬಮೂಲ್ ನಿಂದ ಸಿಗುವ ಇಂತಹ ಸವಲತ್ತುಗಳು ಮತ್ತು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ರಾಜನುಕುಂಟೆ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಪ್ರಸನ್ನ ವಿ.ಪಿ., ಅರಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಆರ್ ತಿಮ್ಮೇಗೌಡ, ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಂಜೇಗೌಡ, ವೆಂಕಟೇಶ್ ಮೂರ್ತಿ ಸೇರಿದಂತೆ ಹಾಲು ಉತ್ಪಾದಕ ರೈತರಿದ್ದರು.
